ದಾನ, ಧರ್ಮ, ನಿಸ್ವಾರ್ಥ ಜೀವನದಿಂದ ಆತ್ಮತೃಪ್ತಿ ಸಾಧ್ಯ: ದಸರೀಘಟ್ಟ ಶ್ರೀ

By Kannadaprabha News  |  First Published Jan 17, 2024, 9:12 AM IST

ಮನುಷ್ಯ ಅಸೂಯೆ, ನಾನು, ನನ್ನದು ಎಂಬ ಸ್ವಾರ್ಥ ಮನೋಭಾವಗಳನ್ನು ಬಿಟ್ಟು ಪರಸ್ಪರ ಪ್ರೀತಿ, ವಿಶ್ವಾಸದಿಂದ ನಿಸ್ವಾರ್ಥ ಜೀವನ ನಡೆಸಿದಾಗ ಮಾತ್ರ ಆತ್ಮತೃಪ್ತಿಯು ಲಭಿಸುತ್ತದೆ ಎಂದು ತಾಲೂಕಿನ ದಸರೀಘಟ್ಟ ಆದಿಚುಂಚನಗಿರಿ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.


  ತಿಪಟೂರು :  ಮನುಷ್ಯ ಅಸೂಯೆ, ನಾನು, ನನ್ನದು ಎಂಬ ಸ್ವಾರ್ಥ ಮನೋಭಾವಗಳನ್ನು ಬಿಟ್ಟು ಪರಸ್ಪರ ಪ್ರೀತಿ, ವಿಶ್ವಾಸದಿಂದ ನಿಸ್ವಾರ್ಥ ಜೀವನ ನಡೆಸಿದಾಗ ಮಾತ್ರ ಆತ್ಮತೃಪ್ತಿಯು ಲಭಿಸುತ್ತದೆ ಎಂದು ತಾಲೂಕಿನ ದಸರೀಘಟ್ಟ ಆದಿಚುಂಚನಗಿರಿ ಶಾಖಾಮಠದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಆದಿಚುಂಚನಗಿರಿ ಶಾಖಾ ದಸರೀಘಟ್ಟದ ಶ್ರೀ ಚೌಡೇಶ್ವರಿ ದೇವಿಆವರಣದಲ್ಲಿ ಮಕರ ಸಂಕ್ರಾಂತಿ ಅಂಗವಾಗಿ ಶ್ರೀಮಠ ಮತ್ತು ದಸರೀಘಟ್ಟ ಗ್ರಾಮಸ್ಥರು ಸಹಯೋಗದಲ್ಲಿ ರಾಶಿ ಪೂಜೆ ಹಾಗೂ ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಮನುಷ್ಯ ಹಣ, ಆಸ್ತಿಗಾಗಿ ಹೆಚ್ಚು ಶ್ರಮಿಸುತ್ತಿದ್ದು, ಮಾನವೀಯ ಮೌಲ್ಯಗಳನ್ನು ಮರೆತು ತನ್ನ ಸುಖವೇ ಪರಮಸುಖವೆಂದು ಭಾವಿಸುತ್ತಾ ಪರಮಾತ್ಮನನ್ನು ಕಾಣುವ ಗೋಜಿಗೆ ಹೋಗದೆ ಸ್ವಾರ್ಥದ ಬದುಕು ನಡೆಸುತ್ತಿದ್ದಾನೆ. ಅಂತರಂಗದಲ್ಲಿರುವ ಪರಮಾತ್ಮನನ್ನು ಹುಡುಕದೆ ಎಲ್ಲೆಲ್ಲಿಗೊ ಹೋಗುತ್ತೇವೆ. ಆದರೆ ಪರಮಾತ್ಮ ನಮ್ಮಲ್ಲಿಯೇ ನೆಲೆಸಿರುತ್ತಾನೆ ಎಂಬುದು ತಿಳಿದೆ ಇರುವುದಿಲ್ಲ. ಮಾನವನ ಮನಸ್ಸಿನಲ್ಲಿ ಎಲ್ಲಾ ರೀತಿಯ ವಿಚಾರಗಳು ನೆಲೆಸಿದ್ದು ಉತ್ತಮ ವಿಚಾರಗಳನ್ನು ಉಳಿಸಿ ಕೆಟ್ಟ ವಿಚಾರಗಳನ್ನು ದೇವಾಲಯ, ಮಠಗಳಿಗೆ ಬಂದಂತಹ ಸಂದರ್ಭದಲ್ಲಿ ಬಿಟ್ಟು ಹೋಗಬೇಕು. ಸಹೋದರತ್ವ, ಬ್ರಾತೃತ್ವದಿಂದ ಎಲ್ಲರೊಂದಿಗೆ ಬೆರೆತು ದಾನ ಧರ್ಮ ಮಾಡುವ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದರು.

Tap to resize

Latest Videos

undefined

ಅದಕ್ಕಾಗಿಯೇ ಪೂರ್ವಜರು ಇಂತಹ ಹಬ್ಬ ಹರಿದಿನಗಳನ್ನು ಆಚರಿಸಿಕೊಂಡು ಬಂದಿದ್ದು ನಾವು ಸಹ ಅವರ ಹಾದಿಯಲ್ಲಿ ನಡೆಯಬೇಕು ಎಂದರು.

ಕಿಚ್ಚು ಹಾಯಿಸುವಿಕೆ: ಗ್ರಾಮಸ್ಥರೆಲ್ಲಾ ಮಠದ ಆವರಣದಲ್ಲಿ ಸೇರಿ ತಮ್ಮ ರಾಸುಗಳನ್ನು ಸಿಂಗಾರ ಮಾಡಿ ಕಿಚ್ಚು ಹಾಯಿಸುವಿಕೆಗೆ ಸಿದ್ಧತೆ ಮಾಡಲಾಗಿತ್ತು. ಭತ್ತದ ಒಣ ಹುಲ್ಲನ್ನು ಹಾಕಿ ಪೂಜೆ ಸಲ್ಲಿಸಿದ ಶ್ರೀಗಳು ಕಿಚ್ಚು ಹಚ್ಚಿಸಿದ ತಕ್ಷಣವೆ ಸಿಂಗರಿಸಿದ ರಾಸುಗಳು ಕಿಚ್ಚಿನಲ್ಲಿ ಹಾಯ್ದು ಓಡಿದವು. ಗೋವುಗಳಿಗೆ ತಯಾರಿಸಿದ್ದ ವಿಶೇಷ ಸಿಹಿಯೂಟವನ್ನು ಎಡೆ ಮಾಡಿ ಹಬ್ಬದ ಊಟವನ್ನು ಎಡೆಯ ರೂಪದಲ್ಲಿ ನೀಡಲಾಯಿತು. ನಂತರ ಶ್ರೀ ಚೌಡೇಶ್ವರಿ ದೇವಿಯ ದೇವಾಲಯವನ್ನು ಮೂರು ಸುತ್ತು ಪ್ರದಕ್ಷಿಣಿ ಹಾಕಿ ತಮ್ಮ ತಮ್ಮ ಮನೆಗಳಿಗೆ ತೆರಳಿದವು. ಜಾನುವಾರುಗಳಿಗೆ ಯಾವುದೆ ಸಾಂಕ್ರಾಮಿಕ ರೋಗಗಳು ಬಾದಿಸದಿರಲಿ ಎಂಬ ಉದ್ದೇಶದಿಂದ ಕಿಚ್ಚು ಹಾಯಿಸಲಾಗುತ್ತದೆ ಎಂಬುದು ಗ್ರಾಮೀಣರ ನಂಬಿಕೆ.

ಈ ಸಂದರ್ಭದಲ್ಲಿ ಗುಡಿಗೌಡರು, ಗ್ರಾಮಸ್ಥರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಶ್ರೀಮಠ ಭಕ್ತರು, ಭಾಗವಹಿಸಿ ಹಬ್ಬದ ಸವಿಯನ್ನು ಸವಿದರು. ನಂತರ ಚಂದ್ರಶೇಖರನಾಥ ಸ್ವಾಮೀಜಿ ಎಲ್ಲರಿಗೂ ಎಳ್ಳು ಬೆಲ್ಲ, ಪೊಂಗಲ್ ನೀಡಿ ಆಶೀರ್ವದಿಸಿದರು.

click me!