ವೃದ್ಧರ ರೋಗಗಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆ

By Kannadaprabha NewsFirst Published Feb 29, 2020, 9:44 AM IST
Highlights

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರಲ್ಲಿ ಕಂಡು ಬರುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ವಿಶೇಷ ಚಿಕಿತ್ಸೆ ನೀಡಲು ‘ಜೆರಿಯಾಟ್ರಿಕ್‌ (ವೃದ್ಧಾಪ್ಯ) ಸಂಸ್ಥೆ’ ಹಾಗೂ ಚರ್ಮರೋಗಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ‘ಚರ್ಮ ರೋಗ ಸಂಸ್ಥೆ’ಯನ್ನು ಆರಂಭಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ.

ಬೆಂಗಳೂರು(ಫೆ.29): ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರಲ್ಲಿ ಕಂಡು ಬರುವ ವಿವಿಧ ಆರೋಗ್ಯ ಸಮಸ್ಯೆಗಳನ್ನು ಪತ್ತೆಹಚ್ಚಿ ವಿಶೇಷ ಚಿಕಿತ್ಸೆ ನೀಡಲು ‘ಜೆರಿಯಾಟ್ರಿಕ್‌ (ವೃದ್ಧಾಪ್ಯ) ಸಂಸ್ಥೆ’ ಹಾಗೂ ಚರ್ಮರೋಗಗಳ ಪತ್ತೆ ಮತ್ತು ಚಿಕಿತ್ಸೆಗಾಗಿ ‘ಚರ್ಮ ರೋಗ ಸಂಸ್ಥೆ’ಯನ್ನು ಆರಂಭಿಸಲು ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಅಡಿಯಲ್ಲಿ ಈ ಎರಡೂ ಸಂಸ್ಥೆಗಳನ್ನು ನಿರ್ಮಾಣ ಮಾಡಲು ಯೋಜನೆಯ ರೂಪರೇಷೆ ಸಿದ್ಧಪಡಿಸುತ್ತಿದೆ.

ಡಿಜಿಟಲ್‌ ಮೌಲ್ಯಮಾಪನ: KPSCಗೆ ಹೈಕೋರ್ಟ್‌ ಕ್ಲೀನ್‌ಚಿಟ್‌

ಮಕ್ಕಳಿಗಾಗಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಮಾನಸಿಕ ಕಾಯಿಲೆಗಳಿಗೆ ರಾಷ್ಟ್ರೀಯ ರಾಷ್ಟ್ರೀಯ ಮಾನಸಿಕ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌), ಹೃದಯ ಸಂಬಂಧಿ ಕಾಯಿಲೆಗಳಿಗಾಗಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಕ್ಯಾನ್ಸರ್‌ ಕಾಯಿಲೆಗಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಆದರೆ, ಹಿರಿಯ ನಾಗರಿಕರಲ್ಲಿ ಕಂಡು ಬರುವ ಕಾಯಿಲೆ ಪತ್ತೆಹಚ್ಚುವುದು, ಚಿಕಿತ್ಸೆ ನೀಡುವುದು, ಆ ಕಾಯಿಲೆಗಳ ಕುರಿತ ಸಂಶೋಧನೆ ಹಾಗೂ ಪರಿಹಾರಕ್ಕಾಗಿ ರಾಜ್ಯದಲ್ಲಿ ಪ್ರತ್ಯೇಕವಾದ ಸರ್ಕಾರಿ ಸಂಸ್ಥೆಗಳಿಲ್ಲ.

ಹಿರಿಯ ನಾಗರಿಕರಿಗೆ ಮರೆಗುಳಿತನ, ಮಾನಸಿಕ ಖಿನ್ನತೆ, ಮೂಳೆಗಳಲ್ಲಿ ಕ್ಯಾಲ್ಸಿಯಂ ಪ್ರಮಾಣ ಕಡಿಮೆಯಾಗಿ ಕಾಣಿಸಿಕೊಳ್ಳುವ ಅಸ್ಥಿ ಸಂಧಿವಾತ ಸೇರಿದಂತೆ ಹಲವಾರು ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಈ ಎಲ್ಲಾ ಕಾಯಿಲೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡಲು ಅನುವಾಗುವಂತೆ ‘ಜೆರಿಯಾಟ್ರಿಕ್‌ ಸಂಸ್ಥೆ’ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ. ಈ ಬಗ್ಗೆ ಅಗತ್ಯ ಸಿದ್ಧತೆ ಆರಂಭಿಸುವಂತೆ ರಾಜ್ಯ ಸರ್ಕಾರ ಆರ್‌ಜಿಯುಎಚ್‌ಎಸ್‌ಗೆ ಸೂಚನೆ ನೀಡಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಚರ್ಮ ರೋಗ ಸಂಸ್ಥೆ:

ಎಲ್ಲ ವಯೋಮಾನದವರಲ್ಲಿ ಕಾಣಿಸಿಕೊಳ್ಳುವ ಚರ್ಮರೋಗದ ಪತ್ತೆ, ನಿವಾರಣೆ, ಸಂಶೋಧನೆ ಹಾಗೂ ಚಿಕಿತ್ಸೆ ಸೇರಿದಂತೆ ಚರ್ಮ ರೋಗಕ್ಕೆ ಸಂಬಂಧಿಸಿದ ಪ್ರತ್ಯೇಕ ಸಂಸ್ಥೆಯನ್ನು ಆರಂಭಿಸಲು ಕೂಡ ಚಿಂತನೆ ನಡೆದಿದೆ. ಚರ್ಮ ರೋಗಗಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿ, ತುರಿಕೆ, ಹಿಮ್ಮಡಿ ಒಡೆಯುವುದು, ಚರ್ಮದ ಕ್ಯಾನ್ಸರ್‌ ಮಾತ್ರವಲ್ಲದೆ, ಮಕ್ಕಳು, ಮಹಿಳೆಯರು ಹಾಗೂ ವಿವಿಧ ವಯೋಮಾನದವರಲ್ಲಿ ಕಾಣಿಸಿಕೊಳ್ಳುವ ಕಾಯಿಲೆಗಳು, ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕೆ ಚರ್ಮರೋಗ ಸಂಸ್ಥೆ ಸ್ಥಾಪನೆಗೆ ಚಿಂತನೆ ನಡೆದಿದೆ.

ಎಲ್ಲಿ ಆರಂಭ, ವೆಚ್ಚ ಎಷ್ಟು:

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇರುವೆಡೆ ಹೊಸ ಸಂಸ್ಥೆಗಳನ್ನು ಆರಂಭಿಸಲಾಗುತ್ತದೆ. ಕನಿಷ್ಠ ತಲಾ 25 ಎಕರೆ ಪ್ರದೇಶದಲ್ಲಿ ಹೊಸ ಸಂಸ್ಥೆಗಳನ್ನು ಆರಂಭಿಸುವ ಚಿಂತನೆಯಿದೆ. ಬೆಂಗಳೂರು ಮಾತ್ರವಲ್ಲ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಈ ಹೊಸ ಸಂಸ್ಥೆಗಳನ್ನು ಆರಂಭಿಸಬಹುದು. ಇಲ್ಲಿಯವರೆಗೂ ಎಲ್ಲಿ ಆರಂಭಿಸಬೇಕು ಎಂಬುದು ತೀರ್ಮಾನವಾಗಿಲ್ಲ.

ಬೆಂಗಳೂರಲ್ಲಿ ಸೈಟ್ ಹೊಂದಿರುವವರೇ ಇಲ್ಲೊಮ್ಮೆ ಗಮನಿಸಿ ! ಹಲವರಿಗೆ ಕಾದಿದೆ ನಿರಾಸೆ

ಚರ್ಮರೋಗ ಸಂಸ್ಥೆ, ಜೆರಿಯಾಟ್ರಿಕ್‌, ವೈದ್ಯಕೀಯ ಕಾಲೇಜು ಬೇರೆ ಬೇರೆ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸಲಿವೆ. ಈಗಷ್ಟೇ ಚಿಂತನೆ ಆರಂಭಿಸಿರುವುದರಿಂದ ಯೋಜನೆ ರೂಪರೇಷೆ ಸಂಪೂರ್ಣವಾಗಿ ಸಿದ್ಧಗೊಂಡ ಬಳಿಕ ಖರ್ಚು-ವೆಚ್ಚ ಲೆಕ್ಕ ಹಾಕಲಾಗುತ್ತದೆ. ಅದಾದ ನಂತರ ನಿಖರವಾಗಿ ಯೋಜನಾ ವೆಚ್ಚ ನಿಗದಿ ಮಾಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಹೃದ್ರೋಗ, ಕ್ಯಾನ್ಸರ್‌, ಮಕ್ಕಳ ಚಿಕಿತ್ಸೆ ಸೇರಿದಂತೆ ವಿವಿಧ ಕಾಯಿಲೆಗಳಿಗೆ ವಿಶೇಷ ಆಸ್ಪತ್ರೆಗಳಿವೆ. ಆದರೆ ಚರ್ಮ ಹಾಗೂ ಜೆರಿಯಾಟ್ರಿಕ್‌ಗೆ ಸಂಬಂಧಿಸಿದಂತೆ ವಿಶೇಷ ಸಂಸ್ಥೆಗಳಿಲ್ಲದಿರುವುದರಿಂದ ರಾಜ್ಯದಲ್ಲಿ ಮೊದಲ ಬಾರಿಗೆ ಈ ಕಾಯಿಲೆಗಳಿಗೆ ಸಂಬಂಧಿಸಿದ ಪ್ರತ್ಯೇಕ ಸಂಸ್ಥೆಗಳನ್ನು ಆರಂಭಿಸುವ ಚಿಂತನೆ ಹೊಂದಿದ್ದೇವೆ ಎಂದು ಡಾ. ಕೆ.ಸುಧಾಕರ್‌ ತಿಳಿಸಿದ್ದಾರೆ.

-ಎನ್‌.ಎಲ್‌. ಶಿವಮಾದು

click me!