ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದರಿಂದಾಗಿ ತೀವ್ರ ಆತಂಕ ಉಂಟು ಮಾಡಿದ್ದ ಪ್ರಕರಣ ಠುಸ್ ಆಗಿದ್ದರಿಂದ ಎಲ್ಲರಲ್ಲೂ ನಿರಾಳಭಾವ ಸೃಷ್ಟಿಯಾಗಿದೆ.
ಶಿವಮೊಗ್ಗ(ನ.07): ನಗರದ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾದ ಎರಡು ಅನುಮಾನಾಸ್ಪದ ಬಾಕ್ಸ್‌ಗಳಲ್ಲಿ ಯಾವುದೇ ಅಪಾಯಕಾರಿ ಸ್ಫೋಟಕ ವಸ್ತುಗಳು ಇರಲಿಲ್ಲ. ಬದಲಾಗಿ ಟೇಬಲ್ ಸಾಲ್ಟ್, ಬಿಳಿ ಪೌಡರ್, ನ್ಯೂಸ್ ಪೇಪರ್ ಮತ್ತು ತ್ಯಾಜ್ಯವಸ್ತು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇದರಿಂದಾಗಿ ತೀವ್ರ ಆತಂಕ ಉಂಟು ಮಾಡಿದ್ದ ಪ್ರಕರಣ ಠುಸ್ ಆಗಿದ್ದರಿಂದ ಎಲ್ಲರಲ್ಲೂ ನಿರಾಳಭಾವ ಸೃಷ್ಟಿಯಾಗಿದೆ.
ಮೇಡ್ ಇನ್ ಬಾಂಗ್ಲಾದೇಶ:
undefined
ವಾರಸುದಾರರಿಲ್ಲದ ಬಾಕ್ಸ್ ಗಳ ಕುರಿತು ರೈಲ್ವೆ ನಿಲ್ದಾಣದ ಆಟೋ ಚಾಲಕರು ಭಾನುವಾರ ಬೆಳಗ್ಗೆ 11 ಗಂಟೆಗೆ ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೇಡ್ ಇನ್ ಬಾಂಗ್ಲಾದೇಶ ಎಂದು ಬಾಕ್ಸ್ ಮೇಲೆ ಬರೆದಿದ್ದರಿಂದ ಆತಂಕ ಉಂಟಾಗಿತ್ತು. ಪೊಲೀಸ್ ಸಿಬ್ಬಂದಿ, ಜಿಲ್ಲಾ ಪೊಲೀಸ್ ಇಲಾಖೆಯ ಡಾಗ್ ಸ್ಕ್ವಾಡ್, ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಅನುಮಾನಾಸ್ಪದ ಬಾಕ್ಸ್ ಸುತ್ತಲು 250ಕ್ಕೂ ಹೆಚ್ಚು ಮರಳಿನ ಮೂಟೆಗಳನ್ನು ಇರಿಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು.
ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ 2 ಅನುಮಾನಾಸ್ಪದ ಬಾಕ್ಸ್‌ಗಳು ಪತ್ತೆ; ಸ್ಫೋಟಕ ಇರುವ ಶಂಕೆ
ಈ ವೇಳೆ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರ ನಿಯಂತ್ರಣಕ್ಕಾಗಿ ಬಾಕ್ಸ್‌ಗಳಿದ್ದ ಸ್ಥಳದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಬ್ಯಾರಿಕೇಡ್ ಹಾಕಲಾಯಿತು. ಪೊಲೀಸ್ ಸಿಬ್ಬಂದಿಯನ್ನೂ ನಿಯೋಜನೆ ಮಾಡಲಾಯಿತು. ಹೆಚ್ಚಿನ ತನಿಖೆಗೆ ಬೆಂಗಳೂರಿನ ಬಾಂಬ್ ಸ್ಕ್ವಾಡ್‌ಗೆ ಮಾಹಿತಿ ರವಾನಿಸಿದ್ದರು. ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ತಲುಪುವ ಹೊತ್ತಿಗೆ ರಾತ್ರಿ 8.30 ಗಂಟೆಯಾಗಿತ್ತು. ಕಾರ್ಯಾಚರಣೆ ಆರಂಭಿಸಿ ಸುಮಾರು 5 ಗಂಟೆಗಳ ಎಲ್ಲ ರೀತಿಯ ಪರೀಕ್ಷೆ ನಡೆಸಿದರು. ಒಳಗೆ ಯಾವುದೇ ಅಪಾಯಕಾರಿ ಸ್ಫೋಟಕ ಇಲ್ಲ ಎಂದು ಖಚಿತವಾದ ಬಳಿಕ ಬೀಗ ಒಡೆಯಲು ಯತ್ನಿಸಿದರು. ಅದು ಸಾಧ್ಯವಾಗದಾಗ ಚಿಕ್ಕ ಸ್ಫೋಟಕ ಬಳಸಿ ಮೊದಲ ಬಾಕ್ಸ್ ತೆರೆಯಲಾಯಿತು. ಬಳಿಕವೂ ಅಲ್ಲಿನ ವಸ್ತುಗಳ ಮೇಲೆ ನಾಲ್ಕು ವಿವಿಧ ಬಗೆಯ ಪರೀಕ್ಷೆ ಮಾಡಿ, ಬಾಕ್ಸ್ ಒಳಗಿರುವುದು ಸ್ಫೋಟಕ ಸಾಮಗ್ರಿಯಲ್ಲ ಎಂದು ಖಾತ್ರಿಯಾದ ಬಳಿಕ ಇನ್ನೊಂದು ಬಾಕ್ಸ್ ಅನ್ನು ಸಹ ತೆರೆಯಲಾಯಿತು.
ಅದರಲ್ಲಿ ಕೂಡ ಕೆಲವು ಟೇಬಲ್ ಸಾಲ್ಟ್, ಬಿಳಿ ಬಣ್ಣದ ಪುಡಿ, ನ್ಯೂಸ್ ಪೇಪರ್ ಮತ್ತು ತ್ಯಾಜ್ಯ ವಸ್ತುವಿನ ಪ್ಯಾಕೆಟ್ ದೊರೆಯಿತು. ಟ್ರಂಕ್ ಮತ್ತು ಅದರಲ್ಲಿ ಬಿಳಿ ಬಣ್ಣದ ಪೌಡರ್ ಇರುವ ಚೀಲಗಳನ್ನು ಬಾಂಬ್ ನಿಷ್ಕ್ರಿಯ ದಳ ವಶಕ್ಕೆ ಪಡೆದು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.
ಕಾರ್ಯಾಚರಣೆಗೆ ಮಳೆ ಅಡ್ಡಿ:
ಬಾಂಬ್ ಸ್ಕ್ವಾಡ್ ಸಿಬ್ಬಂದಿ ಕಾರ್ಯಾಚರಣೆ ಮಳೆ ತೀವ್ರ ಅಡ್ಡಿ ಉಂಟುಮಾಡಿತು. ರಾತ್ರಿ ಕಾರ್ಯಾಚರಣೆ ಆರಂಭ ಆಗುತ್ತಿದ್ದಂತೆ ಅಬ್ಬರ ಶುರುಮಾಡಿದ ಮಳೆ, ಬೆಳಗಿನ ಜಾವದ ತನಕ ಸುರಿಯಿತು. ಮಳೆಯಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಯಿತು. ಈ ಹಿನ್ನೆಲೆಯಲ್ಲಿ ಬಾಕ್ಸ್‌ಗಳ ರಕ್ಷಣೆಗೆ ಪೊಲೀಸ್ ಇಲಾಖೆ ದೊಡ್ಡ ಛತ್ರಿಯೊಂದರ ವ್ಯವಸ್ಥೆ ಮಾಡಬೇಕಾಯಿತು.
ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಪರದಾಟ:
ರೈಲು ಇಳಿದು ಬಂದ ಪ್ರಯಾಣಿಕರು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ವಾಹನ ಕೊಂಡೊಯ್ಯಲು ಪರದಾಡುವಂತಾಯಿತು. ಪಾರ್ಕಿಂಗ್ ಸ್ಥಳಕ್ಕೆ ಹೋಗುವ ರಸ್ತೆಯಲ್ಲೇ ಬಾಕ್ಸ್ ಇದ್ದಿದ್ದರಿಂದ ಜನರ ಓಡಾಟ ನಿರ್ಬಂಧಿಸಲಾಗಿತ್ತು. ಜನ ಕೆಇಬಿ ಸರ್ಕಲ್‌ಗೆ ಹೋಗಿ ಪಕ್ಕದ ರಸ್ತೆಯ ಮೂಲಕ ಪಾರ್ಕಿಂಗ್ ಸ್ಥಳಕ್ಕೆ ತಲುಪಬೇಕಾಗಿತ್ತು.
ಪೌಡರ್‌ನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು: ಚನ್ನಬಸಪ್ಪ
ಶಿವಮೊಗ್ಗ: ಅನಾಮಾಧೇಯ ಎರಡು ಪೆಟ್ಟಿಗೆಯಲ್ಲಿ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ಬದಲಾಗಿ ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ದೇವರು ದೊಡ್ಡವನು, ಯಾವುದೇ ಅನಾಹುತ ಆಗಿಲ್ಲ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಂಬ್ ಸ್ಕ್ವಾಡ್ ಬಂದ ನಂತರ ಏನಿದೆ ಅಂತಾ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು. ಬೀಗ ಒಡೆಯಲು ಸ್ಫೋಟ ಮಾಡಿದರು. ಒಂದೊಂದು ಟ್ರಂಕ್‌ನಲ್ಲಿ ಎರಡೆರಡು ಬ್ಯಾಗ್ ಪೇಪರ್ ಹಾಕಿ ಕವರ್ ಮಾಡಿದ್ದಾರೆ.
ಶಿವಮೊಗ್ಗದ ಡೈನಾಮಿಕ್ ಲೇಡಿ ಕೆಎಎಸ್ ಆಫೀಸರ್ ಪ್ರತಿಮಾಳನ್ನು ಬೆಂಗಳೂರಲ್ಲಿ ಕತ್ತು ಸೀಳಿದ ದುಷ್ಕರ್ಮಿಗಳು!
ಬಿಳಿ ಬಣ್ಣದ ಪೌಡರ್ ಪತ್ತೆಯಾಗಿದೆ. ಇದು ಮುಖಕ್ಕೆ ಹಚ್ಚುವ ಪೌಡರ್ ಅಂತೂ ಅಲ್ಲ, ಬೇರೆ ಯಾವ ಪೌಡರ್ ಎಂಬ ಬಗ್ಗೆ ರಿಪೋರ್ಟ್ ಬರಬೇಕು. ಇದು ಗಂಭೀರವಾದ ಸಂಗತಿಯಾಗಿದ್ದು, ಬಹಳ ಎಚ್ಚರಿಕೆ ವಹಿಸಬೇಕು. ರಾಜ್ಯ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಸಂಬಂಧಿಸಿದಂತೆ ಇಬ್ಬರು ಸಿಕ್ಕಿದ್ದಾರೆ. ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪೆಟ್ಟಿಗೆ ವಿಚಾರದ ಬಗ್ಗೆ ಸತ್ಯ ಸಂಗತಿ ಹೊರ ಬರಬೇಕು. ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಇದನ್ನು ಮುಚ್ಚಿ ಹಾಕುವ ಪ್ರಯತ್ನ ಆಗಬಾರದು ಎಂದು ಹೇಳಿದರು.