
ಬೆಳಗಾವಿ, [ಡಿ.09]: ವಿವಿಧ ಜಾತಿಯ ಸುಮಾರು 30ಕ್ಕೂ ಹೆಚ್ಚು ವಿಷಕಾರಿ ಹಾವುಗಳು ಕೊಳವೆಬಾವಿ ಪಂಪ್ ಸೆಟ್‌ನ ಪೈಪುಗಳಲ್ಲಿ ಸಿಲುಕಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಭೀಮು ಸಂಗಮೆ ಎಂಬ ರೈತನ ಹೊಲದಲ್ಲಿ ಈ ಹಾವುಗಳು ಸಾಮೂಹಿಕವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ರೈತ ಭೀಮು ಅವರ ಜಮೀನು ಕೃಷ್ಣಾ ನದಿಗೆ ಹೊಂದಿಕೊಂಡಿದೆ.
ಮಳೆಗಾಲದಿಂದಾಗಿ ಕೃಷ್ಣಾ ನದಿಗೆ ಜೀವಕಳೆ ಬಂದಿದ್ದರಿಂದ ಕಳೆದ ಒಂದು ತಿಂಗಳಿಂದ ಪಂಪಸೆಟ್ ಬಂದ್ ಆಗಿತ್ತು. ಆದರೆ, ಇತ್ತೀಚೆಗೆ ನದಿಯಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿತ್ತು.
ಹೀಗಾಗಿ ಇತ್ತೀಚೆಗೆ ಪಂಪಸೆಟ್ ಮೂಲಕ ಬೆಳೆಗಳಿಗೆ ನೀರು ಹಾಯಿಸಲು ರೈತ ಅದನ್ನು ಚಾಲು ಮಾಡಿದ್ದಾನೆ. ನಂತರ ಜಮೀನು ಕಡೆ ಹೋದಾಗ ಪೈಪ್‌ನಲ್ಲಿ ಸಿಲುಕಿಕೊಂಡಿರುವ ಮೃತ ಹಾವುಗಳ ಅವಶೇಷಗಳು ಹೊರಬಿದ್ದಿವೆ.
ಇದರಿಂದ ಗಾಬರಿಗೊಂಡ ರೈತ ಸ್ಥಳೀಯ ಪೊಲೀಸರಿಗೆ ತಕ್ಷಣ ಮಾಹಿತಿ ನೀಡಿದ್ದಾನೆ. ಕೂಡಲೇ ಅಂಕಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಹಾವುಗಳ ಅವಶೇಷಗಳನ್ನು ಪರಿಶೀಲಿಸಿದರು.
ಬಹುತೇಕ ಹಾವುಗಳು ಕೊಳವೆಬಾವಿಯೊಳಗಡೆಯಿಂದ ಹೊರಬರಲಾಗದೆ, ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.