ರಾಜಹಂಸಗಡ ಶಿವಾಜಿ ಮಹಾರಾಜರ ಪ್ರತಿಮೆ: ಪಾಟೀಲ್ - ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ 'ದಾಖಲೆ' ದಂಗಲ್!

By Suvarna News  |  First Published Feb 21, 2023, 5:00 PM IST

ರಾಜಹಂಸಗಡ ಕೋಟೆ ಅಭಿವೃದ್ಧಿ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅನುದಾನ ತಂದಿದ್ಯಾರು? ಸಂಜಯ್ ಪಾಟೀಲ್ - ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ 'ದಾಖಲೆ' ಸಮರ. ದಾಖಲೆ ಸಹಿತ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಚನ್ನರಾಜ ಹಟ್ಟಿಹೊಳಿ.
 


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, 

ಬೆಳಗಾವಿ (ಫೆ.21): ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಏರುತ್ತಿದೆ. ರಾಜಕೀಯ ಬದ್ಧವೈರಿಗಳಾದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ಮಧ್ಯೆ ಕಾದಾಟವೂ ಜೋರಾಗಿದೆ. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಮರಾಠಾ ಸಮುದಾಯ ಸೆಳೆಯಲು ಉಭಯ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಪೈಪೋಟಿಗೆ ಬಿದ್ದಿವೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇರುವಂತಹ ಐತಿಹಾಸಿಕ ರಾಜಹಂಸಗಡ ಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಕ್ರೆಡಿಟ್ ಫೈಟ್ ನಡೆದಿದೆ. ಮಾರ್ಚ್ 5ರಂದು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ಮಾಡುತ್ತಿದ್ದು ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕರ್ನಾಟಕ ಮಹಾರಾಷ್ಟ್ರದ ಹಲವು ಕಾಂಗ್ರೆಸ್ ನಾಯಕರು ಆಗಮಿಸಲಿದ್ದಾರೆಂದು ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ ವಿಚಾರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿ ಬಿಜೆಪಿ ನಾಯಕರು ಕೆರಳುವಂತೆ ಮಾಡಿತ್ತು. ರಾಜಹಂಸಗಡ ಕೋಟೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಭೇಟಿ ನೀಡಿದ ವೇಳೆ ದಾಖಲಾತಿ ಬಿಡುಗಡೆ ಮಾಡಿದ್ದ ಸಂಜಯ್ ಪಾಟೀಲ್ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮುಗಿಬಿದ್ದಿದ್ದರು. 

Tap to resize

Latest Videos

ರಾಜಹಂಸಗಡ ಕೋಟೆ ಅಭಿವೃದ್ಧಿ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ನನ್ನ ಕನಸಿನ ಯೋಜನೆ ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುತ್ತಾರೆ. ಆದ್ರೆ ಇದು ತನ್ನ ಕನಸಿನ ಕೂಸು ರಾಜಹಂಸಗಡ ಕೋಟೆ ಅಭಿವೃದ್ಧಿಗೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆಗೆ ಅನುದಾನ ತಂದಿದ್ದು ನಾನು ಎಂದು ಮಾಜಿ ಶಾಸಕ ಸಂಜಯ್ ಪಾಟೀಲ್ ದಾಖಲೆ ಬಿಡುಗಡೆ ಮಾಡಿದ್ದರು. ಅಲ್ಲದೇ ತಾವು ಅನುದಾನ ತಂದಿದ್ದೀರಿ ಎಂಬುದಕ್ಕೆ ತಮ್ಮ ಬಳಿ ದಾಖಲೆ ಇದ್ದರೆ ತೋರಿಸಿ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಮಾಜಿ ಶಾಸಕ ಸಂಜಯ್ ಪಾಟೀಲ್ ಸವಾಲೆಸೆದಿದ್ದರು. ಇದಕ್ಕೆ ಪ್ರತಿಯಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್‌ಸಿಯಾದಂತಹ ಚನ್ನರಾಜ ಹಟ್ಟಿಹೊಳಿ ದಾಖಲೆ ಅಷ್ಟೇ ಅಲ್ಲ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಂಜಯ್ ಪಾಟೀಲ್ ನೀಡಿದ ಮಾಹಿತಿ ಸತ್ಯಕ್ಕೆ ದೂರ ಎಂದ ಚನ್ನರಾಜ ಹಟ್ಟಿಹೊಳಿ:
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಾಜಹಂಸಗಡ ಅಭಿವೃದ್ಧಿ ಹಾಗೂ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ವಿಚಾರವಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್ ದಾಖಲೆ ಬಿಡುಗಡೆಗೆ ಪ್ರತಿಯಾಗಿ  ದಾಖಲೆ, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, 'ರಾಜಹಂಸಗಡ ಕೋಟೆ ಅಭಿವೃದ್ಧಿ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನುದಾನ ವಿಚಾರವಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್ ದಾಖಲೆ ಬಿಡುಗಡೆ ಮಾಡಿದ್ದಾರೆ.

ಮಾಜಿ ಶಾಸಕ ಸಂಜಯ್ ಪಾಟೀಲ್ ನೀಡಿದ್ದ ದಾಖಲೆ ನಾನು ನೋಡಿಲ್ಲ.‌ ಆದ್ರೆ ಸಂಜಯ್ ಪಾಟೀಲ್ ನೀಡಿದಂತ ಮಾಹಿತಿ ಸತ್ಯಕ್ಕೆ ದೂರವಾದಂತದ್ದು. 2018ರಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಶಾಸಕರಾದಾಗ ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ಕೇಳಿದ್ವಿ. ಡಿಕೆಶಿ ಕನ್ನಡ ಸಂಸ್ಕೃತಿ ಇಲಾಖೆ ಸಚಿವರಿದ್ದಾಗ 50 ಲಕ್ಷ ಅನುದಾನ ಕೇಳಿದ್ವಿ. ಅನುದಾನ ಕೇಳಿದ ಆ ಪತ್ರ, ಮಂಜೂರಾದ ಪತ್ರ ಒದಗಿಸುತ್ತಿದ್ದೇನೆ. ಆಗಿನ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಬಳಿ ರಾಜಹಂಸಗಡ ಕೋಟೆ ಆವರಣ ಅಭಿವೃದ್ಧಿಗೆ ಅನುದಾನ ಕೇಳಿದ್ವಿ. ಆಗ ಲಕ್ಷ್ಮೀ ಹೆಬ್ಬಾಳ್ಕರ್ ಮನವಿಗೆ ಸ್ಪಂದಿಸಿ ಸಾ.ರಾ.ಮಹೇಶ್ 5 ಕೋಟಿ ಅನುದಾನ ಮಂಜೂರು ಮಾಡಿದ್ರು. ಮೊದಲನೇ ಕಂತು ಎರಡೂವರೆ ಕೋಟಿ ಹಣ ಬಿಡುಗಡೆ ಮಾಡಿದ ದಾಖಲೆ ಪ್ರತಿ ನೀಡುತ್ತಿದ್ದೇನೆ‌‌.

Chhatrapati Shivaji Maharaj: ಶಿವಾಜಿ ಶೌರ್ಯ ಯುವ ಪೀಳಿಗೆಗೆ ಆದರ್ಶ: ಶಶಿಕಲಾ ಜೊಲ್ಲೆ

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಮ್ಮಿಶ್ರ ಸರ್ಕಾರ ಪತನ ಆಯ್ತು. ಬಳಿಕ ಬಿಜೆಪಿ ಸರ್ಕಾರದ ಪ್ರವಾಸೋದ್ಯಮ ಸಚಿವರಾದ ಸಿ.ಟಿ.ರವಿ ಆ ಅನುದಾನ ತಡೆಹಿಡಿದ್ರು. ಬಳಿಕ 5 ಕೋಟಿ ಅನುದಾನ 3 ಕೋಟಿಗೆ ಇಳಿಸುವ ಕೆಲಸ ಮಾಡಿದ್ರು. ಆದ್ರೆ ಆ ಮೂರು ಕೋಟಿ ಹಣ ಬಿಡುಗಡೆ ಆಗಲಿಲ್ಲ. ಬಳಿಕ ಪ್ರವಾಸೋದ್ಯಮ ಸಚಿವರಾದ ಸಿ.ಪಿ.ಯೋಗೇಶ್ವರ್ ಸಹ ಅನುದಾನ ತಡೆ ಹಿಡಿದ್ರು. ನಂತರ ಪ್ರವಾಸೋದ್ಯಮ ಸಚಿವರಾದ ಆನಂದ್ ಸಿಂಗ್ ಹಣ ಬಿಡುಗಡೆ ಮಾಡಿದ್ರು. 2022ರಲ್ಲಿ ಅನುದಾನ ಬಿಡುಗಡೆ ಯಾಗಿ ಟೆಂಡರ್ ಪ್ರಕ್ರಿಯೆ ಶುರುವಾದ ಪ್ರತಿ ಬಿಡುಗಡೆ ಮಾಡಿದ್ದೇನೆ‌‌. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸತತ ಪ್ರಯತ್ನದಿಂದ ಅನುದಾನ ಬಂದಿದೆ. ರಾಜಹಂಸಗಡ ಕೋಟೆ ಅಭಿವೃದ್ಧಿಗೆ 3 ಕೋಟಿ, ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪನೆಗೆ 50 ಲಕ್ಷ ಅನುದಾನ ತಂದಿದ್ದಾರೆ.‌ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ಹೇಳುತ್ತಿರೋದು ಸತ್ಯಕ್ಕೆ ದೂರ' ಎಂದು ತಿಳಿಸಿದ್ದಾರೆ.

ರಮೇಶ ಜಾರಕಿಹೊಳಿ ಕೋಟೆಯಲ್ಲಿ ಲಕ್ಷ್ಮೀ ಸ್ಪರ್ಧಿಸ್ತಾರಾ?: ಮಾಜಿ ಸಚಿವರನ್ನು ಸೋಲಿಸಲು ಕಾಂಗ್ರೆಸ್‌ ರಣತಂತ್ರ

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಲೋಕಾರ್ಪಣೆ ವಿಚಾರವಾಗಿ ಸಂಜಯ್ ಪಾಟೀಲ್ - ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯ ಕ್ರೆಡಿಟ್ ಫೈಟ್ ಜೋರಾಗಿದ್ದು ಮುಂದೆ ಇದು ಯಾವ ಹಂತ ತಲುಪುತ್ತೆ ಕಾದು ನೋಡಬೇಕು‌.

click me!