ಭಾರತ ಸಂವಿಧಾನ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜ.೨೬ ರಿಂದ ಜಿಲ್ಲೆಯಾದ್ಯಂತ ಸಂವಿಧಾನ ‘ಜಾಗೃತಿ ಜಾಥಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ತುಮಕೂರು : ಭಾರತ ಸಂವಿಧಾನ ಆಚರಣೆ ಮತ್ತು ಅದರ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜ.೨೬ ರಿಂದ ಜಿಲ್ಲೆಯಾದ್ಯಂತ ಸಂವಿಧಾನ ‘ಜಾಗೃತಿ ಜಾಥಾ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳೊಂದಿಗೆ ಪೂವಾಭಾವಿ ಸಭೆ ನಡೆಸಿ ಮಾತನಾಡಿದ ಅವರು, ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಸ್ತಬ್ಧ ಚಿತ್ರದ ಮೂಲಕ ಮೆರವಣಿಗೆ ನಡೆಸಿ ಜನರಿಗೆ ಸಂವಿಧಾನ ಪರಿಕಲ್ಪನೆಗಳ ಬಗ್ಗೆ ಅರಿವು ಮೂಡಲಾಗುವುದು ಎಂದು ತಿಳಿಸಿದರು.
undefined
ಸಂವಿಧಾನ ಪೀಠಿಕೆ; ನ್ಯಾಯ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿಕಲ್ಪನೆ; ಬಸವಣ್ಣನವರ ವಚನಗಳು ಮತ್ತು ಭಾರತದ ಸಂವಿಧಾನದಲ್ಲಿ ವಚನಗಳ ಪ್ರಸ್ತುತತೆ; ಜಿಲ್ಲೆಯ ಸ್ಥಳೀಯ ಐತಿಹಾಸಿಕ ವ್ಯಕ್ತಿಗಳು, ಸಾಹಿತ್ಯ ದಿಗ್ಗಜರು ಸೇರಿದಂತೆ ಪ್ರಮುಖ ವ್ಯಕ್ತಿಗಳು ಹಾಗೂ ಸ್ಥಳೀಯ ಕಲೆ ಮತ್ತು ಸಂಸ್ಕೃತಿಗಳನ್ನು ಒಳಗೊಂಡ; ಅನುಚ್ಛೇದ 41: ರಾಜ್ಯವು ತನ್ನ ಆರ್ಥಿಕ ಸಾಮರ್ಥ್ಯ ಮತ್ತು ಅಭಿವೃದ್ಧಿಯ ಪರಿಮಿತಿಯಲ್ಲಿ ಉದ್ಯೋಗ ಶಿಕ್ಷಣ ಹಕ್ಕುಗಳನ್ನು ಪಡೆಯಲು ಹಾಗೂ ನಿರುದ್ಯೋಗ, ವೃದ್ಧಾಪ್ಯ, ಅನಾರೋಗ್ಯ ಮತ್ತು ಅಸಮರ್ಥತೆಯ ಸಂದರ್ಭಗಳಲ್ಲಿ ಸಹಾಯ ನೀಡಲು ಪರಿಣಾಮಕಾರಿ ಅವಕಾಶಗಳನ್ನು ಕಲ್ಪಿಸುವುದಲ್ಲದೆ, ಇನ್ನಿತರೆ ಅರ್ಹ ಬೇಡಿಕೆಗಳ ಪ್ರಕರಣಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಖಾತರಿ ಯೋಜನೆಗಳ ವಿಷಯಗಳನ್ನೊಳಗೊಂಡ ಕನಿಷ್ಠ ಒಂದು ಸ್ತಬ್ಧಚಿತ್ರವನ್ನು ಮೆರವಣಿಗೆಯಲ್ಲಿರಬೇಕು ಎಂದು ಸೂಚನೆ ನೀಡಿದರು.
ಜಾಥಾ ಕಾರ್ಯಕ್ರಮದ ಸ್ತಬ್ಧಚಿತ್ರ ಮೆರವಣಿಗೆಗೆ ಜಿಲ್ಲಾ ಉಸ್ತುವಾರಿ ಸಚಿವರು ಜ.26ರಂದು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದ ರೂಪುರೇಷೆ, ಮೆರವಣಿಗೆ ರಚನೆ ಮತ್ತು ಸಂಯೋಜನೆ, ಸುರಕ್ಷತೆ, ವಸತಿ, ಸ್ತಬ್ಧಚಿತ್ರ ವಾಹನ ತಂಗುವಿಕೆ ಹಾಗೂ ಸಂಚರಿಸುವ ಮಾರ್ಗನಕ್ಷೆ ತಯಾರಿಸಿ ಜಿಲ್ಲಾ ಉಸ್ತುವಾರಿ ಸಚಿವರ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದ ನಂತರ ಅಂತಿಮಗೊಳಿಸಬೇಕು. ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಮೆರವಣಿಗೆಯು ಜಿಲ್ಲೆಯ ಎಲ್ಲಾ ಗ್ರಾಮಗಳ ಮೂಲಕ ಹಾದು ಹೋಗಬೇಕು. ಗಡಿಭಾಗದಲ್ಲಿ ಸಂಬಂಧಿಸಿದ ಕ್ಷೇತ್ರದ ಜನಪ್ರತಿನಿಧಿಗಳು ಮೆರವಣಿಗೆಯನ್ನು ಸ್ವಾಗತಿಸಬೇಕು. ಪ್ರತಿ ಗ್ರಾಮಪಂಚಾಯತಿ ಮಟ್ಟದಲ್ಲಿ ಸ್ತಬ್ಧಚಿತ್ರ ವಾಹನ ತಂಗಬೇಕು. ಸ್ಥಳೀಯ ಸಂಸ್ಥೆಗಳು ಎಲ್ಲಾ ರೀತಿಯ ಬೆಂಬಲ ನೀಡಬೇಕು ಎಂದು ಸೂಚಿಸಿದರು.
ಇದಕ್ಕೂ ಮುನ್ನ ವಿಧಾನ ಸೌಧ ಸಮಿತಿ ಸಭಾಂಗಣದಿಂದ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ. ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಅಭಿವೃದ್ಧಿ ಆಯುಕ್ತ ಡಾ. ಶಾಲಿನಿ ರಜನೀಶ್, ಕ್ಯಾಪ್ಟನ್ ಮಣಿವಣ್ಣನ್ ಸೇರಿದಂತೆ ವಿವಿಧ ಉನ್ನತ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ಸ್ತಬ್ಧಚಿತ್ರ ಮೆರವಣಿಗೆಯು ಜಿಲ್ಲಾ ಸಮಿತಿ ಅನುಮೋದಿಸುವ ಅಥವಾ ಸಮಾಜ ಕಲ್ಯಾಣ ಇಲಾಖಾಯುಕ್ತರು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖಾಯುಕ್ತರ ಸಹಯೋಗದಲ್ಲಿ ಒದಗಿಸಲಾಗುವ ಸಂವಿಧಾನ ಜಾಗೃತಿ ಜಾಥಾದ ವಿಡಿಯೋ ತುಣುಕನ್ನು ಹೊಂದಿರುವ ಕನಿಷ್ಠ ಒಂದು ಎಲ್‌ಇಡಿ ಡಿಸ್‌ಪ್ಲೇ ವಾಹನ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ನಿರ್ದೇಶನ ನೀಡಿದರು.
ಮೆರವಣಿಗೆಯಲ್ಲಿ ಸಂವಿಧಾನದ ಬಗ್ಗೆ ಉತ್ತಮ ಭಾಷಣಕಾರರಿಂದ ಉಪನ್ಯಾಸ ಕಾರ್ಯಕ್ರಮ, ರಂಗಭೂಮಿ ಕಲಾವಿದರಿಂದ ನಾಟಕ ಪ್ರದರ್ಶನ ಸೇರಿದಂತೆ ಉತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕಲ್ಲದೆ, ಮೆರವಣಿಯ ಉದ್ದಕ್ಕೂ ಭಾರತ ಸಂವಿಧಾನ ಪೀಠಿಕೆ ಪ್ರತಿಗಳನ್ನು ಜನಸಾಮಾನ್ಯರಿಗೆ ವಿತರಿಸುವ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜಿನಪ್ಪ, ಡಿಡಿಪಿಐ ರಂಗಧಾಮಯ್ಯ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.