ವಿದ್ಯಾರ್ಥಿನಿಯೋರ್ವಳು ಹೈ ಕೋರ್ಟ್ ಮೆಟ್ಟಿಲೇರಿದ ಬಳಿಕ ತನಗೆ ಬರಬೇಕಿದ್ದ 1 ಅಂಕವನ್ನು ಪಡೆದುಕೊಂಡಿದ್ದಾಳೆ. ಹೈ ಕೋರ್ಟ್ ಆದೇಶದ ಬಳಿಕ ವಿದ್ಯಾರ್ಥಿನಿಗೆ ನ್ಯಾಯ ದೊರಕಿದೆ.
ಹೊಸನಗರ (ಜ.23): ಹೊಸನಗರ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇ.96 ಅಂಕ ಪಡೆದ ಎಚ್.ಆರ್.ಧಾರಿಣಿ ಅವರಿಗೆ ಲೆಕ್ಕಶಾಸ್ತ್ರದಲ್ಲಿ ಎಣಿಕೆ ತಪ್ಪಾಗಿರುವುದನ್ನು ಸರಿಪಡಿಸುವಂತೆ ರಾಜ್ಯ ಹೈಕೋರ್ಟ್ ಆದೇಶಿಸಿದ ಕಾರಣ ಪಿಯು ಬೋರ್ಡ್ ಎಣಿಕೆ ಸರಿಪಡಿಸಿ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನೀಡಿದೆ.
ನರೇಗಾ ಅಡಿ ಹಳ್ಳಿ ಶಾಲೆಗಳಿಗೆ ಮೂಲಸೌಕರ್ಯ: ಸುರೇಶ್ ಕುಮಾರ್ ..
ಕಳೆದ ಮಾಚ್‌ರ್‍ನಲ್ಲಿ ನಡೆದ ಪರೀಕ್ಷೆಯಲ್ಲಿ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನಿರೀಕ್ಷಿಸಿ 99 ಅಂಕ ಪಡೆದಿದ್ದ ಧಾರಿಣಿ ಒಂದು ಅಂಕ ಎಲ್ಲಿ ತಪ್ಪಾಗಿದೆ ನೋಡಬೇಕೆಂಬ ಕಾರಣಕ್ಕೆ ಹಣ ಕಟ್ಟಿಉತ್ತರ ಪತ್ರಿಕೆ ತರಿಸಿದ್ದಳು. ಉತ್ತರ ಪತ್ರಿಕೆ ನೋಡಿದಾಗ ಹೆಚ್ಚುವರಿ ಪ್ರಶ್ನೆಗಳಿಗೆ ಉತ್ತರ ಬರೆದರೆ ಹೆಚ್ಚು ಅಂಕ ಬಂದ ಉತ್ತರವನ್ನು ಪರಿಗಣಿಸಬೇಕೆಂಬ ನಿಯಮಕ್ಕೆ ಬದಲಾಗಿ ಕಡಿಮೆ ಅಂಕವನ್ನು ಪರಿಗಣಿಸಿದ ಪರಿಣಾಮ ನೂರರ ಬದಲು 99 ಅಂಕ ಬಂದಿತ್ತು.
ಇದನ್ನು ಉಲ್ಲೇಖಿಸಿ ಸರಿಪಡಿಸುವಂತೆ ಕಾಲೇಜಿನ ಮೂಲಕವೇ ಪಿಯು ಬೋರ್ಡ್‌ಗೆ ಮನವಿ ಮಾಡಲಾಗಿತ್ತು. ಎರಡನೇ ಬಾರಿ ನೂರರ ಬದಲು 88 ಅಂಕ ಬಂದಿತ್ತು. ಇದನ್ನು ನೋಡಿದಾಗ ಒಂದು ಉತ್ತರವನ್ನೇ ಪರಿಗಣಿಸದ ಕಾರಣ ಮತ್ತೆ ಪಿಯು ಬೋರ್ಡ್‌ಗೆ ಮನವಿ ಮಾಡಲಾಗಿತ್ತು. ಆಗಲೂ 88 ಅಂಕವೇ ಬಂತು. ಇದರ ಕುರಿತು ಕೇಳಿದಾಗ ಎರಡನೇ ಬಾರಿ ಮೂರು ಜನ ತಜ್ಞರು ಎಣಿಕೆ ಮಾಡಿದ್ದು, ಅದನ್ನು ಬದಲಾಯಿಸುವಂತಿಲ್ಲವೆಂಬ ಉತ್ತರ ಬಂತು. ತೀವ್ರ ಕೋವಿಡ್ ಆತಂಕದ ಆ ದಿನಗಳಲ್ಲೂ ವಾಹನ ಮಾಡಿಕೊಂಡು ಬೆಂಗಳೂರಿಗೆ ಹೋಗಿ ಪಿಯು ಬೋರ್ಡಿಗೆ ಸಂಬಂಧಿಸಿದ ಅಧಿಕಾರಿಗಳನ್ನೆಲ್ಲ ಭೇಟಿ ಆದರೂ, ಎರಡನೇ ಬಾರಿ ಎಣಿಕೆ ಮಾಡಿದ ನಂತರ ಮತ್ತೆ ಬದಲಾಯಿಸಲು ಕಾನೂನಿನಲ್ಲಿ ಅವಕಾಶ ಇಲ್ಲವೆಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಆಂಧ್ರದ ಸರ್ಕಾರಿ ಶಾಲೆಗಳಲ್ಲಿ ವಿಶೇಷ ಆ್ಯಪ್ ಬಳಕೆ ...
ಇದನ್ನು ಪ್ರಶ್ನಿಸಿ ಧಾರಿಣಿಯ ತಂದೆ ಹನಿಯ ರವಿಯವರು ರಾಜ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್ ಪೂರ್ಣ ಪರಿಶೀಲನೆಯ ನಂತರ ಎರಡು ವಾರಗಳೊಳಗೆ ಸರಿಪಡಿಸುವಂತೆ ಆದೇಶಿಸಿ ತಪ್ಪಿದ್ದಲ್ಲಿ ನಿಗದಿತ ದಿನದ ನಂತರ ವಾರಕ್ಕೆ ತಲಾ ಎರಡು ಸಾವಿರ ರು.ನಂತೆ ಅರ್ಜಿದಾರರಿಗೆ ದಂಡ ನೀಡಬೇಕೆಂದು ಆದೇಶಿಸಿತು.
ಈ ಪ್ರಕಾರ ಪಿಯು ಬೋರ್ಡ್ ಅಂಕವನ್ನು ಸರಿಪಡಿಸಿ ಧಾರಿಣಿಗೆ ಲೆಕ್ಕಶಾಸ್ತ್ರದಲ್ಲಿ ನೂರಕ್ಕೆ ನೂರು ಅಂಕ ನೀಡಿ ಹೊಸ ಅಂಕಪಟ್ಟಿನೀಡಲು ಅಣಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಧಾರಿಣಿ, ನ್ಯಾಯಾಲಯ ನ್ಯಾಯ ಒದಗಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿ ತನಗೆ ಅಂಕ ವ್ಯತ್ಯಾಸ ಆದುದಕ್ಕೆ ಬೇಸರವಿಲ್ಲ. ಆದರೆ, ಈ ರೀತಿ ಹೋರಾಟ ಮಾಡಲು ಸಾಧ್ಯವಾಗದ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವಂತಾಗಬೇಕೆಂದರು.
ಒಂದು ಅಂಕ ಮುಖ್ಯವಲ್ಲ, ಪ್ರತಿಭಾವಂತರಿಗೆ ಅನ್ಯಾಯ ತಪ್ಪಿಸಲು ಕೋರ್ಟ್ ಮೊರೆ
ವಿದ್ಯಾರ್ಥಿನಿ ತಂದೆ ಹಾಗೂ ಅರ್ಜಿದಾರರಾದ ಹನಿಯ ರವಿ ಪ್ರತಿಕ್ರಿಯಿಸಿ ‘ನನ್ನ ಮಗಳಿಗೆ ಅಂಕ ಹೆಚ್ಚು ಕಮ್ಮಿಯಾದರೆ ವಿದ್ಯಾಭ್ಯಾಸಕ್ಕೆ ಭಾರಿ ವ್ಯತ್ಯಾಸವೇನೂ ಆಗದು. ಆದರೆ, ತಪ್ಪನ್ನು ಸರಿಪಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂಬ ಅಧಿಕಾರಿಗಳ ಮಾತಿಗೋಸ್ಕರ ನ್ಯಾಯಾಲಯಕ್ಕೆ ಹೋಗಬೇಕಾಯಿತು. ಕೆಲವೇ ಕೆಲವು ಮೌಲ್ಯಮಾಪಕರ ಬೇಜವಾಬ್ದಾರಿಯಿಂದ ಎಷ್ಟೋ ಪ್ರತಿಭಾವಂತರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಲು ಸರ್ಕಾರ ಈಗಲಾದರೂ ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಬೇಕೆಂದರು’. ಅರ್ಜಿದಾರರ ಪರವಾಗಿ ಬಿ.ಎಸ್.ಪ್ರಸಾದ್ ಹನಿಯ ವಾದಿಸಿದ್ದರು.