ಫಟಾಫಟ್ ರಥೋತ್ಸವ: 'ಕೊರೋನಾದಿಂದ ಕಲಬುರಗಿ ಕಾಪಾಡಪ್ಪ ಶರಣ ಬಸವ'

By Kannadaprabha NewsFirst Published Mar 14, 2020, 8:46 AM IST
Highlights

ಕೊರೋನಾ ಭಯ ನಿವಾರಿಸೆಂದು ಶರಣಬಸವೇಶ್ವರರ ಮೊರೆ ಹೋದ ಕಲಬುರಗಿ ಜನತೆ| ಸರಳವಾಗಿ ನಡೆದ ರಥೋತ್ಸವ| ಶರಣಬಸವೇಶ್ವರರ ದರ್ಶನ ಪಡೆದ ಭಕ್ತರು| 

ಕಲಬುರಗಿ(ಮಾ.14): ಕೊರೋನಾ ವೈರಾಣು ಭಯ ನಿವಾರಿಸು ತಂದೆ ಎಂದು ಆತಂಕದಲ್ಲಿರುವ ಕಲಬುರಗಿ ಜನ ದಾಸೋಹ ಮೂರುತಿ ಶರಣಬಸವೇಶ್ವರರಿಗೆ ಮೊರೆ ಹೋಗಿದ್ದಾರೆ. ಕೊರೋನಾ ಭೀತಿ ಹಿನ್ನೆಲೆ ತುಂಬ ಸರಳವಾಗಿ ರಥೋತ್ಸವ ನಡೆದ ಇಲ್ಲಿನ ದಾಸೋಹ ಮನೆ ಅಂಗಳದಲ್ಲಿ ಸೇರಿದ್ದ ಜನ ಸಮೂಹ ಶುಕ್ರವಾರ ಎಂದಿನಂತೆ 66 ಗಂಟೆಗೆ ರಥವನ್ನೆಳೆಯದೆ ಸಂಜೆ 4 ಗಂಟೆಗೆ ರಥ ಎಳೆಯುವ ಮೂಲಕ ಶರಣರಿಗೆ ನಮಿಸಿದ್ದಾರೆ.  

ಇದರೊಂದಿಗೆ ಕೊರೋನಾ ಭಯದ ವಾತಾವರಣದಲ್ಲಿಯೇ ನಾಡಿನ ಜನರ ಆರಾಧ್ಯ ದೈವ, ಮಹಾದಾಸೋಹಿ ಶರಣಬಸವೇಶ್ವರರ 198ನೇ ಜಾತ್ರಾ ಮಹೋತ್ಸವ ನಡೆಯಿತು. ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಶುಕ್ರವಾರ ಮ.4 ಗಂಟೆಗೆ ಶರಣಬಸವೇಶ್ವರ ಮಹಾರಾಜ್ ಕೀ ಜೈ ಎಂದು ಘೋಷಣೆ ಕೂಗುತ್ತ ಭಕ್ತರು ರಥವನ್ನೆಳೆದರು. ಎಂದಿನಂತೆ ಭಕ್ತರು ಪಾಲ್ಗೊಂಡಿರಲಿಲ್ಲ ಆದರೂ ಸಹ ಗ್ರಾಮೀಣ ಭಾಗದಿಂದ ಬಂದವರೇ ಸಿಂಹಪಾಲು ರಥೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದರು. ಬೆಳಗ್ಗೆಯಿಂದಲೆ ಮಹಾದಾಸೋಹಿ ಶರಣಬಸವೇಶ್ವರ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. 
ಶರಣಬಸವೇಶ್ವರ ಮಹಾಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪಾ ಅವರು ಶರಣಬಸವೇಶ್ವರರ ಮಹಿಮೆಯಿಂದ ಕೂಡಿದ ಪರುಷ ಬಟ್ಟಲನ್ನು (ಬೆಳ್ಳಿಯ ಬಟ್ಟಲು) ಭಕ್ತಾದಿಗಳಿಗೆ ಪ್ರದರ್ಶಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಹರಕೆ ಹೊತ್ತ ಭಕ್ತರು ರಥಕ್ಕೆ ಖಾರಿಕ್ (ಉತ್ತತ್ತಿ), ಬಾಳೆ ಹಣ್ಣುಗಳನ್ನು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. 

ಕಲಬುರಗಿ: ಕೊರೋನಾದಿಂದ ಮೃತಪಟ್ಟ ವ್ಯಕ್ತಿ ಮನೆಯ 5 ಕಿ. ಮೀ. ಬಫರ್ ಝೋನ್!

ಈ ವೇಳೆ ನೆರೆದ ಭಕ್ತರು ಶರಣಬಸವೇಶ್ವರ ಮಹಾರಾಜ ಕಿ ಜೈ ಎಂದು ಘೋಷಣೆ ಕೂಗುತ್ತ ಭಕ್ತಿಭಾವ ತೋರಿದರು. ಕೊರೋನಾ ಭಯದ ವಾತಾವರಣ ಹುಟ್ಟಿಕೊಂಡಿರುವ ಕಲಬುರಗಿಯಲ್ಲಿ ರಥಕ್ಕೆ ಬಂದ ಭಕ್ತರು ಸಹ ಮಾಸ್ಕ್ ಧಾರಿಯಾಗಿ ಗಮನ ಸೆಳೆದರು. ಕೊರೋನಾ ಆತಂಕವನ್ನು ದೂರ ಮಾಡಲು ಶರಣಬಸವೇಶ್ವರರ ಕೃಪಾಶೀರ್ವಾದವಿದೆ ಎಂದೇ ನಂಬಿದ್ದಾಗ ಹೇಳುತ್ತ ಬಂದವರೆಲ್ಲರೂ ರಥ ಸೇವೆ ಸಮರ್ಪಿಸಿದರು. ನಿರಂತರವಾಗಿ ಶರಣಬಸವೇಶ್ವರ ದೇವಾಲಯದಲ್ಲಿ ಕೊರೋನಾ ವೈರಸ್ ಮುಂಜಾಗ್ರತೆ ಕ್ರಮಗಳ ಕುರಿತು ಜಾತ್ರಾ ಪ್ರಚಾರ ಸಮಿತಿ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದ್ದರೂ ಸಹ ಗ್ರಾಮಾಂತರಗಳಿಂದ ಬಂದ ಭಕ್ತಾದಿಗಳು ರಥ ನೋಡಲು ಕಾಯುತ್ತಿದ್ದರು. ಬೆಳಗ್ಗೆ ಭಕ್ತರ ಸಂಖ್ಯೆ ತೀರ ಕಡಿಮೆಯಿತ್ತು. ಮಧ್ಯಾಹ್ನ 2 ರ ನಂತರ ನಿಧಾನವಾಗಿ ಭಕ್ತರ ಸಂಖ್ಯೆ ಹೆಚ್ಚಾಗುತ್ತ ಸಾಗಿತು. 

ಶರಣಬಸವೇಶ್ವರರ ದರ್ಶನ ಪಡೆದವರು ಗುಂಪುಗುಂಪಾಗಿ ನಿಲ್ಲಬಾರದು. ಅವರವರ ಮನೆಗೆ ಹೋಗಬೇಕೆಂದು ಮೈಕ್‌ನಲ್ಲಿ ಹೇಳುತ್ತಿದ್ದರೂ ಸಹ ಭಕ್ತರು ಅಲ್ಲಿಂದ ಕದಲುತ್ತಿರಲಿಲ್ಲ. ಕೆಲವು ಭಕ್ತರು ಮಾತ್ರ ಕೊರೋನಾ ವೈರಸ್ ಭಯದಿಂದಾಗಿ ರಥೋತ್ಸವಕ್ಕಿಂತ ಮುಂಚೆ ರಥದ ಮೇಲೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತಿಯಿಂದ ನಮಸಿ ಅಲ್ಲಿಂದ ತೆರಳಿದರು. ರಥದ ಎರಡು ಬದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತಸಮುದಾಯ ಶರಣಬಸವೇಶ್ವರ ಮಹಾರಾಜಕೀ ಜೈ ಎಂಬ ಘೋಷಣೆ ಕೂಗತೊಡಗಿದರು. ಪ್ರತಿವರ್ಷದಂತೆ ಜಿಲ್ಲಾ ಬಣಗಾರ ಸಮಾಜ ಮಕ್ತಂಪುರ ವತಿಯಿಂದ ನಡೆದ ನಂದಿಕೋಲುಗಳ ಮೆರವಣಿಗೆ ಉತ್ಸವಕ್ಕೆ ಮೆರಗು ತಂದಿತು. ಗ್ರಾಮೀಣ ಭಾಗದ ಭಕ್ತರ ತಂಡಗಳು ಕಾಲ್ನಡಿಗೆಯಲ್ಲಿ ಬರುವ ಮೂಲಕ ಭಕ್ತಿ ಮೆರೆದರು. 

ಕೊರೋನಾಗೆ ವೃದ್ಧ ಬಲಿ: ತುರ್ತು ಸಂದರ್ಭ ನಿಭಾಯಿಸುವಲ್ಲಿ ಕಲಬುರಗಿ ಜಿಲ್ಲಾಡಳಿತ ನಿರ್ಲಕ್ಷ್ಯ?

ದಾರಿಯಲ್ಲಿ ಭಕ್ತರಿಗಾಗಿ ತಂಪನೆ ಮಜ್ಜಿಗೆ, ಶರಬತ್ತು, ನೀರಿನ ವ್ಯವಸ್ಥೆ ಕಲಬುರಗಿ ಜನತೆ ಮಾಡಿದ್ದರು. ಜಾತ್ರಾ ಮಹೋತ್ಸವದಲ್ಲಿ ಭಕ್ತರ ಸಂಖ್ಯೆ ಕಡಿಮೆ: ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಪ್ರತಿವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಕ್ತರ ಸಂಖ್ಯೆ ತೀರ ಕಡಿಮೆಯಿತ್ತು. ಕೊರೋನಾ ವೈರಸ್‌ನಿಂದಾಗಿ ಆತಂಕಗೊಂಡ ಸುತ್ತಮುತ್ತಲಿನ ಭಕ್ತರು ಬೆಳಗ್ಗೆ ಶರಣಬಸವೇಶ್ವರರ ದರ್ಶನ ಪಡೆದು ಹಿಂದಿರುಗಿದರು. ಇನ್ನೂ ಕೆಲವರು ಮನೆಯಲ್ಲಿಯೇ ಶರಣಬಸವೇಶ್ವರರ ಭಾವಚಿತ್ರಕ್ಕೆ ನಮಿಸಿ ಪೂಜೆಗೈದಿದ್ದಾರೆಂದು ಅಲ್ಲಿದ್ದವರು ಹೇಳಿದರು. ಹರಕೆ ಹೊತ್ತ ಸುತ್ತಲಿನ ಹಳ್ಳಿಗಾಡಿನಿಂದ ಬರಿಗಾಲಲ್ಲಿ ಭಜನೆ ಮಾಡುತ್ತ ಬರುವರ ಸಂಖ್ಯೆ ತೀರ ಕಡಿಮೆಯಿತ್ತು. 

ನಂದಿಕೋಲು ಮೆರವಣಿಗೆ: 

50ರಿಂದ 60 ಅಡಿ ಉದ್ದದ ನಂದಿಕೋಲು ಕುಣಿತವಂತೂ ಭಕ್ತರ ಆಕರ್ಷಕ ಕೇಂದ್ರವಾಗಿತ್ತು. ಸುಮಾರು ಒಂದು ಗಂಟೆಗಳ ಕಾಲ ಜಿಲ್ಲಾ ಬಣಗಾರ ಸಮಾಜ ಮಕ್ತಂಪುರ ವತಿಯಿಂದ ನಡೆದ ನಂದಿಕೋಲುಗಳ ಜಾತ್ರೆಯಲ್ಲಿ ಮೆರಗು ತಂದಿತು. 

ಭಕ್ತರಿಗೆ ಅನ್ನ ಸಂತರ್ಪಣೆ: 

ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹಸಿವು ತಣಿವು ಆಚರಿಸಲು ಶರಣಬಸವೇಶ್ವರರ ಭಕ್ತಸಮೂಹ ರಸ್ತೆಯುದ್ದಕ್ಕೂ ಪ್ರಸಾದ ವ್ಯವಸ್ಥೆ ಮಾಡಲಾಗಿತು. ಭಕ್ತರಿಗೆ ತಂಪು ಮಜ್ಜಿಗೆ, ನೀರು, ಬಾಳೆಹಣ್ಣು, ದ್ರಾಕ್ಷಿ, ತಿನಿಸು ವಿತರಿಸಲಾಯಿತು. 

ಬಿಗಿ ಬಂದೋಬಸ್ತ್: 

ಜಾತ್ರೆಯಲ್ಲಿ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ರಥ ಸಾಗುವ ದಾರಿಯುದ್ದಕ್ಕೂ ಜನರು ಸೇರಿದಂತೆ ಎಚ್ಚರಿಕೆ ವಹಿಸಲಾಗಿತ್ತು. ರಥೋತ್ಸವ ವೀಕ್ಷಣೆ ಎಲ್ಲರಿಗೂ ದೊರೆಯುವಂತೆ ಮಾಡಲು ಮಠದ ಆವರಣ ಮತ್ತು ಮುಖ್ಯ ರಸ್ತೆಯಲ್ಲಿ ಬೃಹತ್ ಎಲ್‌ಇಡಿ ಪರದೆ ಅಳವಡಿಸಲಾಗಿತ್ತು.

ಕೊರೋನಾದಿಂದ ಕಾಪಾಡಪ್ಪ

ಸುಪ್ರಸಿದ್ದ ಶರಣಬಸವೇಶ್ವರ ರಥೋತ್ಸವಕ್ಕೆ ಕೊರೋನಾ ಎಫೆಕ್ಟ್‌ದಿಂದ ಜನರು ಸೇರುವ ಮುಂಚೆ ರಥೋತ್ಸವ ನಡೆಸಿದರೆ ಭಕ್ತರೊಬ್ಬರು ರಥದ ಮೇಲೆ ಎಸೆಯುವ ಬಾಳೆಹಣ್ಣಿನ ಮೇಲೆ ಕೊರೋನಾದಿಂದ ಕಲಬುರಗಿಯನ್ನು ಕಾಪಾಡಪ್ಪ ಶರಣ ಬಸವ ಎಂದು ಬರೆದು ಎಸೆದಿರುವುದು, ಇನ್‌ಸ್ಟಾಗ್ರಾಮ್ ಕಲಬುರಗಿ ಕಂಪು ಪೇಜ್‌ನಲ್ಲಿ ಈ ಬಾಳೆಹಣ್ಣು ಚಿತ್ರ ಹರಿದಾಡುತ್ತಿದೆ.
 

click me!