ಆಗುಂಬೆಯಲ್ಲಿ 5 ವರ್ಷದ ಬಾಲಕಿ ಗ್ರೇಟ್‌ ಎಸ್ಕೇಪ್‌!

By Kannadaprabha News  |  First Published Feb 1, 2020, 7:44 AM IST

ಆಗುಂಬೆಯಲ್ಲಿ 5 ವರ್ಷದ ಬಾಲಕಿ ಗ್ರೇಟ್‌ ಎಸ್ಕೇಪ್‌!| ಘಾಟ್‌ನಲ್ಲಿ ರಾತ್ರಿ ವೇಳೆ ಟಿಟಿಯಿಂದ ಬಿದ್ದ ಬಾಲಕಿ| ಮತ್ತೊಂದು ಕಾರಿನವರಿಂದ ಪವಾಡಸದೃಶ ರಕ್ಷಣೆ| ಕೇರಳ, ತಮಿಳ್ನಾಡು ಪ್ರವಾಸದಿಂದ ಟಿಟಿಯಲ್ಲಿ ಮರಳುತ್ತಿದ್ದ ಚಿಕ್ಕಮಗಳೂರಿನ ಕುಟುಂಬ| ಆಗುಂಬೆ ಘಾಟಿಯಲ್ಲಿ ಎಲ್ಲರಿಗೂ ಗಾಢನಿದ್ರೆ. ಆಕಸ್ಮಿಕವಾಗಿ ಬಾಗಿಲು ತೆರೆದು ಬಿದ್ದ ಬಾಲಕಿ| ದಟ್ಟಾರಣ್ಯದ ರಸ್ತೆಯಲ್ಲಿ ಅಳುತ್ತಾ ನಿಂತಿದ್ದಾಗ ಹಿಂದಿನಿಂದ ಆಗಮಿಸಿದ ಮತ್ತೊಂದು ಕಾರು| ಮಗು ರಕ್ಷಿಸಿ ತೀರ್ಥಹಳ್ಳಿ ಪೊಲೀಸರಿಗೆ ನೀಡಿಕೆ. ಅತ್ತ ಮಗು ಇಲ್ಲದೆ ಟಿಟಿಯಲ್ಲಿದ್ದವರಿಗೆ ಗಾಬರಿ| ಹಿಂದೆ ಬಂದು ಚೆಕ್‌ಪೋಸ್ಟಲ್ಲಿ ವಿಚಾರಿಸಿದಾಗ ಠಾಣೆಗೆ ತೆರಳಲು ಸಲಹೆ, ಪ್ರಕರಣ ಸುಖಾಂತ್ಯ


ಶಿವಮೊಗ್ಗ[ಫೆ.01]: ಪಶ್ಚಿಮಘಟ್ಟದ ಅತ್ಯಂತ ಕಡಿದಾದ ಘಾಟ್‌ ಆಗಿರುವ ಆಗುಂಬೆ ಘಾಟ್‌ನಲ್ಲಿ ರಾತ್ರಿ ಚಲಿಸುತ್ತಿದ್ದ ಟೆಂಪೋ ಟ್ರಾವೆಲರ್‌ ವಾಹನದ (ಟಿಟಿ) ಬಾಗಿಲು ಆಕಸ್ಮಿಕವಾಗಿ ತೆರೆದುಕೊಂಡಿದ್ದರಿಂದ ರಸ್ತೆಗೆ ಬಿದ್ದ ಐದು ವರ್ಷದ ಬಾಲಕಿ ಪವಾಡವೆಂಬಂತೆ ಯಾವ ಗಾಯವೂ ಇಲ್ಲದೆ ಸುರಕ್ಷಿತವಾಗಿ ಮರಳಿ ಹೆತ್ತವರನ್ನು ಸೇರಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಮೂಲದ ಬೀನು ವರ್ಗೀಸ್‌ ಎಂಬವರ ಐದು ವರ್ಷದ ಪುತ್ರಿ ಆನ್ವಿ ಪಾರಾದ ಬಾಲಕಿ.

ಘಟನೆ ನಡೆದ ವೇಳೆ ಟೆಂಪೋ ಒಳಗಿದ್ದವರು ಗಾಢ ನಿದ್ರೆಗೆ ಜಾರಿದ್ದರಿಂದ ಬಾಲಕಿ ಕೆಳಗೆ ಬಿದ್ದದ್ದು ಗಮನಕ್ಕೆ ಬಂದಿರಲಿಲ್ಲ. ಅದೃಷ್ಟವಶಾತ್‌ ಆದೇರಸ್ತೆಯಲ್ಲಿ ಹಿಂದಿನಿಂದ ಬಂದ ಕಾರಿನಲ್ಲಿದ್ದವರಿಗೆ ಬಾಲಕಿ ಸಿಕ್ಕಿದ್ದು ಮಗು ಸುರಕ್ಷಿತವಾಗಿ ಪೋಷಕರ ಬಳಿ ತಲುಪಿದೆ. ಬಯಲುಸೀಮೆಯನ್ನು ಕರಾವಳಿಪ್ರದೇಶದೊಂದಿಗೆ ಬೆಸೆಯುವ ಈ ರಸ್ತೆ ಘಾಟ್‌ ರಸ್ತೆಗಳಲ್ಲೇ ಅತ್ಯಂತ ಕಡಿದಾಗಿದ್ದು ಗೊಂಡಾರಣ್ಯದೊಳಗೆ ಸಾಗುತ್ತದೆ. ಹಗಲಿನಲ್ಲಿಯೂ ಪ್ರಾಣಿಸಂಚಾರವಿರುವ ಈ ದಟ್ಟಕಾಡಿನ ರಸ್ತೆಯಲ್ಲಿ ರಾತ್ರಿ ಕಗ್ಗತ್ತಲ ವೇಳೆ ಸುಮಾರು 20 ನಿಮಿಷ ಸಿಲುಕಿಕೊಂಡ ಮಗುವೊಂದು ಪಾರಾಗಿರುವುದು ಅಚ್ಚರಿಗೆ ಕಾರಣವಾಗಿದೆ.

Tap to resize

Latest Videos

ಘಟನೆ ವಿವರ:

ಮೂಲತಃ ಎನ್‌.ಆರ್‌.ಪುರ ಮೂಲದ ಬೀನು ವರ್ಗೀಸ್‌ ಎಂಬುವವರ ಕುಟುಂಬ ಟೆಂಪೋ ಟ್ರಾವೆಲರ್‌(ಟಿಟಿ) ವಾಹನದಲ್ಲಿ ಕೇರಳ, ತಮಿಳುನಾಡು ಪ್ರವಾಸಕ್ಕೆ ತೆರಳಿದ್ದು, ಗುರುವಾರ ರಾತ್ರಿ ಟಿಟಿಯಲ್ಲಿ ತೀರ್ಥಹಳ್ಳಿ ಕಡೆಯಿಂದ ಬರುತ್ತಿದ್ದರು. ರಾತ್ರಿ ಸುಮಾರು ಒಂಬತ್ತೂವರೆ ಸಮಯದಲ್ಲಿ ವಾಹನದಲ್ಲಿದ್ದವರೆಲ್ಲರೂ ನಿದ್ರೆಗೆ ಜಾರಿದ್ದರು. ಘಾಟ್‌ನ 7ನೇ ತಿರುವಿನಲ್ಲಿ ಅಚಾನಕ್‌ ಹಿಂದಿನ ಬಾಗಿಲು ತೆರೆದುಕೊಂಡು ವಾಹನದ ಕೊನೆಯ ಸೀಟಿನಲ್ಲಿ ಮಲಗಿದ್ದ ವರ್ಗೀಸ್‌ ಅವರ ಮಗ​ಳು ಐದು ವರ್ಷದ ಆನ್ವಿ ವಾಹನದಿಂದ ಕೆಳಗೆ ಜಾರಿದ್ದಾಳೆ. ಆದರೆ ಇದು ಉಳಿದವರಿಗೆ ಇದು ಗಮನಕ್ಕೆ ಬಂದೇ ಇಲ್ಲ. ಟಿಟಿ ವಾಹನ ಹಾಗೆಯೇ ಮುಂದಕ್ಕೆ ಚಲಿಸಿದೆ.

ಹೆದ್ದಾರಿಗೆ ಜಾರಿಬಂದ ಹಿಮ, ದಿಕ್ಕಾಪಾಲಾಗಿ ಓಡಿದ ಪ್ರವಾಸಿಗರು!

ಇತ್ತ ಕೆಳಗೆ ಬಿದ್ದ ಮಗು ಅಳುತ್ತ ರಸ್ತೆ ಬದಿ ನಿಂತು ಕತ್ತಲಿನಲ್ಲಿ ಭಯದಿಂದ ಅಳುತ್ತಿತ್ತು. ಆ ವೇಳೆ ಇದೇ ಹಾದಿಯಲ್ಲಿ ಕಾರೊಂದು ಬಂದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದವರು ಈ ಮಗುವನ್ನು ಗಮನಿಸಿದ್ದಾರೆ. ತಕ್ಷಣ ಕಾರು ನಿಲ್ಲಿಸಿ ಅನಾಥವಾಗಿ ಅಳುತ್ತಿದ್ದ ಮಗುವನ್ನು ವಿಚಾರಿಸಿದ ಅವರು, ಸುರಕ್ಷಿತವಾಗಿ ತೀರ್ಥಹಳ್ಳಿಯ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ. ಇತ್ತ ಬೀನು ಕುಟುಂಬದವರಿವಿಗೆ ಕೊಪ್ಪ ಬಳಿ ತಲುಪುತ್ತಿದ್ದಂತೆ ವಾಹನದಲ್ಲಿ ಮಗು ಇಲ್ಲದಿರುವುದು ಅರಿವಿಗೆ ಬಂದಿದೆ. ಗಾಬರಿಗೊಂಡ ಅವರು ತಕ್ಷಣ ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಹುಡುಕುತ್ತ ವಾಪಸ್‌ ಮರಳಿದ್ದಾರೆ. ಆಗುಂಬೆ ಘಾಟಿಯ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ನಲ್ಲಿ ಮಗು ಕುರಿತು ಕೇಳಿದಾಗ, ಮಗು ಪೊಲೀಸ್‌ ಠಾಣೆಯಲ್ಲಿ ಇರುವ ಕುರಿತು ಮಾಹಿತಿ ನೀಡಿದ್ದಾರೆ. ಕೊನೆಗೆ ಪೋಷಕರು ತೀರ್ಥಹಳ್ಳಿ ಪೊಲೀಸ್‌ ಠಾಣೆಗೆ ಹೋಗಿ ಮಗುವನ್ನು ಪಡೆದಿದ್ದಾರೆ.

ದಟ್ಟಾರಣ್ಯದಲ್ಲಿ ಜೀಪಿಂದ ಬಿದ್ದರೂ ಅಂಬೆಗಾಲಿಟ್ಟು ಬಂದ ಮಗು!

click me!