ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ, ಶಂಕಿತ ಉಗ್ರ ಶಾರೀಕ್ ಆರು ತಿಂಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಪೊನ್ನಂಪೇಟೆ ತಾಲೂಕು ವೆಸ್ಟ್ ನಮ್ಮೆಲೆಯ ನೇಚರ್ ಕ್ಯಾಂಪ್ ಹೋಂಸ್ಟೇಯಲ್ಲಿ ಉಳಿದುಕೊಂಡಿದ್ದ ಉಗ್ರ ಈ ವೇಳೆ ಉಗ್ರ ಟ್ರಕ್ಕಿಂಗ್ ತರಬೇತಿ ಪಡೆದಿರುವುದು ದೃಢಪಟ್ಟಿದೆ.
ಮಡಿಕೇರಿ (ಡಿ.6) : ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ, ಶಂಕಿತ ಉಗ್ರ ಶಾರೀಕ್ ಆರು ತಿಂಗಳ ಹಿಂದೆ ಕೊಡಗು ಜಿಲ್ಲೆಯಲ್ಲಿ ವಾಸ್ತವ್ಯ ಹೂಡಿದ್ದು ತನಿಖೆಯಿಂದ ಬೆಳಕಿಗೆ ಬಂದಿದೆ. ಪೊನ್ನಂಪೇಟೆ ತಾಲೂಕು ವೆಸ್ಟ್ ನಮ್ಮೆಲೆಯ ನೇಚರ್ ಕ್ಯಾಂಪ್ ಹೋಂಸ್ಟೇಯಲ್ಲಿ ಉಳಿದುಕೊಂಡಿದ್ದ ಉಗ್ರ ಈ ವೇಳೆ ಉಗ್ರ ಟ್ರಕ್ಕಿಂಗ್ ತರಬೇತಿ ಪಡೆದಿರುವುದು ದೃಢಪಟ್ಟಿದೆ.
ಶಾರೀಕ್ ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ. ಕುಕ್ಕರ್ ಬಾಂಬ್ ಜತೆಗೆ ಆಟೋದಲ್ಲಿ ಸಂಚರಿಸುವಾಗ ಬಾಂಬ್ ಸ್ಫೋಟಿಸಿ ಈತನ ಸಂಚು ಬಯಲಾಗಿತ್ತು. ಬಾಂಬ್ ಸ್ಫೋಟಕ್ಕೂ ಮುನ್ನ ಈತ ಕೊಡಗು ಜಿಲ್ಲೆಯ ಹೋಂಸ್ಟೇ ಒಂದಕ್ಕೆ ಇಬ್ಬರು ಮಹಿಳೆಯರೂ ಸೇರಿ ಕೆಲ ಸಹಚರರರೊಂದಿಗೆ ಬಂದು ಹೋಗಿರುವುದು ತನಿಖೆ ವೇಳೆ ತಿಳಿದುಬಂದಿದೆ.
ಕುಕ್ಕರ್ ಬಾಂಬರ್ ಶಾರೀಕ್ ಬಗ್ಗೆ ಶಿವಮೊಗ್ಗದಲ್ಲೂ ತನಿಖೆ
ಅದರಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಹಾಗೂ ಮಂಗಳೂರು ಪೊಲೀಸರು ಶಾರೀಕ್ ಉಳಿದುಕೊಂಡಿದ್ದ ಹೋಂಸ್ಟೇಗೆ ಭೇಟಿ ನೀಡಿ, ಅಲ್ಲಿ ಏನೆಲ್ಲಾ ಚಟುವಟಿಕೆ ನಡೆಸಿದ್ದ ಎನ್ನುವುದರ ಮಾಹಿತಿ ಸಂಗ್ರಹಿಸಿದ್ದಾರೆ. ವಿಚಾರಣೆ ವೇಳೆ ಹೋಂಸ್ಟೇಗೆ ಶಾರೀಕ್ ಜೊತೆ ಆತನ ಸಹಚರರು ಸೇರಿ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಹೋಂಸ್ಟೇ ಮಾಲೀಕರು ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಹೋಂಸ್ಟೇ ಮಾಲೀಕನನ್ನು ಮಂಗಳೂರಿಗೆ ಬರುವಂತೆ ಪೊಲೀಸರು ತಿಳಿಸಿ ಹೋಗಿದ್ದಾರೆ.
ದಾಖಲೆ ಲಭ್ಯವಿಲ್ಲ?!: ಈ ಹೋಂಸ್ಟೇ ಮಾಲೀಕರು ಪಂಚಾಯತಿಯಿಂದ ಪರವಾನಗಿ ಪಡೆಯದಿರುವುದು ಹಾಗೂ ಹೋಂಸ್ಟೇ ಮಾರ್ಗಸೂಚಿ ಪಾಲನೆ ಮಾಡದಿರುವ ಕಾರಣ ಅಲ್ಲಿಗೆ ಯಾರು ಬರುತ್ತಾರೆ, ಹೋಗುತ್ತಾರೆ ಎನ್ನುವ ಕುರಿತು ದಾಖಲೆ ನಿರ್ವಹಿಸಿಲ್ಲ ಎಂಬುದು ಅಧಿಕಾರಿಗಳಿಗೆ ತಿಳಿದು ಬಂದಿದೆ.
ಮಂಗಳೂರು ಬಾಂಬ್ ಸ್ಫೋಟ: ಮೈಸೂರಿಗೂ ಮುನ್ನ ಕೇರಳದಲ್ಲಿದ್ದ ಶಾರೀಕ್
ಟ್ರಕ್ಕಿಂಗ್ ತರಬೇತಿ?: ಟ್ರಕ್ಕಿಂಗ್ ಹಾಗೂ ಪರ್ವತಾರೋಹಿಗಳಿಗೆ ತಮಿಳುನಾಡಿನ ರಾಜನ್ ಎಂಬಾತ ನೀಡಿದ ಜಂಗಲ್ ಸರ್ವೈವಲ್ ಕ್ಯಾಂಪಿನಲ್ಲಿ ಉಗ್ರ ಶಾರೀಕ್ ತರಬೇತಿ ಪಡೆದಿದ್ದ ಎನ್ನಲಾಗಿದೆ. 2022ರ ಮೇ ತಿಂಗಳ ಕೊನೇ ವಾರದಲ್ಲಿ ಅಂದರೆ 27, 28 ಮತ್ತು 29 ರಂದು ಮೂರು ದಿನಗಳ ಕಾಲ ತರಬೇತಿ ಪಡೆದಿದ್ದ. ಕಾಡಿನಲ್ಲಿದ್ದುಕೊಂಡು ಉಗ್ರ ಚಟುವಟಿಕೆ ನಡೆಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ತರಬೇತಿ ಪಡೆದಿದ್ದನೇ ಎಂಬ ಇದೀಗ ಅನುಮಾನ ಶುರುವಾಗಿದೆ. ಈ ಹಿಂದೆ ಕೂಡ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ಉಗ್ರ ಅಬ್ದುಲ್ ಮದನಿ ಅಡಗಿ ಬಾಂಬ್ ತಯಾರಿಕೆಯಲ್ಲಿ ನಿರತನಾಗಿದ್ದ. ಈಗ ಶಾರೀಕ್ ಇಂಥ ತರಬೇತಿ ಪಡೆದಿರುವುದನ್ನು ನೋಡಿದರೆ ಕೊಡಗು ನಿಜವಾಗಿಯೂ ಉಗ್ರರ ತರಬೇತಿಯ ತಾಣವಾಗುತ್ತಿದೆಯಾ ಎನ್ನುವ ಅನುಮಾನ ದಟ್ಟವಾಗಿದೆ.