5 ಚಿನ್ನದ ಪದಕ ಗೆದ್ದ ಯಾಣದ ಗ್ರಾಮೀಣ ಪ್ರತಿಭೆ ಕಾವ್ಯಾ; 9.71 CGPA, PUCಯಲ್ಲಿ 97%, SSLCಯಲ್ಲಿ 95%

Published : Oct 22, 2026, 09:07 AM IST
Kavya Marathi

ಸಾರಾಂಶ

ಕುಮಟಾ ತಾಲೂಕಿನ ಯಾಣದಂತಹ ಗ್ರಾಮೀಣ ಪ್ರದೇಶದಿಂದ ಬಂದ ಕಾವ್ಯಾ ಮರಾಠಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಐದು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಬೆಂಗಳೂರಿನ ಡಾ. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ 9.71 ಸಿಜಿಪಿಎ ಗಳಿಸಿ ಕಾಲೇಜಿಗೆ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.

ಕುಮಟಾ: ಮೂಲ ಸೌಲಭ್ಯಗಳ ಕೊರತೆಯ ನಡುವೆಯೂ ಸಾಧನೆಯ ಶಿಖರವೇರಬಹುದು ಎಂಬುದನ್ನು ಕುಮಟಾ ತಾಲೂಕಿನ ಯಾಣದಂತಹ ಸೌಲಭ್ಯ ವಂಚಿತ ಗ್ರಾಮೀಣ ಪರಿಸರದಿಂದ ಬಂದ ಪ್ರತಿಭೆ ಕಾವ್ಯಾ ಮರಾಠಿ ಸಾಬೀತುಪಡಿಸಿದ್ದಾಳೆ. ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್(ಸಿಎಸ್‌ಇ) ವಿಭಾಗದಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ.

9.71 ಸಿಜಿಪಿಎ ಗಳಿಕೆ

ಬೆಂಗಳೂರಿನ ಡಾ. ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ ಕಾವ್ಯಾ, 9.71 ಸಿಜಿಪಿಎ ಗಳಿಸಿ ಕಾಲೇಜಿನ ಇನ್‌ಸ್ಟಿಟ್ಯೂಟ್ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಸಿಎಸ್‌ಇ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ ತನ್ನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

ಕಾವ್ಯಾ ತನ್ನ ಶೈಕ್ಷಣಿಕ ಸಾಧನೆಗಾಗಿ ಐದು ಪ್ರತಿಷ್ಠಿತ ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ಇನ್‌ಸ್ಟಿಟ್ಯೂಟ್ ಟಾಪರ್ ಅಮಾಂಗ್ ಗರ್ಲ್ಸ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ಪ್ರೋಗ್ರಾಂನಲ್ಲಿ ಪ್ರಥಮ ರ‍್ಯಾಂಕ್, ಬೆಸ್ಟ್ ಪರ್ಫಾರ್ಮರ್ ಆಫ್ ದಿ ಇನ್‌ಸ್ಟಿಟ್ಯೂಟ್, ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ ಹಾಗೂ ಇನ್‌ಸ್ಟಿಟ್ಯೂಟ್ ಟಾಪರ್ ಪ್ರಶಸ್ತಿಗಳು ಸೇರಿವೆ. ಈಚೆಗೆ ಪದಕಗಳನ್ನು ಪ್ರದಾನ ಮಾಡಲಾಯಿತು.

ಪಿಯುಸಿಯಲ್ಲಿ ಶೇ. 97.10 ಅಂಕ, SSLCಯಲ್ಲಿ ಶೇ. 95.36 ಅಂಕ

ಇದಲ್ಲದೆ, ಪಿಯುಸಿ ವ್ಯಾಸಂಗದ ಸಂದರ್ಭದಲ್ಲಿಯೂ ಕಾವ್ಯಾ ಉತ್ತಮ ಸಾಧನೆ ಮಾಡಿದ್ದರು. ಸರ್ ಎಂ. ವಿಶ್ವೇಶ್ವರಯ್ಯ ಪ್ರೀ-ಯುನಿವರ್‌ಸಿಟಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿ ಶೇ. 97.10 ಅಂಕ ಗಳಿಸಿದ್ದರು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಯೂ ಸರ್ ಎಂ. ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ಶೇ. 95.36 ಅಂಕ ಪಡೆದಿದ್ದರು.

ಸೌಲಭ್ಯಗಳ ಕೊರತೆ, ಗ್ರಾಮೀಣ ಪರಿಸರದ ಮಿತಿಗಳು ಇವೆಲ್ಲವನ್ನೂ ಮೀರಿ ಕಾವ್ಯಾ ಸಾಧಿಸಿರುವ ಈ ಯಶಸ್ಸು ವಿದ್ಯಾರ್ಥಿ ಸಮುದಾಯಕ್ಕೆ ಪ್ರೇರಣೆಯಾಗಿದೆ. ಸಾಧನೆಗೆ ನಗರಗಳಲ್ಲಿನ ಸೌಲಭ್ಯಗಳೇ ಮಾನದಂಡವಲ್ಲ; ನಿರಂತರ ಪರಿಶ್ರಮ, ಗುರಿಯೆಡೆಗಿನ ಬದ್ಧತೆ ಮತ್ತು ಆತ್ಮವಿಶ್ವಾಸ ಇದ್ದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳೂ ಉನ್ನತ ಸಾಧನೆ ಮಾಡಬಲ್ಲರು ಎಂಬುದಕ್ಕೆ ಕಾವ್ಯಾ ಮರಾಠಿ ಉದಾಹರಣೆಯಾಗಿದ್ದಾರೆ. ಇವರು ಗಣಪತಿ ಮರಾಠಿ ಹಾಗೂ ವೀಣಾ ದಂಪತಿಯ ಪುತ್ರಿ.

ಐದು ಚಿನ್ನದ ಪದಕ ಪಡೆದಿರೋ ಕಾವ್ಯಾ

ಯಾಣದಂತಹ ಸೌಲಭ್ಯ ವಂಚಿತ ಗ್ರಾಮದಿಂದ ಬೆಂಗಳೂರಿನ ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ಐದು ಚಿನ್ನದ ಪದಕಗಳನ್ನು ಗಳಿಸುವವರೆಗಿನ ಆಕೆಯ ಸಾಧನೆ ಗ್ರಾಮೀಣ ಪ್ರತಿಭೆಯ ಸಾಮರ್ಥ್ಯವನ್ನು ಎತ್ತಿ ತೋರಿಸಿದೆ. ಕಾವ್ಯಾ ಅವರ ಸಾಧನೆಗೆ ಕುಟುಂಬದವರು, ಶಿಕ್ಷಕರು, ಗ್ರಾಪಂ ಮಾಜಿ ಸದಸ್ಯ ರಾಜೀವ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.

PREV
Read more Articles on
click me!

Recommended Stories

ಕುಷ್ಟಗಿ ರೈಲ್ವೆ ಮೇಲ್ಸೇತುವೆ ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತ, ಬೆಂಗಳೂರು ರೈಲು ಸಂಚಾರಕ್ಕೆ ಒತ್ತಾಯ
73 ವರ್ಷದಿಂದ ಸಾಗುವಳಿ ಮಾಡ್ತಿರೋ ಭೂಮಿಯಲ್ಲಿ ಸೋಲಾರ್ ಘಟಕ ಆರಂಭಕ್ಕೆ ರೈತರ ವಿರೋಧ