ಸ್ಮಾರ್ಟ್ ಆಯ್ತು ಸಾರಿಗೆ ಸಂಸ್ಥೆ; 15 ಲಕ್ಷ ಡೌನ್‌ಲೋಡ್, 2.7 ಲಕ್ಷ ಸೀಟ್‌ ಬುಕ್ಕಿಂಗ್‌

Published : Oct 22, 2026, 09:34 AM IST
Byrathi Suresh

ಸಾರಾಂಶ

'ಒಂದು ಕರ್ನಾಟಕ ಮೊಬಿಲಿಟಿ ಆ್ಯಪ್'ಗೆ ಉತ್ತಮ ಸ್ಪಂದನೆ ಸಿಕ್ಕಿದ್ದು, ಕೇವಲ ಒಂದು ತಿಂಗಳಲ್ಲಿ 15 ಲಕ್ಷ ಟಿಕೆಟ್ ಡೌನ್‌ಲೋಡ್ ಆಗಿದೆ. ಮೊಬೈಲ್ ಆ್ಯಪ್ ಜೊತೆಗೆ ವಾಟ್ಸ್‌ಆ್ಯಪ್ ಮೂಲಕವೂ ಬಸ್ ಟಿಕೆಟ್ ಕಾಯ್ದಿರಿಸುವ ಮತ್ತು ರದ್ದುಗೊಳಿಸುವ ಸುಲಭ ಸೌಲಭ್ಯವನ್ನು ಪ್ರಯಾಣಿಕರಿಗೆ ಕಲ್ಪಿಸಲಾಗಿದೆ.

ಅಜೀಜ ಅಹ್ಮದ ಬಳಗಾನೂರ

ಹುಬ್ಬಳ್ಳಿ:  ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುವ "ಒಂದು ಕರ್ನಾಟಕ ಮೊಬಿಲಿಟಿ (KSRTC AWATAR v2.0) ಆ್ಯಪ್‌"ಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಬಸ್‌ ಟಿಕೆಟ್‌ಗಾಗಿ ಗಂಟೆಗಟ್ಟಲೆ ಕೌಂಟರ್‌ನಲ್ಲಿ ಸರದಿ ನಿಲ್ಲುವ ಸಮಸ್ಯೆಯಿಂದ ಮುಕ್ತಿ ದೊರೆತಂತಾಗಿದೆ.

2026ರ ಸೆ. 10ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದಲ್ಲಿ ಚಾಲನೆ ನೀಡಿದ ಈ ಡಿಜಿಟಲ್‌ ಸೌಲಭ್ಯ, ಒಂದೇ ತಿಂಗಳಲ್ಲಿ 15 ಲಕ್ಷ ಟಿಕೆಟ್‌ ಡೌನ್‌ಲೋಡ್‌ ಕಂಡಿದೆ. ಈ ಅವಧಿಯಲ್ಲಿ 2.7 ಲಕ್ಷ ಸೀಟು ಕಾಯ್ದಿರಿಸಲಾಗಿದೆ.

ವಾಟ್ಸ್‌ಆ್ಯಪ್‌ನಲ್ಲೂ ಟಿಕೆಟ್‌

ಮೊಬೈಲ್‌ ಆ್ಯಪ್‌ ಬಳಸುವ ಜತೆಗೆ ವಾಟ್ಸ್‌ಆ್ಯಪ್‌ ಮೂಲಕವೂ ಬಸ್‌ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ವ್ಯವಸ್ಥೆ ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗಳ ಬಸ್‌ಗಳಿಗೆ ಮಾತ್ರ ಲಭ್ಯವಿದೆ. ಇದಕ್ಕಾಗಿ 6364940880 ಸಂಖ್ಯೆಗೆ ವಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಬೇಕು. ಬಳಿಕ ಪ್ರಯಾಣ ಆರಂಭದ ಸ್ಥಳ, ತಲುಪಬೇಕಾದ ಸ್ಥಳ ಮತ್ತು ದಿನಾಂಕ ಆಯ್ಕೆ ಮಾಡಿ, ಬಸ್‌ ಹಾಗೂ ಸೀಟು ಕಾಯ್ದಿರಿಸಬಹುದು.

ಪ್ರಯಾಣಿಕರ ವಿವರಗಳನ್ನು ನಮೂದಿಸಿ, ಪರಿಶೀಲಿಸಿದ ಬಳಿಕ ಯುಪಿಐ, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌ ಅಥವಾ ಡಿಜಿಟಲ್‌ ವ್ಯಾಲೆಟ್‌ ಮೂಲಕ ಹಣ ಪಾವತಿಸಬಹುದು. ಗರಿಷ್ಠ 30 ದಿನಗಳ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸಲು ಅವಕಾಶವಿದೆ. ಪಾವತಿ ಪೂರ್ಣಗೊಂಡ ಬಳಿಕ ಟಿಕೆಟ್‌ ದೃಢೀಕರಣ ಮತ್ತು ಇ-ಟಿಕೆಟ್‌ ವಾಟ್ಸ್‌ಆ್ಯಪ್‌ ಹಾಗೂ ಇ-ಮೇಲ್‌ ಮೂಲಕ ತಲುಪುತ್ತವೆ.

ದೂರು ಸಲ್ಲಿಕೆ, ಟಿಕೆಟ್‌ ರದ್ದತಿ

ಆ್ಯಪ್‌ನಲ್ಲಿ ಹಿಂದಿನ ಟಿಕೆಟ್‌ ಬುಕ್ಕಿಂಗ್‌ ವಿವರಗಳನ್ನು ವೀಕ್ಷಿಸುವುದು, ವಹಿವಾಟು ನಿರ್ವಹಿಸುವುದು ಹಾಗೂ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಸಂಬಂಧಿಸಿದ ದೂರು ಸಲ್ಲಿಸುವ ಸೌಲಭ್ಯವಿದೆ. ಸಲ್ಲಿಸಿದ ದೂರಿನ ಸ್ಥಿತಿಯನ್ನು ಪರಿಶೀಲಿಸುವ ಜತೆಗೆ ಮುಂದಿನ ಕ್ರಮದ ಮಾಹಿತಿಯನ್ನೂ ಪಡೆಯಬಹುದು. ವಾಟ್ಸ್‌ಆ್ಯಪ್‌ ಮೂಲಕ ಕಾಯ್ದಿರಿಸಿದ ಟಿಕೆಟ್‌ ರದ್ದುಗೊಳಿಸಲು ಅದೇ ಸಂಖ್ಯೆಗೆ ಸಂದೇಶ ಕಳುಹಿಸಿ "ಟಿಕೆಟ್‌ ರದ್ದತಿ" ಆಯ್ಕೆ ಮಾಡಬೇಕು. ಬಳಿಕ ಪಿಎನ್‌ಆರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆ ಮತ್ತು ಬುಕ್ಕಿಂಗ್‌ ವೇಳೆ ದೊರೆತ ವಹಿವಾಟಿನ ಪಾಸ್‌ವರ್ಡ್‌ ನಮೂದಿಸಿದರೆ ಟಿಕೆಟ್‌ ರದ್ದಾಗಲಿದೆ.

ದಾಖಲೆ ಬರೆದ ವಾಟ್ಸಪ್ ಬುಕ್ಕಿಂಗ್

ಮುಂದಿನ ಹಂತದಲ್ಲಿ ಡಿಜಿಟಲ್‌ ಮಾಸಿಕ ಬಸ್‌ ಪಾಸ್‌ ಬುಕ್ಕಿಂಗ್‌, ವಿತರಣೆ ಮತ್ತು ನಿರ್ವಹಣೆಯ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಪಾಸ್‌ಗಳ ಪರಿಶೀಲನೆಗೆ ಕ್ಯೂಆರ್‌ ಕೋಡ್‌ ವ್ಯವಸ್ಥೆಯನ್ನೂ ಪರಿಚಯಿಸುವ ಯೋಜನೆಯಿದೆ. ವಾಟ್ಸ್‌ಆ್ಯಪ್‌ ಮೂಲಕದ ಬುಕ್ಕಿಂಗ್‌ಗಳನ್ನು ಪ್ರತ್ಯೇಕವಾಗಿ ಗುರುತಿಸಲು ವರದಿಗಳು ಹಾಗೂ ಟಿಕೆಟ್‌ ದಾಖಲೆಗಳಲ್ಲಿ "ವಾಟ್ಸ್‌ಆ್ಯಪ್‌ ಬುಕ್ಕಿಂಗ್‌" ಎಂದು ನಮೂದಿಸಲಾಗುತ್ತದೆ.

ಸಹಾಯವಾಣಿ ಸಂಖ್ಯೆ ಈ ರೀತಿಯಾಗಿದೆ

ಕೆಎಸ್‌ಆರ್‌ಟಿಸಿ 24 ಗಂಟೆಗಳ ಸಹಾಯವಾಣಿ 080-26252625. AWATAR ಸೆಲ್‌ ಸಂಪರ್ಕ ಸಂಖ್ಯೆಗಳು 7760990034 ಮತ್ತು 7760990035(ಸಮಯ ಬೆಳಗ್ಗೆ 7ರಿಂದ ರಾತ್ರಿ 10ರ ವರೆಗೆ).

KSRTC AWATAR v2.0 ಆ್ಯಪ್

ನಾಲ್ಕು ಸಾರಿಗೆ ಸಂಸ್ಥೆಗಳು ಯಾವುದೇ ಖಾಸಗಿ ಸಾರಿಗೆ ಸಂಸ್ಥೆಗಳಿಗೂ ಕಡಿಮೆ ಇಲ್ಲ. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಜನರಿಗೆ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ KSRTC AWATAR v2.0 ಆ್ಯಪ್ ಜನಪ್ರಿಯವಾಗುತ್ತಿದ್ದು, ಹೆಚ್ಚಿನ ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು.

ಭೈರತಿ ಸುರೇಶ, ಸಾರಿಗೆ ಸಚಿವರು

  • ಆ್ಯಪ್‌ ಆರಂಭವಾದ ಒಂದೇ ತಿಂಗಳಿಗೆ 15 ಲಕ್ಷ ಡೌನ್‌ಲೋಡ್, 2.7 ಲಕ್ಷ ಸೀಟ್‌ ಬುಕ್ಕಿಂಗ್‌
  • ಒಂದೇ ಆ್ಯಪ್‌ನಲ್ಲಿ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ ಸೇವೆ ಲಭ್ಯ
  • ಮೊಬೈಲ್‌ ಆ್ಯಪ್‌ ಜತೆಗೆ ವಾಟ್ಸ್‌ಆ್ಯಪ್‌ ಮೂಲಕವೂ ಬಸ್‌ ಟಿಕೆಟ್‌ ಕಾಯ್ದಿರಿಸುವ ಸೌಲಭ್ಯ

PREV
Read more Articles on
click me!

Recommended Stories

ಬೆಂಗಳೂರಲ್ಲಿ ಕೈಕೊಟ್ಟ ಸ್ಪೈಸ್‌ ಜೆಟ್‌ನ 3 ವಿಮಾನಗಳು.. ಪ್ರಯಾಣಿಕರಿಂದ ಭುಗಿಲೆದ್ದ ಆಕ್ರೋಶ
'ಪ್ರೇಮದ ಊರಲಿ' ಶೂಟಿಂಗ್ ಸ್ಪಾಟ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್; ಸೀಗೆಗುಡ್ಡ ಮಳೆ ಮಲ್ಲೇಶ್ವರ ಬೆಟ್ಟದಲ್ಲಿ ಜನವೋ ಜನ!