
ಕೊಪ್ಪಳ: ಪ್ರೇಮ ಸಂಬಂಧ ಹಾಗೂ ಮದುವೆಗೆ ಅಡ್ಡಿಯಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಡೆತ್‌ನೋಟ್ ಬರೆದಿಟ್ಟು ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ತುಂಗಭದ್ರಾ ಜಲಾಶಯದ ಹಿನ್ನೀರಿಗೆ ಬಿದ್ದು ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಸಂಗೀತ ಮೇಟಿ ಮೃತ ಶಿಕ್ಷಕಿ.
ದಸರಾ ಹಬ್ಬದ ದಿನದಂದು ಸಂಗೀತ ಅವರು ಕೊಪ್ಪಳಕ್ಕೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದು, ಬಳಿಕ ಮನೆಗೆ ಮರಳಿರಲಿಲ್ಲ. ವಿಜಯನಗರ ಜಿಲ್ಲೆ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಸಂಗೀತ ಮೇಟಿ ಅವರು ತಮ್ಮ ಸಂಬಂಧಿ ವಿಕಾಸ್ ಎಂಬುವವರನ್ನು ಸುಮಾರು 14 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರಿಬ್ಬರ ಪ್ರೇಮ ಸಂಬಂಧದ ವಿಚಾರ ಎರಡೂ ಕುಟುಂಬಗಳಿಗೂ ತಿಳಿದಿತ್ತು ಎಂದು ಹೇಳಲಾಗಿದೆ. ಆದರೆ, ಮದುವೆ ವಿಚಾರದಲ್ಲಿ ವಿಕಾಸ್ ಕುಟುಂಬದಲ್ಲಿ ಗೊಂದಲ ಉಂಟಾಗಿತ್ತು. ವಿಕಾಸ್ ಅವರ ಸಹೋದರ ವಸಂತ್ ಹಾಗೂ ಅವರ ಪತ್ನಿ ರೇಣುಕಾ ಮದುವೆಗೆ ಅಡ್ಡಿಪಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.
ಆತ್ಮ*ತ್ಯೆಗೂ ಮುನ್ನ ಸಂಗೀತಾ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ಪ್ರೇಮ ವೈಫಲ್ಯ ಹಾಗೂ ಮದುವೆಗೆ ಅಡ್ಡಿಯಾದ ಬಗ್ಗೆ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ವಿಕಾಸ್, ವಸಂತ್ ಕೊಪ್ಪದ್ ಹಾಗೂ ರೇಣುಕಾ ಅವರ ಹೆಸರುಗಳನ್ನು ಉಲ್ಲೇಖಿಸಿ, ತಮ್ಮ ಸಾವಿಗೆ ಈ ಮೂವರೇ ಕಾರಣ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮೂವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬುದಾಗಿಯೂ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿ, ಡೆತ್‌ನೋಟ್‌ನ ಸತ್ಯಾಸತ್ಯತೆ ಹಾಗೂ ಅದರಲ್ಲಿನ ಆರೋಪಗಳ ಕುರಿತು ಪರಿಶೀಲನೆ ನಡೆಸಬೇಕಿದೆ.