ಕೆಂಪೇಗೌಡ ಪ್ರಶಸ್ತಿ ನೀಡಿಕೆ ಸಂಖ್ಯೆಯಲ್ಲಿ ಇಳಿಕೆ

By Web DeskFirst Published Jun 7, 2019, 8:08 AM IST
Highlights

ಕೆಂಪೇಗೌಡ ಪ್ರಶಸ್ತಿ ನೀಡಿಕೆ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಸಲಾಗಿದೆ. ಪ್ರಶಸ್ತಿ ನೀಡಿಕೆ ಸಂಖ್ಯೆಯನ್ನು ನಿಗಧಿ ಮಾಡಲಾಗಿದೆ. 

ಬೆಂಗಳೂರು :  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಕೆಂಪೇಗೌಡ ಪ್ರಶಸ್ತಿಯನ್ನು ಈ ವರ್ಷದಿಂದ 70ರಿಂದ 100 ಮಂದಿ ಅರ್ಹರಿಗೆ ಮಾತ್ರ ನೀಡಲು ಹಾಗೂ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಕ್ಷೇತ್ರವಾರು ತಜ್ಞರನ್ನು ನೇಮಿಸುವ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ನಾಡಪ್ರಭು ಕೆಂಪೇಗೌಡ ದಿನಾಚರಣೆ ಹಾಗೂ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಂಬಂಧಿಸಿದಂತೆ ಗುರುವಾರ ಮೇಯರ್‌ ಗಂಗಾಂಬಿಕೆ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ಲಭ್ಯವಾಗುವ ದಿನಾಂಕ ನೋಡಿಕೊಂಡು ಜುಲೈ ಕೊನೆಯ ವಾರದಲ್ಲಿ ಜಯಂತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಶಿಕ್ಷಣ, ಸೇವಾ, ಕ್ರೀಡಾ, ಸಾಮಾಜಿಕ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರು ಕೆಂಪೇಗೌಡ ಪ್ರಶಸ್ತಿಗೆ ಜೂನ್‌ 20ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲು ನಿರ್ಧರಿಸಲಾಯಿತು.

ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ತಜ್ಞರ ನೇಮಕ:

ಕಳೆದ ವರ್ಷ ಪ್ರಶಸ್ತಿಗಳ ಸಂಖ್ಯೆ 530ಕ್ಕೆ ಏರಿಕೆ ಹಿನ್ನೆಲೆಯಲ್ಲಿ ವ್ಯಾಪಕ ಟೀಕೆ-ಟಿಪ್ಪಣಿಗಳು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿಯಂತೆ ಕೆಂಪೇಗೌಡ ಪ್ರಶಸ್ತಿಗೂ ಮಾನದಂಡ ರೂಪಿಸುವಂತೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಆಯುಕ್ತ ಮಂಜುನಾಥ್‌ ಪ್ರಸಾದ್‌ ಹಾಗೂ ಮೇಯರ್‌ಗೆ ಸೂಚನೆ ನೀಡಿದ್ದರು. ಹಾಗಾಗಿ, ಈ ವರ್ಷ ಪ್ರಶಸ್ತಿ ಪುರಸ್ಕೃತರ ಆಯ್ಕೆಗೆ ಕ್ಷೇತ್ರವಾರು ತಜ್ಞರನ್ನು ನೇಮಿಸುವುದಕ್ಕೆ ತೀರ್ಮಾನಿಸಲಾಗಿದೆ. ಪ್ರಶಸ್ತಿಗೆ ಬಂದ ಅರ್ಜಿಗಳನ್ನು ತಜ್ಞರು ಪರಿಶೀಲನೆ ಮಾಡಿ, ಅರ್ಹ ಪುರಸ್ಕೃತರ ಪಟ್ಟಿಸಿದ್ಧಪಡಿಸಲಾಗುವುದು. ಅದಾದ ಬಳಿಕ ಉಪಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಮೇಯರ್‌, ಉಪಮೇಯರ್‌, ಆಡಳಿತ ಹಾಗೂ ವಿರೋಧ ಪಕ್ಷದ ನಾಯಕರು ಮತ್ತು ಆಯುಕ್ತರು ಅಂತಿಮ ಪ್ರಶಸ್ತಿ ಪುರಸ್ಕೃತರ ಪಟ್ಟಿಸಿದ್ಧಪಡಿಸಬೇಕೆಂದು ನಿರ್ಧರಿಸಲಾಗಿದೆ.

70 ರಿಂದ 100 ಪ್ರಶಸ್ತಿ

ಕಳೆದ ವರ್ಷ ಭಾರೀ ಪ್ರಮಾಣದಲ್ಲಿ ಪ್ರಶಸ್ತಿ ನೀಡಿದ್ದರಿಂದ ಕೆಂಪೇಗೌಡ ಪ್ರಶಸ್ತಿಯ ಗೌರವ ಕಡಿಮೆಯಾಗುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದವು. ಅಲ್ಲದೆ ರಾಜಕಾರಣಿಗಳು ತಮ್ಮ ಕುಟುಂಬಸ್ಥರಿಗೆ, ಬೆಂಬಲಿಗರಿಗೆ, ಪಕ್ಷದ ಕಾರ್ಯಕರ್ತರಿಗೆ ಪ್ರಶಸ್ತಿ ಕೊಡಿಸಲು ಲಾಬಿ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಈ ವರ್ಷ 70ರಿಂದ 100 ಪ್ರಶಸ್ತಿಗಳನ್ನು ಅರ್ಹರಿಗೆ ಮಾತ್ರ ನೀಡುವುದಕ್ಕೆ ಸಭೆಯಲ್ಲಿ ನಿರ್ಧರಿಸಲಾಗಿದೆ.

ಜಯಂತಿ ಆಚರಣೆಗೆ ಸಮಿತಿ ರಚನೆ

ಕೆಂಪೇಗೌಡ ದಿನಾಚರಣೆ ಆಯೋಜನೆಗೆ ಎಂಟು ಸಮಿತಿ ರಚಿಸಲಾಗುತ್ತದೆ. ಅದರಂತೆ ಸಾಧಕರ ಆಯ್ಕೆ, ಕಾರ್ಯಕ್ರಮ ಆಯೋಜನೆಯ ಉಸ್ತುವಾರಿಗೆ ಸ್ವಾಗತ ಮತ್ತು ಸನ್ಮಾನÜ ಸಮಿತಿ ರಚಿಸಲಿದ್ದು, ಅದಕ್ಕೆ ಮೇಯರ್‌ ಗಂಗಾಂಬಿಕೆ ಅಧ್ಯಕ್ಷರಾಗಿರುತ್ತಾರೆ. ಉಪಮೇಯರ್‌ ಭದ್ರೇಗೌಡ, ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌, ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಆಯುಕ್ತ ಮಂಜುನಾಥ ಪ್ರಸಾದ್‌ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುರೇಶ್‌ ಸದಸ್ಯರಾಗಿದ್ದಾರೆ.

ಉಳಿದಂತೆ ಉತ್ತಮ ನೌಕರರ ಆಯ್ಕೆ ಹಾಗೂ ಸನ್ಮಾನ ಸಮಿತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣಾ ಸಮಿತಿ, ಕ್ರೀಡೆ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ಸಮಿತಿ, ವೇದಿಕೆ, ದೀಪಾಲಂಕಾರ ಮತ್ತು ಪ್ರಚಾರ ಸಮಿತಿ, ಊಟೋಪಚಾರ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಗಳಿಗೆ ಬಿಬಿಎಂಪಿ ಸದಸ್ಯರನ್ನೇ ಸದಸ್ಯರನ್ನಾಗಿ ಮಾಡಲಾಗಿದ್ದು, ಅವರಿಗೆ ಪ್ರತ್ಯೇಕ ಕೆಲಸದ ಜವಾಬ್ದಾರಿಗಳನ್ನು ವಹಿಸಲಾಗಿದೆ.

ಪ್ರಸಕ್ತ ವರ್ಷ 70 ರಿಂದ 100 ಪ್ರಶಸ್ತಿಗಿಂತ ಯಾವುದೇ ಕಾರಣಕ್ಕೂ ಹೆಚ್ಚಿನ ಕೆಂಪೇಗೌಡ ಪ್ರಶಸ್ತಿ ನೀಡುವುದಿಲ್ಲ. ಪುರಸ್ಕೃತ ಆಯ್ಕೆಗೆ ತಜ್ಞರ ನೇಮಿಸಲಾಗುವುದು. ಜೂನ್‌ 20 ರ ನಂತರ ಬಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ. ಜುಲೈ ಮೊದಲ ವಾರದಲ್ಲಿ ಪುರಸ್ಕೃತ ಅಂತಿಮ ಪಟ್ಟಿಬಿಡುಗಡೆ ಮಾಡಿ, ಜುಲೈ ಕೊನೆಯ ವಾರದಲ್ಲಿ ಜಯಂತಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ.

-ಗಂಗಾಂಬಿಕೆ, ಮೇಯರ್‌.

click me!