
ಬೆಂಗಳೂರು(ಸೆ.29): ವೀರಶೈವ ಲಿಂಗಾಯತ ಸಮುದಾಯದ ಹಲವು ಜಾತಿಗಳ ನಡುವೆ ಒಗ್ಗಟ್ಟು ಇಲ್ಲದ ಕಾರಣ ಸಮುದಾಯದ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗುತ್ತಿದೆ. ಹೀಗಾಗಿ, ಸಮುದಾಯದ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಗುರುವಾರ ನಗರದ ಜಗದ್ಗುರು ರೇಣುಕಾಚಾರ್ಯ ಮಹಾವಿದ್ಯಾಲಯದ ಷರಾಫ್ ಬಸಪ್ಪ ಸಭಾಂಗಣದಲ್ಲಿ ನಡೆದ ವೀರಶೈವ ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ''ಪ್ರತಿಭಾ ಪುರಸ್ಕಾರ ಮತ್ತು ಪೂಜ್ಯ ಹಾನಗಲ್ ಕುಮಾರೇಶ್ವರ ಪ್ರಶಸ್ತಿ ಪ್ರದಾನ'' ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದಾವಣಗೆರೆ, ದುರ್ಗಕ್ಕೆ ಪ್ರತ್ಯೇಕ ಹಾಲು ಒಕ್ಕೂಟ ರಚನೆ: ಸಚಿವ ಮಲ್ಲಿಕಾರ್ಜುನ್ ಭರವಸೆ
ಎಲ್ಲ ಜಾತಿ ಸಮುದಾಯಗಳು ಅವರವರ ಸಮುದಾಯದ ಅಧಿಕಾರಿಗಳಿಗೆ ಉತ್ತಮ ಹುದ್ದೆ ನೀಡುತ್ತಾರೆ. ಆದರೆ, ನಮ್ಮ ಸಮುದಾಯದಲ್ಲಿ ಒಗ್ಗಟ್ಟಿಲ್ಲದ ಕಾರಣ ಮೂಲೆಗುಂಪು ಮಾಡಲಾಗಿದ್ದು, ಅನ್ಯಾಯವಾಗುತ್ತಿದೆ. ನಮ್ಮವರ ಪಾಡು ನಾಯಿ ಪಾಡು ಆಗಿದೆ. ಮಾಜಿ ಸಿಎಂಗಳಾದ ನಿಜಲಿಂಗಪ್ಪ, ಎಸ್.ಆರ್. ಬೊಮ್ಮಾಯಿ ಹಾಗೂ ವೀರೇಂದ್ರ ಪಾಟೀಲ್ ಅವರ ಅವಧಿಯಲ್ಲಿ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ನೀಡಲಾಗಿತ್ತು. ಆದರೀಗ ಪರಿಸ್ಥಿತಿ ಬದಲಾಗಿ ಮೂಲೆ ಗುಂಪು ಮಾಡಲಾಗಿದೆ. ಹೀಗಾಗಿ, ಸಮುದಾಯ ಒಗ್ಗಟ್ಬಾಗಬೇಕು. ಬೇರೆ ಬೇರೆ ಜಾತಿಗಳೆಂದು ಕಿತ್ತಾಡಬಾರದು ಎಂದು ಸಲಹೆ ನೀಡಿದರು.
ಐಪಿಎಸ್ ಅಧಿಕಾರಿ ಜಿ.ಎಚ್. ಸತೀಶ್ ಚಂದ್ರ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಪಡೆಯುವ ಅಂಕಗಳು ಅಷ್ಟೊಂದು ಮುಖ್ಯವಲ್ಲ ಎನ್ನುವುದನ್ನು ನಾವು ಕೇಳುತ್ತಿರುತ್ತೇವೆ. ಆದರೆ, ಈ ಪ್ರತಿಭಾ ಪುರಸ್ಕಾರಕ್ಕೆ ಹೆಚ್ಚು ಅಂಕ ಪಡೆದವರನ್ನೇ ಪರಿಗಣಿಸಲಾಗಿದೆ. ಕಾಲೇಜುಗಳಿಗೆ ಪ್ರವೇಶ, ಕೆಲಸ, ಸಂದರ್ಶನ, ಹುದ್ದೆಗಳಲ್ಲಿ ಅಂಕಗಳನ್ನೇ ಪರಿಗಣಿಸುತ್ತಾರೆ ಎಂಬುದನ್ನು ನಾವು ಮರೆಯಬಾರದು. ಸಂವಹನ, ವೃತ್ತಿ ಕೌಶಲ್ಯ, ಕ್ಷೇತ್ರದ ಪರಿಣತಿ ಜೊತೆಗೆ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡುವುದು ಅತಿ ಮುಖ್ಯ. ಪ್ರತಿಯೊಂದು ಕೆಲಸ, ಹುದ್ದೆಗೆ ಭಾರಿ ಪೈಪೋಟಿ ಇದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸ್ಪರ್ಧೆ ತೀವ್ರವಾಗಿದೆ. ನಿಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಹೊಸನಗರದ ಮೂಲೇಗದ್ದೆಮಠ ಸದಾನಂದ ಶಿವಯೋಗಾಶ್ರಮದ ಶ್ರೀ ಚನ್ನಬಸವ ಮಹಾಸ್ವಾಮೀಜಿ, ಬಿಬಿಎಂಪಿ ಮಾಜಿ ಮೇಯರ್‌ಗಳಾದ ಗಂಗಾಂಬಿಕಾ ಮಲ್ಲಿಕಾರ್ಜನ, ಬಿ.ಎಸ್. ಪುಟ್ಟರಾಜು ಹಾಗೂ ಮಹಾಸಭಾದ ಪದಾಧಿಕಾರಿಗಳು ಸೇರಿದಂತೆ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.