ದಟ್ಟಾರಣ್ಯದಲ್ಲಿ ಜೀಪಿಂದ ಬಿದ್ದರೂ ಅಂಬೆಗಾಲಿಟ್ಟು ಬಂದ ಮಗು!
ದಟ್ಟಾರಣ್ಯದಲ್ಲಿ ಜೀಪಿಂದ ಬಿದ್ದರೂ ಬದುಕಿತು ಮಗು!| ತೆವಳಿಕೊಂಡು ರಸ್ತೆ ದಾಟಿದ ಮಗು ರಕ್ಷಿಸಿದ ಅರಣ್ಯ ಸಿಬ್ಬಂದಿ
ಇಡುಕ್ಕಿ[ಸೆ.10]: ಆಯುಷ್ಯ ಗಟ್ಟಿಇದ್ದರೆ ಯಮನೂ ಹತ್ತಿರ ಸುಳಿಯಲಾರ ಎನ್ನುವುದಕ್ಕೆ ಈ ಘಟನೆ ಒಂದು ನೈಜ ಉದಾಹರಣೆ. ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್ ಪ್ರದೇಶದ ದಟ್ಟಅರಣ್ಯದ ಮಧ್ಯೆ ಹೋಗುತ್ತಿದ್ದಾಗ ಜೀಪ್‌ನಿಂದ ಬಿದ್ದ ಮಗುವೊಂದು ಪವಾಡ ಸದೃಶ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದೆ.
ಕಂಬಲಿಕ್ಕಂಡಂ ಗ್ರಾಮದ ಕುಟುಂಬವೊಂದು ಪಳನಿ ದೇವಾಲಯಕ್ಕೆ ಭೇಟಿ ನೀಡಿ ಮನೆಗೆ ಮರಳುತ್ತಿತ್ತು. ರಾತ್ರಿಯಾಗಿದ್ದರಿಂದ ಪೋಷಕರು ನಿದ್ದೆಗೆ ಜಾರಿದ್ದರು. ಈ ವೇಳೆ ತಾಯಿಯ ತೊಡೆಯ ಮೇಲೆ ಕುಳಿತಿದ್ದ ಮಗು ರಾಜಮಾಲಾ ಚೆಕ್‌ಪೋಸ್ಟ್ ಸಮೀಪ ಪೋಷಕರ ಕೈಜಾರಿ ಜೀಪಿನಿಂದ ಕೆಳಕ್ಕೆ ಬಿದ್ದಿತ್ತು. ಅದೃಷ್ಟವಶಾತ್ ಮಗು ಸಣ್ಣಪುಟ್ಟಗಾಯಗಳಿಂದ ಪಾರಾಗಿದೆ. ಸ್ವಲ್ಪ ಸಮಯದ ಬಳಿಕ ಆ ಮಗು ತೆವಳಿಕೊಂಡು ರಸ್ತೆಯನ್ನು ದಾಟಿ ಸುರಕ್ಷಿತ ಸ್ಥಳವನ್ನು ತಲುಪಿದೆ. ಮಗುವಿನ ಅಳುವನ್ನು ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಪ್ರದೇಶ ಆನೆ ಸೇರಿದಂತೆ ಕಾಡು ಪ್ರಾಣಿಗಳು ಓಡಾಡುವ ಸ್ಥಳವಾಗಿದ್ದು, ಮಗುವನ್ನು ರಕ್ಷಿಸಲು ಸ್ವಲ್ಪ ವಿಳಂಬವಾಗಿದ್ದರೂ ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುವ ಅಪಾಯ ಇತ್ತು.
ಇನ್ನೊಂದೆಡೆ ಮಗು ನೆಲಕ್ಕೆ ಬಿದ್ದಿದ್ದು ಅರಿವೇ ಇಲ್ಲದ ಪೋಷಕರು ಅದಾಗಲೇ ಹಲವಾರು ಕಿ.ಮೀ. ಮುಂದೆ ಸಾಗಿದ್ದರು. ಬಳಿಕ ನಿದ್ದೆಯಿಂದ ಎಚ್ಚರಾದಾಗ ಮಗು ಇಲ್ಲದೇ ಇದ್ದಿದ್ದು ಅರಿವಾಗಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಮಗು ಸುರಕ್ಷಿತವಾಗಿರುವ ವಿಷಯ ತಿಳಿದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಕೆಲವೊಂದು ಔಪಚಾರಿಕ ಪ್ರಕ್ರಿಯೆ ಬಳಿಕ ಸೋಮವಾರ ನಸುಕಿನ ಜಾವ 1.30ರ ವೇಳೆಗೆ ಮಗು ಪೋಷಕರ ಕೈ ಸೇರಿದೆ.
ವಿಡಿಯೋ ವೈರಲ್:
ಚಲಿಸುತ್ತಿದ್ದ ಜೀಪಿನಿಂದ ಬಿದ್ದ ಮಗು ತೆವಳಿಕೊಂಡು ರಸ್ತೆ ದಾಟುವ ದೃಶ್ಯ ಚೆಕ್‌ಪೋಸ್ಟ್ ಬಳಿ ಅಳವಡಿಸಿದ್ದ ಸಿಸಿ ಟೀವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.