ಲೈಂಗಿಕ ದೌರ್ಜ​ನ್ಯ​ಕ್ಕೊ​ಳ​ಗಾದ ಗರ್ಭಿ​ಣಿ ಬಾಲ​ಕಿ​ಯರಿಗೆ ಪ್ರತ್ಯೇಕ ವಸತಿ

By Kannadaprabha NewsFirst Published Mar 11, 2021, 10:17 AM IST
Highlights

ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯರಾದ ಬಾಲಕಿಯರಿಗೆ ಪುನರ್ವಸತಿ ಕಲ್ಪಿಸುವ ಬಗ್ಗೆ ಮೈಸೂರು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಮಾನಸಿಕ ಸ್ವಾಸ್ಥ್ಯ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. 

ತುಮ​ಕೂರು (ಮಾ.11):  ಲೈಂಗಿಕ ದೌರ್ಜನ್ಯಕ್ಕೊಳಗಾದ ಗರ್ಭಿಣಿ ಬಾಲಕಿಯರ ಪುನರ್ವಸತಿಗಾಗಿ ಪ್ರತ್ಯೇಕ ಸಂಸ್ಥೆ ಆರಂಭಿಸಬೇಕು ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌ ಹೇಳಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಜರುಗಿದ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗರ್ಭಿಣಿಯಾದ ಅಪ್ರಾಪ್ತ ಬಾಲಕಿಯರನ್ನು ಸರ್ಕಾರಿ ಬಾಲಮಂದಿರ ಅಥವಾ ಸ್ವೀಕಾರ ಕೇಂದ್ರಗಳಲ್ಲಿ ಪಾಲನೆ ಮಾಡುವ ಸಂದರ್ಭ ಬಂದಾಗ ಸಂತ್ರಸ್ತ ಬಾಲಕಿ ಹಾಗೂ ಇತರೆ ಮಕ್ಕಳ ಮೇಲೆ ಮಾನಸಿಕವಾಗಿ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಇಂತಹ ಮಕ್ಕಳ ಪುನರ್ವಸತಿಗಾಗಿ ಪ್ರತ್ಯೇಕ ಪಾಲನಾ ಸಂಸ್ಥೆ ಆರಂಭಿಸುವ ಅವಶ್ಯಕತೆ ಇದೆ ಎಂದು ಹೇಳಿದರು.

ಬೈಕ್‌ನಲ್ಲಿ ಸುತ್ತಾಡೋಣ ಬಾ... ಒಂದು ಗಂಟೆ ಮಾತಾಡಿ ಯುವತಿ ಸುಸೈಡ್ ...

ಮಕ್ಕಳ ಪಾಲನಾ ಸಂಸ್ಥೆಯ ಜಿಲ್ಲಾ ತನಿಖಾ ಸಮಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ಮಾತನಾಡಿ, ಜಿಲ್ಲೆಯ ಕೆಲವು ಶಾಲಾ ಕಟ್ಟಡಗಳ ಮೇಲೆ ವಿದ್ಯುತ್‌ ತಂತಿ ಹಾದು ಹೋಗಿರುವ ಹಾಗೂ ಶಾಲೆಗಳ ಆವರಣದಲ್ಲಿ ವಿದ್ಯುತ್‌ ಪರಿವರ್ತಕಗಳನ್ನು ಸ್ಥಾಪಿಸಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ವಿದ್ಯುತ್‌ ತಂತಿ ಮತ್ತು ಪರಿವರ್ತಕಗಳು ಮಕ್ಕಳಿಗೆ ಅಪಾಯ ತಂದೊಡ್ಡಬಹುದಾದ್ದರಿಂದ ತೆರವುಗೊಳಿಸಲು ಬೆಸ್ಕಾಂ ಸಂಸ್ಥೆಗೆ ಸೂಚಿಸಬೇಕೆಂದು ಮನವಿ ಮಾಡಿದಾಗ, ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ವಿದ್ಯುತ್‌ ತಂತಿ ಹಾದು ಹೋಗಿರುವ ಹಾಗೂ ವಿದ್ಯುತ್‌ ಪರಿವರ್ತಕಗಳಿರುವ ಶಾಲೆಗಳಲ್ಲಿ ಕೂಡಲೇ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

ಗ್ರಾ.ಪಂ. ಮಟ್ಟದಲ್ಲಿ ನಿಗಧಿತ ಅವಧಿಯೊಳಗೆ ಮಕ್ಕಳ ರಕ್ಷಣಾ ಸಮಿತಿ ಸಭೆಯನ್ನು ತಪ್ಪದೇ ನಡೆಸಿ ಮಕ್ಕಳ ಕುಂದು-ಕೊರತೆ ಆಲಿಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕೆಂದರು. ಅಲ್ಲದೆ ತಾಲೂಕು ಮಟ್ಟದ ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಸದ ಚಿಕ್ಕನಾಯಕನಹಳ್ಳಿ ತಾಲೂಕು ತಹಶೀಲ್ದಾರರಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ, ಇನ್ನೆರಡು ದಿನದೊಳಗೆ ಸಭೆ ನಡೆಸಿ ವರದಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಕಳೆದ ತ್ರೈಮಾಸಿಕದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಬಂದ ಪ್ರಕರಣ, ಮಕ್ಕಳ ಪಾಲನಾ ಸಂಸ್ಥೆಗಳಲ್ಲಿರುವ ಮೂಲಭೂತ ಸೌಕರ್ಯ, ಮಕ್ಕಳ ರಕ್ಷಣಾ ಘಟಕದ ವಿವಿಧ ಯೋಜನೆಗಳ ಪ್ರಗತಿ, ಅರಿವು ಕಾರ್ಯಕ್ರಮ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ, ಮಕ್ಕಳ ರಕ್ಷಣಾ ಸಮಿತಿ ಪ್ರಗತಿ, ದತ್ತು ಕಾರ್ಯಕ್ರಮದ ಪ್ರಗತಿ, ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌. ನಟರಾಜ್‌, ಡಿವೈಎಸ್‌ಪಿ ಸೂರ್ಯನಾರಾಯಣ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ನಂದಕುಮಾರ್‌ ಡಿ.ಬಿ., ಕಾರ್ಮಿಕ ಅಧಿಕಾರಿ ಸುಭಾಷ್‌ ಎಂ. ಆಲದಕಟ್ಟಿ, ಬಾಲ ನ್ಯಾಯಮಂಡಳಿ ಸದಸ್ಯೆ ಆಶಾ, ಮಧುಗಿರಿ ಡಿಡಿಪಿಐ ರೇವಣಸಿದ್ದಪ್ಪ, ವಿವಿಧ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಜರಿದ್ದರು.

click me!