ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವರುಣಾರ್ಭಟ ಕಡಿಮೆಯಾಗಿದ್ದರೂ ಅನಾಹುತಗಳು ಮಾತ್ರ ಮುಂದುವರಿದಿದೆ. ಶುಕ್ರವಾರವೂ ರಸ್ತೆ, ಭೂ ಕುಸಿತ ಸಂಭವಿಸಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಆ.12): ಜಿಲ್ಲೆಯಾದ್ಯಂತ ವರುಣಾರ್ಭಟ ಕಡಿಮೆಯಾಗಿದ್ದರೂ ಅನಾಹುತಗಳು ಮಾತ್ರ ಮುಂದುವರಿದಿದೆ. ಶುಕ್ರವಾರವೂ ರಸ್ತೆ, ಭೂ ಕುಸಿತ ಸಂಭವಿಸಿದ್ದು, ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.
ತೋಟದಲ್ಲಿ ಭಾರೀ ಭೂ ಕುಸಿತ: ತಾಲ್ಲೂಕಿನ ಶಾಸಕ ಸಿ.ಟಿ.ರವಿ ಅವರ ತವರು ಗ್ರಾಮ ಚಿಕ್ಕಮಾಗರವಳ್ಳಿಯಲ್ಲಿ ಭಾರೀ ಭೂ ಕುಸಿತ ಸಂಭವಿಸಿ ಲೋಕೇಶ್ ಗೌಡ ಎಂಬುವವರಿಗೆ ಸೇರಿದ ಸುಮಾರು ಒಂದು ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಭೂಕುಸಿತದಿಂದ ಸುಮಾರು 30 ಅಡಿಯಷ್ಟು ಕಂದಕ ನಿರ್ಮಾಣವಾಗಿದೆ. ತೋಟದ ತುಂಬಾ ಕೆಸರು ಆವರಿಸಿಕೊಂಡಿದ್ದು, ಕಾಫಿ, ಮೆಣಸು, ಅಡಿಕೆ ಪಸಲು ನಾಶವಾಗಿದೆ. ಹತ್ತಾರು ವರ್ಷಗಳಿಂದ ಬೆಳೆದು ನಿಂತಿದ್ದ ಉಪಯುಕ್ತ ಮರಗಳು, ಅದಕ್ಕೆ ಹಬ್ಬಿದ್ದ ಮೆಣಸಿನ ಬಳ್ಳಿಗಳು, ಸಾವಿರಾರು ಕಾಫಿ ಗಿಡಗಳ ಸಮೇತ ಇಡೀ ತೋಟವೇ ಕಳಚಿ ಬಿದ್ದಿದೆ. ಭೂ ಕುಸಿತದಿಂದ ವಾಸದ ಮನೆಯ ಕುಸಿಯುವ ಭೀತಿ ಉಂಟಾಗಿದೆ. ಮಳೆ ಮುಂದುವರಿದಲ್ಲಿ ಇನ್ನಷ್ಟು ಭೂ ಕುಸಿತ ಸಂಭವಿಸುವ ಸಾಧ್ಯತೆ ಇದೆ.
ಸಿಎಂ ಬದಲಾವಣೆ ಕಪೋಲಕಲ್ಪಿತ: ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಿ.ಟಿ.ರವಿ ವ್ಯಂಗ್ಯ
ಕೊಚ್ಚಿ ಹೋದ ರಸ್ತೆ: ಮಳೆ ನಿಂತರೂ ತೇವಾಂಶ ಹೆಚ್ಚಿರುವ ಕಾರಣ ಕೊಪ್ಪಾ ತಾಲ್ಲೂಕು ಹೆಗ್ಗಾರು ಕೂಡಿಗೆಯಲ್ಲಿ ರಸ್ತೆ ಕೊಚ್ಚಿಹೋಗಿದ್ದು, ತಾಲೂಕಿನ ಹೆಗ್ಗಾರು ಕೂಡಿಗೆ ಗ್ರಾಮ, ಮೇಗೂರು, ಕೊಗ್ರೆ, ತಲವಾನೆ ಸೇರಿ ಹತ್ತಾರು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ವಿದ್ಯಾರ್ಥಿಗಳು, ಜನಸಾಮಾನ್ಯರು ಪರದಾಡುವಂತಾಗಿದ್ದು, ಸ್ಥಳೀಯರು ಇಂಜಿನಿಯರ್‌ರನ್ನ ತರಾಟೆಗೆ ತೆಗೆದುಕೊಂಡು ಕೂಡಲೇ ರಸ್ತೆ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಡಿಕೆ ಮರಗಳು ನಾಶ: ಭಾರೀ ಮಳೆ, ಗಾಳಿಯಿಂದಾಗಿ ಅಡಿಕೆ ಮರಗಳು ಬುಡಮೇಲಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಕನ್ನೆಹಳ್ಳಿ ಗ್ರಾಮದಲ್ಲಿ ನಡೆದಿದೆ. ಹರೀಶ್ ಎಂಬುವರಿಗೆ ಸೇರಿದ ಅಡಿಕೆ ತೋಟಕ್ಕೆ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಮಳೆ-ಗಾಳಿಯ ಅಬ್ಬರಕ್ಕೆ ಕೆಲವು ಮರಗಳು ಬುಡ ಸಹಿತ ನೆಲ ಕಚ್ಚಿದ್ದರೆ ಇನ್ನೂ ಹಲವು ಮರಗಳು ಮಧ್ಯಕ್ಕೆ ಮುರಿದು ಬಿದ್ದಿವೆ. ಇದರಿಂದ ಕಾಳು ಮೆಣಸಿಗೂ ಹಾನಿ ಉಂಟಾಗಿದೆ.
ಮಲೆನಾಡು ಭಾಗದಲ್ಲಿ ಮುಂದುವರಿದ ಮಳೆ ಅವಾಂತರ, ಶಾಲೆಗಳಿಗೆ ರಜೆ: ಮಳೆ ನಿಂತರೂ ಮಲೆನಾಡಿನಲ್ಲಿ ಅನಾಹುತಗಳ ಸರಣಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಮೂಡಿಗೆರೆ ತಾಲ್ಲೂಕಿನ ಅಂಗನವಾಡಿ ಹಾಗೂ ಶಾಲೆಗಳಿಗೆ ಶುಕ್ರವಾರವೂ ರಜೆ ನೀಡಲಾಗಿತ್ತು. ತಹಸೀಲ್ದಾರ್ ಅವರು ಅಂಗನವಾಡಿಗಳಿಗೆ ರಜೆ ಘೋಷಿಸಿದ್ದರೆ ಒಂದರಿಂದ ಹತ್ತನೇ ತರಗತಿ ವರೆಗೆ ರಜೆ ಘೋಷಿಸಿ ಬ್ಲಾಕ್ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ.
ಕೆಜೆಪಿ ಕಟ್ಟಿದ್ದಾಗ ಹಾವೇರಿಯಲ್ಲಿ ಸಿದ್ದರಾಮೋತ್ಸವಕ್ಕಿಂತ ಜಾಸ್ತಿ ಜನ ಸೇರಿದ್ದರು: ಸಚಿವ ಮಾಧುಸ್ವಾಮಿ
ಮದಗದ ಕೆರೆ ಏರಿ ಬಿರುಕು ಸ್ಥಳೀಯರಲ್ಲಿ ಆತಂಕ: ಚಿಕ್ಕಮಗಳೂರಿನಲ್ಲಿ ನಿಲ್ಲದ ಮಳೆಯ ಅವಾಂತರಿಂದಾಗಿ ಕಡೂರು ತಾಲೂಕಿನ ಐತಿಹಾಸಿಕ ಮದಗದ ಕೆರೆ ಕೋಡಿ ಹೊಡೆದು ಏರಿ ಬಳಿಯೇ ಬಿರುಕು ಬಿಟ್ಟಿದೆ. ನೀರು ಹಾಯಿಸೋ ಬ್ಯಾರೇಜ್ ಬಳಿಯೂ ಬಿರುಕು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಕೆರೆ ಬಳಿಯ ಗುಡ್ಡದಲ್ಲೂ ಭೂಕುಸಿತ ಕಂಡು ಬಂದಿದ್ದು, ಏರಿಯಾ ಮಣ್ಣು ಕುಸಿಯುತ್ತಿದೆ. ಏರಿಯಲ್ಲಿ ಬಿರುಕು ಹಿನ್ನೆಲೆ ಅಪಾರ ಪ್ರಮಾಣದ ನೀರು ಹೊರಕ್ಕೆ ಹೋಗುತ್ತಿದೆ. ಚಂದ್ರದ್ರೋಣ ಪರ್ವತ ಹಾಗೂ ಚಿಕ್ಕಮಗಳೂರಿನಲ್ಲಿ ಬಾರಿ ಮಳೆ ಹಿನ್ನಲೆಯಲ್ಲಿ ಕೆರೆಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಏರಿ ಬಿರುಕು ಬಿಟ್ಟ ಬೆನ್ನಲ್ಲೇ ಸುತ್ತಮುತ್ತ ಗ್ರಾಮಗಳಲ್ಲಿ ಆತಂಕ ಎದುರಾಗಿದ್ದು, ತುರ್ತು ಕ್ರಮ ಕೈಗೊಳ್ಳದಿದ್ದರೆ ಅಪಾಯವಂತೂ ಫಿಕ್ಸ್ .