
ಭಟ್ಕಳ (ಜೂ.19) ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸಕ್ಕಿದ್ದ ಹಿಂದೂ ಯುವತಿ(Hindu Girl)ಯನ್ನು ಕಾರಿನಲ್ಲಿ ಕರೆದೊಯ್ದ ಮುಸ್ಲಿಂ ಯುವಕ ಶಾಹೀದ್ ಖಾನ್(Shahid khan) ಎಂಬಾತನನ್ನು ಯುವತಿಯ ದೂರಿನ ಮೇರೆಗೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪಟ್ಟಣದ ಸೂಪರ್ ಮಾರ್ಕೆಟೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾರುಕೇರಿ ಭಾಗದ ಹಿಂದೂ ಯುವತಿಯನ್ನು ಅದೇ ಸೂಪರ್ ಮಾರ್ಕೆಟ್‌ನಲ್ಲಿ ಸೇಲ್ಸ್‌ಮನ್ ಆಗಿರುವ ಕಾರಗದ್ದೆಯ ಶಾಹೀದ್ ಖಾನ್ ಎಂಬಾತ ಬುಧವಾರ ಬೆಳಗ್ಗೆ ಕಾರಿನಲ್ಲಿ ಕರೆದೊಯ್ಯುತ್ತಿದ್ದ. ಆಗ ಸಾಗರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಅವರನ್ನು ತಡೆದು, ಪೊಲೀಸರಿಗೆ ಒಪ್ಪಿಸಿದ್ದರು. ಆದರೆ, ಪೊಲೀಸರು ಆರೋಪಿ ವಿರುದ್ದ ಪ್ರಕರಣ ದಾಖಲಿಸುವುದನ್ನು ಬಿಟ್ಟು ಯುವತಿಯನ್ನು ರಕ್ಷಿಸಿದ ಹಿಂದೂ ಕಾರ್ಯಕರ್ತರಿಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದನ್ನು ವಿರೋಧಿಸಿ ಬಿಜೆಪಿ ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಬುಧವಾರ ರಾತ್ರಿ ನಗರ ಪೊಲೀಸ್ ಠಾಣೆ ಮುಂದೆ ಧರಣಿ ನಡೆಸಿದ್ದರು.
ಈ ಮಧ್ಯೆ, ಹಿಂದೂ ಯುವತಿ ಠಾಣೆಯಲ್ಲಿ ಶಾಹೀದ್ ಖಾನ್ ವಿರುದ್ದ ದೂರು ನೀಡಿದ್ದು, ನಿನ್ನ ಬಳಿ ಮಾತನಾಡುವುದಿದೆ ಎಂದು ಒತ್ತಾಯಪೂರ್ವಕವಾಗಿ ಕಾರಿನಲ್ಲಿ ಹತ್ತಿಸಿಕೊಂಡು, ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.