Chikkamagaluru: ಬಾಸೂರು ಹುಲ್ಲುಗಾವಲು ಪ್ರದೇಶದಲ್ಲಿ ಕುರಿಗಳು: ಭವಿಷ್ಯದಲ್ಲಿ ಮೇವು ಸಿಗದ ಪರಿಸ್ಥಿತಿ

By Govindaraj SFirst Published Oct 31, 2022, 7:49 PM IST
Highlights

ಜಿಲ್ಲೆಯ ಕಡೂರು ತಾಲ್ಲೂಕಿನ ಬಾಸೂರು ಐತಿಹಾಸಿಕ ಹುಲ್ಲುಗಾವಲು, ಅದನ್ನು ರಕ್ಷಿಸಬೇಕಾದ ಇಲಾಖೆಗಳ ಉಪೇಕ್ಷೆಯಿಂದಲೇ ನೂರಾರು ಕುರಿಗಳು ಮೇಯುವ ತಾಣವಾಗಿ ಅಲ್ಲಿರುವ ವನ್ಯ ಪ್ರಾಣಿಗಳು ಹಾಗೂ ಅಮೃತ್ಮಹಲ್ ತಳಿಗಳಿಗೆ ಭವಿಷ್ಯದಲ್ಲಿ ಮೇವು ಸಿಗದ ಪರಿಸ್ಥಿತಿ ತಲೆದೋರುವ ಸ್ಥಿತಿ ನಿರ್ಮಾಣವಾಗಿದೆ.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್‌ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಅ.31): ಜಿಲ್ಲೆಯ ಕಡೂರು ತಾಲ್ಲೂಕಿನ ಬಾಸೂರು ಐತಿಹಾಸಿಕ ಹುಲ್ಲುಗಾವಲು, ಅದನ್ನು ರಕ್ಷಿಸಬೇಕಾದ ಇಲಾಖೆಗಳ ಉಪೇಕ್ಷೆಯಿಂದಲೇ ನೂರಾರು ಕುರಿಗಳು ಮೇಯುವ ತಾಣವಾಗಿ ಅಲ್ಲಿರುವ ವನ್ಯ ಪ್ರಾಣಿಗಳು ಹಾಗೂ ಅಮೃತ್ಮಹಲ್ ತಳಿಗಳಿಗೆ ಭವಿಷ್ಯದಲ್ಲಿ ಮೇವು ಸಿಗದ ಪರಿಸ್ಥಿತಿ ತಲೆದೋರುವ ಸ್ಥಿತಿ ನಿರ್ಮಾಣವಾಗಿದೆ.

400 ವರ್ಷ ಇತಿಹಾಸವಿರುವ ಹಲ್ಲುಗಾವಲು: ಅಮೃತ್ಮಹಲ್ ಕಾವಲ್ ಇಂದು ನಿನ್ನೆಯ ವಿಶೇಷ ಹುಲ್ಲುಗಾವಲಲ್ಲ. ಅದಕ್ಕೆ 400 ವರ್ಷದ ಇತಿಹಾಸವಿದೆ. ವಿಜಯನಗರದ ಅರಸರಿಂದ ಹಿಡಿದು ಮೈಸೂರು ಅರಸರವರೆಗೆ ಕನ್ನಡನಾಡಿನ ವಿಶೇಷ ಗೋವಿನ ತಳಿಯಾದ ಅಮೃತ್ಮಹಲ್ ಹಾಗೂ ವನ್ಯಪ್ರಾಣಿಗಳ ಆಹಾರ ತಾಣವಾಗಿದ್ದ ಈ ಹುಲ್ಲುಗಾವಲು ಸಂರಕ್ಷಣಾ ಪ್ರದೇಶವಾಗಿದ್ದು, ಈಗಲೂ ಸಹ ಆ ತಳಿಗಳ ಮತ್ತು ಹಲವು ವಿಶೇಷ ರೀತಿಯ ವನ್ಯಮೃಗಗಳ ಆವಾಸಸ್ಥಾನವೂ ಆಗಿದೆ. ಅಮೃತ್ಮಹಲ್ ತಳಿಗಳನ್ನು ಸಂರಕ್ಷಣೆ ಮಾಡಿ ಅಭಿವೃದ್ಧಿಪಡಿಸಲು ಈ ಹುಲ್ಲುಗಾವಲನ್ನು ಯಾವುದೇ ರೀತಿಯ ಅನ್ಯ ಚಟುವಟಿಕೆಗಳಿಗೆ ಬಳಸದೆ ಸಂರಕ್ಷಿಸಲಾಗುತ್ತಿದೆ. 

Chikkamagaluru: ಮಾಟ ಮಂತ್ರಕ್ಕೆ ಇಲ್ಲಿ ಬ್ರೇಕ್: ಕಣ್ಣಾಸರಕ್ಕೂ ಇಲ್ಲಿನ ಪೂಜೆ ರಾಮಬಾಣ

ಈ ಜಿಲ್ಲೆಯಲ್ಲಿ ಕಾವಲ್ಸ್ವರೂಪದಲ್ಲಿ ಉಳಿದಿರುವ ಬಾಸೂರು ಕಾವಲ್ 1820 ಎಕರೆ ವಿಸ್ತೀರ್ಣವಿದ್ದು, ಈ ಕಾವಲ್ನಲ್ಲಿ ಅಮೃತ್ಮಹಲ್ ತಳಿಗಳ ಜೊತೆಗೆ ಕೃಷ್ಣಮೃಗ, ತೋಳ ಮತ್ತು ನರಿ ಹಾಗೂ ಅತ್ಯಂತ ಅಪರೂಪದ ಪಕ್ಷಿಗಳು ಜೀವಿಸುತ್ತಿವೆ. ಈ ಹುಲ್ಲುಗಾವಲು ಬಯಲುಸೀಮೆಯ ಮಳೆನೀರು ಹೀರುವ ಸೋಸುಕಗಳೂ ಆಗಿದ್ದು, ಇದನ್ನು ಯಾವುದೇ ರೀತಿ ಅನ್ಯ ಉದ್ದೇಶಕ್ಕೆ ಬಳಸದಂತೆ ನ್ಯಾಯಾಲಯದ ಆದೇಶವೂ ಇದೆ. ಹಿಂದೆ ಈ ಹುಲ್ಲುಗಾವಲನ್ನು ಹಲವರು ಒತ್ತುವರಿ ಮಾಡಿದ್ದು, ನ್ಯಾಯಾಲಯದ ಆದೇಶದ ಅನ್ವಯ ತೆರವುಗೊಳಿಸಲಾಗಿದೆ. ಸರ್ಕಾರ ಸಹ ಈ ಹುಲ್ಲುಗಾವಲನ್ನು ಸಮುದಾಯ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದೆ. ವಿಪರ್ಯಾಸವೆಂದರೆ ಇತ್ತೀಚೆಗೆ ನ್ಯಾಯಾಲಯ ಹಾಗೂ ಸರ್ಕಾರದ ಸೂಚನೆಗಳನ್ನು ಲೆಕ್ಕಿಸದೆ ಇದನ್ನು ಸಂರಕ್ಷಿಸಬೇಕಾದ ಪಶು ಸಂಗೋಪನಾ ಇಲಾಖೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಈ ಹುಲ್ಲುಗಾವಲಲ್ಲಿ ಸಾವಿರಾರು ಕುರಿಗಳನ್ನು ಮೇಯಿಸಲು ಅವಕಾಶ ಮಾಡಿಕೊಡುತ್ತಿರುವುದು ಪರಿಸರವಾದಿಗಳ ತೀವ್ರ ಆಕ್ರೋಶ ಕಾರಣವಾಗಿದೆ. 

ಪಶುಸಂಗೋಪನಾ ಇಲಾಖೆ ವಿರುದ್ದ ಕಿಡಿ: ಕುರಿಯನ್ನು ಇಲ್ಲಿ ಮೇಯಿಸಲು ಯಾವುದೇ ರೀತಿ ಅವಕಾಶವೂ ಇಲ್ಲ. ಜೊತೆಗೆ ಬೇರೆ ಜಾನುವಾರುಗಳನ್ನು ಇಲ್ಲಿ ಮೇಯಲು ಬಿಡುವಂತಿಲ್ಲ. ಆದರೆ ಸಿಬ್ಬಂದಿ ಇದನ್ನು ಲೆಕ್ಕಿಸದೆ ಕುರಿ ಹಿಂಡನ್ನು ಮೇಯಲು ಅನುಮತಿ ನೀಡುತ್ತಿರುವ ಬಗ್ಗೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಹುಲ್ಲುಗಾವಲಲ್ಲಿ ಅಮೃತ್ ಮಹಲ್ ತಳಿ ಹಾಗೂ ಅಲ್ಲಿರುವ ವನ್ಯಜೀವಿಗಳ ಹೊರತು ಇನ್ಯಾವುದೇ ಖಾಸಗಿ ಜಾನುವಾರುಗಳು ಮೇಯಲು ಬಂದಲ್ಲಿ ಅವುಗಳನ್ನು ವಶಪಡಿಸಿಕೊಂಡು ಅವುಗಳ ಮಾಲೀಕರ ಮೇಲೆ ದಂಡ ವಿಧಿಸಲು ಅವಕಾಶವಿದೆ. 

Chikkamagaluru: ಮತ್ತೊಮ್ಮೆ ವಿಶೇಷ ಚೇತನರ ಆರೋಗ್ಯ ತಪಾಸಣೆ: ಸಿ.ಟಿ.ರವಿ

ಆದರೆ ಅರಣ್ಯ ಹಾಗೂ ಪಶುಸಂಗೋಪನಾ ಸಿಬ್ಬಂದಿಗಳು ಈ ರೀತಿ ಯಾವುದೇ ನಿಯಂತ್ರಣಕ್ಕೂ ಮುಂದಾಗದೆ ಈ ಹುಲ್ಲುಗಾವಲನ್ನು ಅದರ ಮುಖ್ಯ ಉದ್ದೇಶದಿಂದ ವಿಮುಖವಾಗಿಸಿ ಅದನ್ನೊಂದು ಗೋಮಾಳವಾಗಿ ಪರಿವರ್ತಿಸುತ್ತಿದ್ದಾರೆ. ತಕ್ಷಣ ಇಲಾಖೆಯ ಮುಖ್ಯ ಅಧಿಕಾರಿಗಳು ಹುಲ್ಲುಗಾವಲನ್ನು ರಕ್ಷಿಸದೆ ಬೇಜವಾಬ್ದಾರಿತನದಿಂದ ವರ್ತಿಸುವ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಈ ಐತಿಹಾಸಿಕ ಹುಲ್ಲುಗಾವಲನ್ನು ಅದರ ಉದ್ದೇಶಕ್ಕೆ ತಕ್ಕಂತೆ ಸಂರಕ್ಷಿಸಬೇಕೆಂದು ಪರಿಸರವಾದಿ ಗಿರಿಜಾಶಂಕರ್ ಒತ್ತಾಯಿಸಿದ್ದಾರೆ.

click me!