ರೈತಾಪಿ ವರ್ಗದ ಸಂಕಷ್ಟಗಳನ್ನು ಪರಿಹರಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದ್ದೇವೆ. ಅದರೆ, ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ ಎಂದು ರೈತರು ದೂರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.22): ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ರದ್ದುಮಾಡಬೇಕು ಹಾಗೂ ವಿದ್ಯುಚ್ಛಕ್ತಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಬಾರದೆಂದು ಆಗ್ರಹಿಸಿ ರಾಜ್ಯರೈತ ಸಂಘ ಹಾಗೂ ಹಸಿರುಸೇವೆ ವತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ನರಗುಂದ, ನವಲಗುಂದ 40ನೇ ವರ್ಷದ ಹುತಾತ್ಮರ ದಿನಾಚರಣೆ ಅಂಗವಾಗಿ ಪ್ರತಿಭಟನೆ ನಡೆಸಿದ ರೈತ ಸಂಘದ ಪ್ರಮುಖರು, ರೈತರ ಮೇಲೆ ಅಮಾನುಷ ದೌರ್ಜನ್ಯದ ವಿರುದ್ಧ ರೈತ ಸಮುದಾಯ ಸಂಘಟಿತವಾಗಿ ಹೋರಾಟ ನಡೆಸುತ್ತಲೇ ಬಂದಿದೆ. ರೈತಾಪಿ ವರ್ಗದ ಸಂಕಷ್ಟಗಳನ್ನು ಪರಿಹರಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳನ್ನು ಒತ್ತಾಯಿಸಿದ್ದೇವೆ. ಅದರೆ, ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ ಎಂದು ದೂರಿದರು.
ರೈತರ ಪ್ರಮುಖ ಸಮಸ್ಯೆಗಳಾದ ಬೆಳೆಗಳಿಗೆ ನ್ಯಾಯಯುತ ಬೆಲೆ ದೊರಕಿಸಿಕೊಡುವುದು, ರೈತರ ಸಾಲ ಮನ್ನಾ, ಬೆಳೆ ವಿಮೆ, ಆತಿವೃಷ್ಟಿ-ಅನಾವೃಷ್ಟಿಗೆ ಒಳಗಾದ ರೈತರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡುವುದನ್ನು ಬಿಟ್ಟು, ರೈತರನ್ನೇ ಹತ್ತಿಕ್ಕಲು ಮುಂದಾಗಿವೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಘೋಷಣೆ ಮಾಡುತ್ತಿರುವ ಎಂಎಸ್‌ಪಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ. ಕೃಷಿ ಉತ್ಪನ್ನಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟವಾಗುತ್ತಿರುವುದರಿಂದ ರೈತರು ಆರ್ಥಿಕ ದಿವಾಳಿಗೆ ಗುರಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.
ಆತ್ಮನಿರ್ಭರ ಭಾರತ, ಯುವಾ ಬ್ರಿಗೇಡ್ Glocal India ನಂಬರ್ ಒನ್!
ಭೂಸ್ವಾಧೀನ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಸರ್ಕಾರ ವಿದ್ಯುತ್ ಉತ್ಪಾದನೆ - ವಿತರಣೆ ಖಾಸಗೀಕರಣ ಮಾಡಲು ಹೊರಟಿದೆ. ಕಾಯ್ದೆಗಳ ವಿರುದ್ಧ ರೈತರು, ಜನ ಸಾಮಾನ್ಯರು ಪ್ರತಿಭಟನೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಪಿಎಂಸಿ ಕಾಯ್ದೆ, ಭೂ ಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದನ್ನು ಹಿಂಪಡೆಯಬೇಕು. ವಿದ್ಯುತ್ ಉತ್ಪಾದನೆ ಮತ್ತು ವಿತರಣೆ ಖಾಸಗಿಕರಣ ಹಿಂಪಡೆಯಬೇಕು. ರಸಗೊಬ್ಬರ ಬೆಲೆ ಭಾರಿ ಏರಿಕೆಯಾಗಿದ್ದು, ಅರ್ಧದಷ್ಟುಬೆಲೆ ನಿಗದಿಪಡಿಸಬೇಕು. ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಬೇಕೆಂದು ಆಗ್ರಹಿಸಿದರು.
ರಾಜ್ಯ ರೈತ ಸಂಘದ ಮುಖಂಡರಾದ ಎಚ್.ಆರ್. ಬಸವರಾಜಪ್ಪ, ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಇ.ಬಿ. ಜಗದೀಶ್, ಈಶಣ್ಣ ಅರಬಿಳಚಿ, ಟಿ.ಎಚ್. ರಾಮಚಂದ್ರ, ಕೆ. ರಾಘವೇಂದ್ರ, ಎಸ್. ಶಿವಮೂರ್ತಿ, ಪಿ.ಡಿ. ಮಂಜಪ್ಪ, ಜಿ.ಎನ್. ಪಂಚಾಕ್ಷರಿ, ಸಿ. ಚಂದ್ರಪ್ಪ, ಚೇತನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.