ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಂತೆ ಹಂಚಿಕೆಯಾಗಿರುವ ನೀರು ಬಳಕೆಗೆ ಅವಕಾಶ ನೀಡುವಂತೆ ಸುಪ್ರೀಂನಲ್ಲಿ ನಾನೇ ದಾವೆ ಹೂಡುತ್ತೇನೆ| ಯಲಬುರ್ಗಾದಲ್ಲಿ ಕೃಷ್ಣಾ ಯೋಜನೆ ಕುರಿತು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಘೋಷಣೆ|
ಕೊಪ್ಪಳ(ಫೆ.01): ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಂತೆ ಹಂಚಿಕೆಯಾಗಿರುವ ನೀರು ಬಳಕೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟಿನಲ್ಲಿ ನಾನೇ ವೈಯಕ್ತಿಕವಾಗಿ ದಾವೆಯೊಂದನ್ನು ಹೂಡುತ್ತೇನೆ ಮತ್ತು ನಾನೇ ವಾದ ಮಂಡನೆ ಮಾಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.
ಯಲಬುರ್ಗಾದ ತಮ್ಮ ನಿವಾಸದಲ್ಲಿ ಶುಕ್ರವಾರ ಕೃಷ್ಣಾ ಬಿ ಸ್ಕೀಂ ಯೋಜನೆಗಳ ವಸ್ತುಸ್ಥಿತಿ ಮತ್ತು ಸತ್ಯಾಂಶ ಎನ್ನುವ ತಾವೇ ರಚಿಸಿದ ಪುಸ್ತಕನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಫೆ. 8ರಂದು ಸುಪ್ರೀಂ ಕೋರ್ಟಿನಲ್ಲಿ ವೈಯಕ್ತಿಕವಾಗಿ ಅರ್ಜಿಯನ್ನು ಸಲ್ಲಿಸಲಿದ್ದು, ಉತ್ತರ ಕರ್ನಾಟಕದ ಜನರ ಪಾಲಿಗೆ ಅಗತ್ಯವಾಗಿರುವ ಕೃಷ್ಣಾ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕಾಗಿ ಕಾನೂನು ಹೋರಾಟವನ್ನು ಪ್ರಾರಂಭಿಸುವುದಾಗಿ ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಂಧ್ರ ಮತ್ತು ತೆಲಂಗಾಣ ರಾಜ್ಯದವರು ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿರುವುದುರಿಂದ ಕೃಷ್ಣಾ ನ್ಯಾಯಾಧಿಕರಣದಂತೆ ಹಂಚಿಕೆಯಾದ ನೀರನ್ನು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾಶ ಇಲ್ಲದಂತೆ ಆಗಿದೆ. ಇದನ್ನು ತೆರವು ಮಾಡುವ ಪ್ರಯತ್ನನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ.
ನಾಲ್ಕು ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆದು, ಸಮಸ್ಯೆಯನ್ನು ಇತ್ಯರ್ಥ ಮಾಡುವ ದಿಸೆಯಲ್ಲಿ ಕೇಂದ್ರ ಮುಂದಾಗುತ್ತಿಲ್ಲ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ನೀರಾವರಿ ಪ್ರಗತಿಗಾಗಿ ಈಗಾಗಲೇ ಹಂಚಿಕೆಯಾಗಿರುವ ನೀರನ್ನು ಬಳಕೆ ಮಾಡಿಕೊಳ್ಳುವಂತಾಗಬೇಕಾಗಿದೆ. ಇದಕ್ಕಾಗಿ ನಾನು ದಾವೆಯನ್ನು ಹೂಡುವುದು ಅಲ್ಲದೆ ವಾದವನ್ನು ಮಂಡನೆ ಮಾಡುತ್ತೇನೆ. ಈಗಾಗಲೇ ಈ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ವೃತ್ತಿ ಮಾಡುತ್ತಿರುವ ನನ್ನ ಸ್ನೇಹಿತರೊಂದಿಗೆ ಚರ್ಚೆ ಮಾಡಿದ್ದು, ಫೆ. 8ರಂದೇ ಅರ್ಜಿಯನ್ನು ಸಲ್ಲಿಸುತ್ತೇನೆ, ಫೆ. 19ರಂದು ಆಂಧ್ರ ಮತ್ತು ತೆಲಂಗಾಣ ತಕರಾರು ಅರ್ಜಿಯ ವಿಚಾರಣೆಯೂ ಬರಲಿದೆ. ಆದರೆ, ಈ ಹಿಂದೆ ಅನೇಕ ಬಾರಿ ವಿಚಾರಣೆಗೆ ಬಂದಿದ್ದರೂ ಮುಂದೂಡಲಾಗಿದೆ ಎಂದರು.