ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ಬರೋಬ್ಬರಿ ₹380 ಕೋಟಿ ಅಕ್ರಮ ಪಾವತಿ: ಗಂಭೀರ ಆರೋಪ

Kannadaprabha News   | Kannada Prabha
Published : Sep 05, 2026, 08:28 AM IST
Sharavathi Pumped Storage Project

ಸಾರಾಂಶ

ಶಿವಮೊಗ್ಗದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಯಾವುದೇ ಅನುಮತಿ ಇಲ್ಲದಿದ್ದರೂ, ಕೆಪಿಸಿಎಲ್ ಗುತ್ತಿಗೆದಾರ ಸಂಸ್ಥೆಗೆ 380 ಕೋಟಿ ರೂ.ಗೂ ಅಧಿಕ ಹಣ ಪಾವತಿಸಿದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ಸಿಬಿಐ ತನಿಖೆಗೆ ಒತ್ತಾಯಿಸಲಾಗಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕೂಡ ಈ ಬಗ್ಗೆ ಸರ್ಕಾರಕ್ಕೆ 15 ದಿನಗಳ ಗಡುವು ನೀಡಿದ್ದಾರೆ.

ಶಿವಮೊಗ್ಗ: ಜಿಲ್ಲೆಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ, ಯಾವುದೇ ಯೋಜನೆಗಳಲ್ಲಿ ಕೇಂದ್ರ ಪರಿಸರ ಇಲಾಖೆಯ ಪೂರ್ವಾನುಮತಿ ಇಲ್ಲದೆ ಕಾಮಗಾರಿ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್‌ನ ಆದೇಶವೂ ಇದೆ. ಇಷ್ಟೇ ಅಲ್ಲದೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಯಾವುದೇ ಕಾಮಗಾರಿ ಆರಂಭವಾಗದಿದ್ದರೂ ಈಗಾಗಲೇ ಕಾನೂನನ್ನು ಮೀರಿ ಕೆಪಿಸಿಎಲ್‌ನಿಂದ ಗುತ್ತಿಗೆದಾರ ಸಂಸ್ಥೆ ಮೇಘಾ ಎಂಜಿನಿಯರಿಂಗ್‌ಗೆ 380 ಕೋಟಿ ರು.ಗೂ ಅಧಿಕ ಹಣ ಪಾವತಿಸಲಾಗಿದೆ ಎಂದು ಪರಿಸರವಾದಿ ಪ್ರೊ.ಎಲ್‌.ಕೆ. ಶ್ರೀಪತಿ ಗಂಭೀರ ಆರೋಪ ಮಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿ ಯಾವುದೇ ಕಾಮಗಾರಿ ಕೈಗೊಳ್ಳದಿದ್ದರೂ, ಕೆಪಿಸಿಎಲ್‌ನಿಂದ ಗುತ್ತಿಗೆದಾರ ಸಂಸ್ಥೆ ಮೇಘಾ ಎಂಜಿನಿಯರಿಂಗ್‌ಗೆ 380 ಕೋಟಿ ರು.ಗೂ ಅಧಿಕ ಹಣ ಪಾವತಿಯಾಗಿದ್ದು ಇದರಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಸಾಧ್ಯತೆ ಇದೆ. ಕೂಡಲೇ ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಇದುವರೆಗೆ ಕೇಂದ್ರ ಪರಿಸರ ಇಲಾಖೆಯಿಂದ ಯಾವುದೇ ಅನುಮತಿ ದೊರೆತಿಲ್ಲ. ಅಲ್ಲದೆ, ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕಾಮಗಾರಿ ಕೈಗೊಳ್ಳದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಪರಿಸರ ಇಲಾಖೆಯ ಪೂರ್ವಾನುಮತಿ ಇಲ್ಲದೆ ಯಾವುದೇ ಯೋಜನೆಯ ಕಾಮಗಾರಿ ಕೈಗೊಳ್ಳಬಾರದು ಎಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನವೂ ಇದೆ ಎಂದು ಅವರು ಹೇಳಿದರು.

ಆದರೂ, ಯಾವುದೇ ವರ್ಕ್ ಆರ್ಡರ್ ಇಲ್ಲದ ಯೋಜನೆಗೆ ಸಂಬಂಧಿಸಿದಂತೆ 2025ರ ಡಿಸೆಂಬರ್ 11ರಂದು ಒಂದೇ ದಿನ 380 ಕೋಟಿಯಷ್ಟು ಬೃಹತ್ ಮೊತ್ತವನ್ನು ಮೇಘಾ ಎಂಜಿನಿಯರಿಂಗ್ ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿದರು.

ಸಾರ್ವಜನಿಕರ ತೆರಿಗೆ ಹಣವನ್ನು ಯಾವುದೇ ಕಾಮಗಾರಿ ನಡೆಸದ ಸಂಸ್ಥೆಗೆ ಪಾವತಿಸುವ ಮೂಲಕ ಕೆಪಿಸಿಎಲ್ ಹಣ ದುರ್ಬಳಕೆ ಮಾಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಪರಿಸರ ಇಲಾಖೆ ಯೋಜನೆಗೆ ಅನುಮತಿ ನಿರಾಕರಿಸಿದರೆ, ಈಗಾಗಲೇ ಪಾವತಿಸಿರುವ 380 ಕೋಟಿ ರು.ಗೂ ಅಧಿಕ ಮೊತ್ತದ ಹಣಕ್ಕೆ ಕೆಪಿಸಿಎಲ್ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ ಎಂದರು.

ಯೋಜನೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರದ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ಕೂಡಲೇ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಹಿಂಪಡೆದು, 380 ಕೋಟಿ ಪಾವತಿ ಕುರಿತು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಕೆ. ಇ. ಕಾಂತೇಶ್,ಅಶೋಕ್ ಗಾಂಧಿ ಬಸಪ್ಪ, ಜಾಧವ್, ಶ್ರೀಕಾಂತ್, ಜನಾರ್ದನ್ ಪೈ, ಪ್ರಕಾಶ್, ದಿಲೀಪ್ ನಾಡಿಗ್, ಲಕ್ಷ್ಮೀ ಶಂಕರ್ ನಾಯ್ಕ್, ಪರಿಸರ ರಮೇಶ್, ನಾಗರಾಜ್ ಇದ್ದರು.

ಸಚಿವ ಜಾರ್ಜ್‌ಗೆ 15 ದಿನಗಳ ಗಡುವು: ಈಶ್ವರಪ್ಪ

ಶಿವಮೊಗ್ಗ: ಪರಿಸರ ಸೂಕ್ಷ್ಮ ವಲಯದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಗೊಳಿಸುತ್ತಿರುವುದೇ ಒಂದು ಮಹಾ ಅಪರಾಧವಾಗಿದ್ದು, ಇದರ ನಡುವೆ ನಿಯಮ ಗಾಳಿಗೆ ತೂರಿ ಗುತ್ತಿಗೆದಾರ ಸಂಸ್ಥೆಗೆ ಕೋಟ್ಯಂತರ ರು. ಪಾವತಿಸಿರುವ ಹಿಂದೆ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ಕರ್ನಾಟಕ ವಿದ್ಯುತ್ ನಿಗಮದಿಂದ (ಕೆಪಿಸಿಎಲ್) ಗುತ್ತಿಗೆದಾರ ಸಂಸ್ಥೆಯಾದ ಮೇಘಾ ಎಂಜಿನಿಯರಿಂಗ್‌ಗೆ 380 ಕೋಟಿ ರು.ಗೂ ಅಧಿಕ ಹಣವನ್ನು ನಿಯಮಬಾಹಿರವಾಗಿ ಪಾವತಿಸಲಾಗಿದೆ. ಈ ಪಾವತಿಯಲ್ಲಿ ಭಾರಿ ಅಕ್ರಮ ನಡೆದಿರುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಮುಂದಿನ 15 ದಿನಗಳ ಒಳಗಾಗಿ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹೋರಾಟದ ಎಚ್ಚರಿಕೆ: ಒಂದು ವೇಳೆ ಸರ್ಕಾರ ಅಥವಾ ಸಂಬಂಧಪಟ್ಟ ಸಚಿವರು ಈ ನಿಗದಿತ ಅವಧಿಯಲ್ಲಿ ಸೂಕ್ತ ಸ್ಪಷ್ಟನೆ ನೀಡದಿದ್ದರೆ ಸುಮ್ಮನೆ ಕೂರುವುದಿಲ್ಲ. ಜಿಲ್ಲೆಯ ವಿವಿಧ ಪ್ರಮುಖ ಸಂಘ-ಸಂಸ್ಥೆಗಳು ಹಾಗೂ ಪರಿಸರವಾದಿಗಳೊಂದಿಗೆ ತುರ್ತು ಸಭೆ ನಡೆಸಿ, ಮುಂದಿನ ತೀವ್ರ ಸ್ವರೂಪದ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಎಚ್ಚರಿಸಿದರು.

PREV
Read more Articles on
click me!

Recommended Stories

FSSAI: ಎಕ್ಸ್‌ಪೈರಿ ಡೇಟ್ ಮುಗಿದ 40Kg ಮೆಣಸಿನಕಾಯಿ ಪತ್ತೆ; ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ಕಿಚನ್ ಕ್ಲೋಸ್! (Video)
ಬೆಂಗಳೂರಿನಲ್ಲಿ ಬೈಕ್‌, ಆಟೋಗೆ ಮೇಲ್ಸೇತುವೆ ಬಂದ್‌: ಪ್ರಾಯೋಗಿಕ ಪರೀಕ್ಷೆ ಬಳಿಕ ಕ್ರಮ