ಹಾಸನದಲ್ಲಿ ಎಇಇ ಬೆರಳು ತುಂಡರಿಸಿದ ಡಿ ಗ್ರೂಪ್‌ ನೌಕರ

By Web DeskFirst Published Jun 15, 2019, 9:39 AM IST
Highlights

ವಿದ್ಯುತ್‌ ವಿತರಣಾ ಕೇಂದ್ರದ ಡಿ ಗ್ರೂಪ್‌ ನೌಕರನೊಬ್ಬ ಸಹಾಯಕ ಕಾರ್ಯಪಾಲಕ ಮಹಿಳಾ ಎಂಜಿನಿಯರ್‌ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಬೆರಳುಗಳನ್ನು ತುಂಡರಿಸಿರುವ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ (ಜೂ.15) :  ಸೆಸ್ಕಾಂನ ವಿದ್ಯುತ್‌ ವಿತರಣಾ ಕೇಂದ್ರದ ಡಿ ಗ್ರೂಪ್‌ ನೌಕರನೊಬ್ಬ ಸಹಾಯಕ ಕಾರ್ಯಪಾಲಕ ಮಹಿಳಾ ಎಂಜಿನಿಯರ್‌(ಎಇಇ) ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಬೆರಳುಗಳನ್ನು ತುಂಡರಿಸಿರುವ ಘಟನೆ ನಗರದ ಸಂತೆಪೇಟೆಯಲ್ಲಿ ಶುಕ್ರವಾರ ನಡೆದಿದೆ. ಸೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌(ಎಇಇ) ಸ್ವಾತಿ ದೀಕ್ಷಿತ್‌ ಹಲ್ಲೆಗೊಳಗಾದವರು. 

ಅಲ್ಲದೇ, ಹಲ್ಲೆಯನ್ನು ತಡೆಯಲು ಬಂದ ಕಚೇರಿ ಸಹೋದ್ಯೋಗಿ ವೆಂಕಟೇಗೌಡ ಎಂಬುವರ ಮೇಲೆ ಹಲ್ಲೆ ಮಾಡಲಾಗಿದ್ದು, ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಮಂಜುನಾಥ್‌ನನ್ನು ಬಂಧಿಸಲಾಗಿದ್ದು, ಸೇವೆಯಿಂದ ಅಮಾನತು ಮಾಡಲಾಗಿದೆ. ಶುಕ್ರವಾರ ಬೆಳಗ್ಗೆ ಎಂದಿನಂತೆ ಕಚೇರಿ ಆಗಮಿಸಿದ ಆರೋಪಿ ಮಂಜುನಾಥ್‌ ಕಚೇರಿ ಆವರಣದಲ್ಲಿ ಬೆಳೆದಿದ್ದ ಕಳೆಯನ್ನು ಕತ್ತಿಯಿಂದ (ಕುಡಗೋಲು) ತೆಗೆಯುತ್ತಿದ್ದ. ಈ ವೇಳೆ ಸ್ಥಳಕ್ಕಾಗಮಿಸಿದ ಎಇಇ ಸ್ವಾತಿ, ಸರಿಯಾಗಿ ಕಳೆಯನ್ನು ತೆಗೆಯುವಂತೆ ಮಂಜುನಾಥ್‌ಗೆ ಹೇಳಿದ್ದಾರೆ. 

ಈ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ತಾಳ್ಮೆಗೆಟ್ಟಆರೋಪಿ ಕೈಯಲ್ಲಿದ್ದ ಕತ್ತಿಯಲ್ಲಿ ಸ್ವಾತಿ ಮೇಲೆ ಹಲ್ಲೆ ನಡೆಸಿದ್ದು, ಅವರ ಎಡಗೆನ್ನೆ, ತಲೆಗೆ ಏಟು ಬಿದ್ದಿದೆ ಹಾಗೂ ಬಲಗೈ ಮಧ್ಯದ ಎರಡು ಬೆರಳು ತುಂಡಾಗಿವೆ ತಿಳಿಸಿದ್ದಾರೆ.

ಚುನಾವಣೆ ದ್ವೇಷ?:

ಸೆಸ್ಕಾಂ ನೌಕರರ ಸಂಘದ ಚುನಾವಣೆ ವೇಳೆ ಸ್ವಾತಿ ಅವರು ಹೇಳಿದವರಿಗೆ ಮತ ಹಾಕಿರಲಿಲ್ಲ. ಇದರಿಂದ ವಿನಾಕಾರಣ ಸಣ್ಣಪುಟ್ಟವಿಷಯಗಳಿಗೆ ನನಗೆ ತೊಂದರೆ ಕೊಡುತ್ತಿದ್ದರು. ಇಂದು (ಶುಕ್ರವಾರ) ಸಹ ನನ್ನ ಪಾಡಿಗೆ ನಾನು ಗಿಡ ಕತ್ತರಿಸುತ್ತಿದ್ದಾಗ ಬಂದು, ನೀನು ಮಾಡುತ್ತಿರುವುದು ಸರಿಯಲ್ಲ ಎಂದು ಸುಮ್ಮನೆ ತೆಗಳಿದರು. ಇದರಿಂದ ಕುಪಿತಗೊಂಡು ಹಲ್ಲೆ ನಡೆಸಿದೆ ಎಂದು ಆರೋಪಿ ಮಂಜುನಾಥ್‌ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!