BSNL ಲ್ಯಾಂಡ್‌ಲೈನ್‌ ರಿಪೇರಿಗಾಗಿ ಪ್ರಧಾನಿ ಮೊರೆ ಹೋದ ಹಿರಿಯ ನಾಗರಿಕ!

By Kannadaprabha News  |  First Published Aug 20, 2020, 11:27 AM IST

ಹತ್ತಾರು ಬಾರಿ ದೂರು ನೀಡಿದರೂ ಕ್ಯಾರೇ ಎನ್ನದ ಅಧಿಕಾರಿಗಳು| ಡೆಡ್‌ ಆಗಿರುವ ಫೋನ್‌ಗೆ ವರ್ಷದಿಂದ ಬಿಲ್‌ ಕಟ್ಟುತ್ತ ಬಂದಿರುವ ಗ್ರಾಹಕ| ಹುಬ್ಬಳ್ಳಿ ಬಿಎಸ್ಸೆನ್ನೆಲ್‌ ಎಜಿಎಂಗೆ ಬಿಸಿ ಮುಟ್ಟಿಸಿದ ಪ್ರಧಾನಿ ಕಚೇರಿ| 


ಹುಬ್ಬಳ್ಳಿ(ಆ.20): 'ಬಿಸ್ಸೆನ್ನೆಲ್‌ನಲ್ಲಿ ದೇಶದ್ರೋಹಿಗಳಿದ್ದಾರೆ' ಎಂದ ಕೆನರಾ ಸಂಸದ ಅನಂತಕುಮಾರ ಹೆಗಡೆ ಅವರ ಹೇಳಿಕೆ ಖಂಡಿಸಿ ಅಲ್ಲಿನ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದನ್ನು ನಾವೆಲ್ಲ ಕೇಳಿದ್ದೇವೆ. ಇದೀಗ ವರ್ಷದಿಂದ ಡೆಡ್‌ ಆಗಿರುವ ತಮ್ಮ ಬಿಸ್ಸೆನ್ನೆಲ್‌ ಲ್ಯಾಂಡ್‌ಲೈನ್‌ ದುರಸ್ತಿಗಾಗಿ ಹುಬ್ಬಳ್ಳಿಯ ಹಿರಿಯ ನಾಗರಿಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಮೊರೆ ಹೋಗಿ ಸುದ್ದಿಯಾಗಿದ್ದಾರೆ!

ಹೌದು! ಇಲ್ಲಿನ ಪತ್ರಕರ್ತರ ಕಾಲನಿ ನಿವಾಸಿ 80ರ ವಯೋಮಾನದ ಮಾಜಿ ಪತ್ರಕರ್ತರೂ ಆದ ಮತ್ತಿಹಳ್ಳಿ ಮದನ ಮೋಹನ ಅವರ ಬಿಎಸ್ಸೆನ್ನೆಲ್‌ ಸ್ಥಿರ ದೂರವಾಣಿ(ಲ್ಯಾಂಡ್‌ಲೈನ್‌-0836- 2374872) ಕಳೆದ ಒಂದು ವರ್ಷದಿಂದ ಡೆಡ್‌ ಆಗಿದೆ. ಅದನ್ನು ದುರಸ್ತಿ ಮಾಡಿಸುವಂತೆ ಹತ್ತಾರು ಲಿಖಿತ ದೂರುಗಳನ್ನು ನೀಡಿದರೂ ಯಾವುದೇ ಪ್ರಯೋಜನವಾಗದೇ ಇದ್ದಾಗ ಕೊನೆಯ ಪ್ರಯತ್ನವಾಗಿ ಪ್ರಧಾನಿ ನರೇಂದ್ರ ಮೋದಿ(ಪಿಎಂಒ) ಅವರಲ್ಲಿ ಮೊರೆ ಹೋಗಿ ಬಿಸ್ಸೆನ್ನೆಲ್‌ ಅಧಿಕಾರಿಗಳಿಗೆ ಬುದ್ಧಿ ಹೇಳುವಂತೆ ಮನವಿ ಮಾಡಿದ್ದಾರೆ.

Latest Videos

undefined

ಕೊನೆಗೂ ಗೆದ್ದ ಧರ್ಮ: ಕಲಾವಿದನ ಸಂಕಷ್ಟಕ್ಕೆ ಅನಿವಾಸಿ ಭಾರತೀಯರ ಸ್ಪಂದನೆ..!

ಹಿಂದು ಪತ್ರಿಕೆಯ ವರದಿಗಾರರಾಗಿದ್ದ ಇವರಿಗೆ 1968ರಲ್ಲೇ ಸಂಸ್ಥೆ ಲ್ಯಾಂಡ್‌ಲೈನ್‌ ನೀಡಿತ್ತು. ಇಂಟರ್‌ನೆಟ್‌ ಬಳಕೆ ಮತ್ತು ಸ್ವಂತಕ್ಕೆ ಇರಲಿ ಎಂದು 1998ರಲ್ಲಿ ಮತ್ತೊಂದು ಲ್ಯಾಂಡ್‌ಲೈನ್‌ ಹಾಕಿಸಿಕೊಂಡಿದ್ದರು. ನಿವೃತ್ತಿಯ ಬಳಿಕ ಸಂಸ್ಥೆಯದು ವಾಪಸ್‌ ಹೋಗಿದೆ, ಸ್ವಂತದ್ದು ಉಳಿದಿದೆ. ಬ್ರಾಡ್‌ಬ್ಯಾಂಡ್‌ ಸೌಲಭ್ಯ ಇರುವ ಇದು ಸಂಪರ್ಕ, ಸಂವಹನಕ್ಕೆ ದೊಡ್ಡ ಆಸರೆ. ಆದರೆ ಕಳೆದ ಒಂದು ವರ್ಷದಿಂದ ಇದು ಮೌನವಾಗಿದೆ. ಆದಾಗ್ಯೂ ಪ್ರತಿ ತಿಂಗಳು ಬಿಲ್‌ ಪಾವತಿಸುವುದನ್ನು ಮದನ ಮೋಹನ ತಪ್ಪಿಸಿಲ್ಲ.

ತಮ್ಮ ಹತ್ತಾರು ದೂರುಗಳಿಗೆ ಸ್ಥಳೀಯ ಬಿಎಸ್ಸೆನ್ನೆಲ್‌ ಅಧಿಕಾರಿಗಳು ಸ್ಪಂದಿಸದೇ ಇದ್ದಾಗ ರೋಸಿಹೋದ ಅವರು ಪಿಎಂಒ(ಸೆಂಟ್ರಲ್‌ ಕಂಪ್ಲೆಂಟ್‌ ಮಾನಿಟರಿಂಗ್‌ ಆ್ಯಂಡ್‌ ರೀಡ್ರೆಸ್ಸಿಂಗ್‌ ಸಿಸ್ಟಂ)ಗೆ ದಾಖಲೆ ಸಮೇತ ದೂರು ಸಲ್ಲಿಸಿದ್ದರು. ಹೀಗೆ ಸಲ್ಲಿಕೆಯಾದ ದೂರನ್ನು ಪರಿಶೀಲಿಸಿದ ಪಿಎಂಒ ಅಧಿಕಾರಿಗಳು ಬಿಎಸ್ಸೆನ್ನೆಲ್‌ ಎಜಿಎಂ ಅವರಿಗೆ ಸರಿಯಾದ ಬಿಸಿಯನ್ನೇ ಮುಟ್ಟಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಬಿಸ್ಸೆನ್ನೆಲ್‌ ಅಧಿಕಾರಿಗಳು ಮದನ ಮೋಹನ ಭೇಟಿಗಾಗಿ ಹಾತೊರೆಯುತ್ತಿದ್ದಾರೆ.

ಆದಾಗ್ಯೂ ಪಿಎಂಒಗೆ ಬಿಎಸ್ಸೆನ್ನೆಲ್‌ ಉತ್ತರ ಹೀಗಿದೆ: 

ಹುಬ್ಬಳ್ಳಿ ಉಣಕಲ್‌ ಪ್ರದೇಶದಲ್ಲಿ ರೈಲು ಮಾರ್ಗದ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಅದರ ಅಡಿಯಲ್ಲಿ ನಮ್ಮ ಕೇಬಲ್‌ ಮಾರ್ಗ ಇದೆ. ಅದೀಗ ಅಲ್ಲಲ್ಲಿ ತುಂಡಾಗಿದೆ. ಅಫ್ಟಿಕೇಬಲ್‌ ಅಳವಡಿಕೆ ಮುಂದುವರಿದಿದ್ದು ಶೀಘ್ರದಲ್ಲಿ ಮದನ ಮೋಹನ ಅವರ ಲ್ಯಾಂಡ್‌ಲೈನ್‌ಗೆ ಸಂಪರ್ಕ ಕಲ್ಪಿಸಲಾಗುವುದು.

ಈ ಬಗ್ಗೆ ಮಾತನಾಡಿದ ಮತ್ತಿಹಳ್ಳಿ ಮದನ ಮೋಹನ ಅವರು, ನಾನು 80ರ ಹಿರಿಯ ನಾಗರಿಕ. ಸಂಪರ್ಕ, ಸಂವಹನಕ್ಕಾಗಿ ನನಗೆ ಇಂಟರ್‌ನೆಟ್‌ ಅತ್ಯಗತ್ಯ. ವರ್ಷದಿಂದ ನನ್ನ ಲ್ಯಾಂಡ್‌ಲೈನ್‌ ಡೆಡ್‌ ಆಗಿದೆ. ಆದಾಗ್ಯೂ ಬಿಲ್‌ ತುಂಬಿಸಿಕೊಳ್ಳುತ್ತಿದ್ದಾರೆ. ನನ್ನ ದೂರಿಗೆ ಬಿಎಸ್ಸೆನ್ನೆಲ್‌ನ ಯಾವುದೇ ಅಧಿಕಾರಿ ಸ್ಪಂದಿಸದೇ ಇದ್ದಾಗ ಪಿಎಂಒಗೆ ದೂರು ಸಲ್ಲಿಸಿದೆ ಎಂದು ತಿಳಿಸಿದ್ದಾರೆ. 
 

click me!