ಆನೆ ಆಯ್ತು ಈಗ ಕಾಡುಕೋಣಗಳ ಸರಣಿ ಸಾವು

By Web DeskFirst Published Jun 7, 2019, 10:35 AM IST
Highlights

ರಾಜ್ಯದಲ್ಲಿ ಕೆಲ ದಿನಗಳಲ್ಲಿ ಸರಣಿಯಾಗಿ ಆನೆಗಳ ಸಾವು ಸಂಭವಿಸಿದ್ದು ಇದೀಗ ಕಾಡುಕೋಣಗಳು ಸರಣಿ ಸಾವನ್ನಪ್ಪಿವೆ. ಇದಕ್ಕೆ ಕಾರಣವೇನು..?

ಕಾರವಾರ: ಜೋಯಿಡಾದಲ್ಲಿ ಕಳೆದೊಂದು ತಿಂಗಳಲ್ಲಿ 5 ಕಾಡುಕೋಣಗಳು ಸಾವಿಗೀಡಾಗಿದ್ದು, ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಏತನ್ಮಧ್ಯೆ, ಕಾಡುಕೋಣಗಳ ಸಾವಿಗೆ ಸಾಂಕ್ರಾಮಿಕ ರೋಗ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮೃತ ಕಾಡುಕೋಣಗಳ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.

ಕುಂಬಾರವಾಡದಲ್ಲಿ ಎರಡು ಕಾಡುಕೋಣಗಳು ಪರಸ್ಪರ ಕಾಳಗದಲ್ಲಿ ಮೃತಪಟ್ಟಿವೆ. ಅಣಶಿ ವಲಯದಲ್ಲಿ ಒಂದು ಕಾಡುಕೋಣ ದಿಬ್ಬವನ್ನು ಏರುವಾಗ ಬಿದ್ದು ಮೃತಪಟ್ಟಿದೆ. ಗುಂದ ಹಾಗೂ ಶಿವಪುರ ಗಡಿಯಲ್ಲಿ ಆಹಾರ ಜೀರ್ಣವಾಗದೆ ಕಾಡುಕೋಣವೊಂದು ಮೃತಪಟ್ಟಿದೆ. ಮೇಲ್ನೋಟಕ್ಕೆ ಈ ಐದೂ ಕಾಡುಕೋಣಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿರುವಂತೆ ಕಾಣುತ್ತಿಲ್ಲ. ಮೇಲಾಗಿ ಈ ಸಾವು ಒಂದೇ ಪ್ರದೇಶದಲ್ಲಿ ಆಗಿಲ್ಲ. 40-50 ಕಿ.ಮೀ.ದೂರದಲ್ಲಿ ಇವು ಸತ್ತಿವೆæ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾಡುಕೋಣಗಳ ಶವ ಪರೀಕ್ಷೆ ನಡೆಸಲಾಗಿದೆ. ಶವ ಪರೀಕ್ಷೆಗೆ ಶಿವಮೊಗ್ಗದ ತಜ್ಞ ಪಶು ವೈದ್ಯರನ್ನು ಕರೆಸಲಾಗಿತ್ತು. ಆದರೂ ಯಾವುದಾದರೂ ಕಾಯಿಲೆಯಿಂದ ಮೃತಪಟ್ಟಿದೆಯೇ ಎಂದು ತಿಳಿದುಕೊಳ್ಳಲು ಬೆಂಗಳೂರಿಗೆ ರಕ್ತದ ಮಾದರಿಯನ್ನು ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಮೇಲೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

10-15 ಕಾಡುಕೋಣ ಸಾವು!:  ಜೋಯಿಡಾ ಕಾಡಿನಲ್ಲಿ 10ರಿಂದ 15 ಕಾಡುಗಳು ಮೃತಪಟ್ಟಿವೆ. ಅವು ಸಾಂಕ್ರಾಮಿಕ ರೋಗಗಳಿಂದ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ದಿನಗಳಿಂದ ಸುದ್ದಿಯೊಂದು ಹರಿದಾಡುತ್ತಿದೆ. ಇದು ವನ್ಯಮೃಗ ಪ್ರೇಮಿಗಳಲ್ಲಿ ಆತಂಕ ಮೂಡಿಸಿದೆ. ಕೆಲವು ಕಡೆ ಕಾಲುಬಾಯಿಗೆ ತುತ್ತಾಗಿ ಮೃತಪಡುವ ಜಾನುವಾರುಗಳನ್ನು ಕಾಡಿಗೆ ಎಸೆದು ಬರುವುದುಂಟು. ಈ ಮೂಲಕ ಕಾಡುಕೋಣಗಳಿಗೂ ಈ ಸೋಂಕು ಹಬ್ಬಿ ಅವು ಮೃತಪಟ್ಟಿರಬಹುದು ಎನ್ನುವ ಆತಂಕವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಆದರೆ, ಅರಣ್ಯ ಅಧಿಕಾರಿಗಳು ಮಾತ್ರ ಅಂಥ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

click me!