ಬೆಂಗಳೂರಿನಲ್ಲಿ ಜಪ್ತಿಯಾದ ವಾಹನಗಳು ಎಲ್ಲಿ ಹೋಗುತ್ತೆ?

By Kannadaprabha NewsFirst Published Sep 11, 2019, 9:15 AM IST
Highlights

ಬೆಂಗಳೂರಿನಿಂದ ಜಪ್ತಿಯಾದ ಎಲ್ಲಾ ವಾಹನಗಳು ಇನ್ನು ಮುಂದೆ ಈ ಜಾಗದಲ್ಲಿ ಇರಲಿವೆ. ಈ ಬಗ್ಗೆ ಬಿಬಿಎಂಪಿ ಮೇಯರ್ ಸ್ಥಳ ಪರಿಶೀಲನೆಯನ್ನೂ ನಡೆಸಿದ್ದಾರೆ. 

ಬೆಂಗಳೂರು [ಸೆ.11]:  ಬಿಬಿಎಂಪಿ ಅನುದಾನದಲ್ಲಿ ಅಭಿವೃದ್ಧಿ ಪಡಿಸಿದ ಬಿಂಗೀಪುರದ ಭೂ ಭರ್ತಿ ಪ್ರದೇಶಕ್ಕೆ ನಗರದ ವಿವಿಧ ಸಂಚಾರಿ ಪೊಲೀಸ್‌ ಠಾಣೆಗಳ ಮುಂದೆ ಜಪ್ತಿ ಮಾಡಿ ನಿಲ್ಲಿಸಿರುವ ವಾಹನಗಳು ಶೀಘ್ರದಲ್ಲಿ ಸ್ಥಳಾಂತರಗೊಳ್ಳಲಿವೆ.

ಕಳೆದ ಜೂನ್‌ನಲ್ಲಿ ಬಿಬಿಎಂಪಿ ಮೇಯರ್‌ ಹಾಗೂ ನಗರ ಸಂಚಾರಿ ಪೊಲೀಸ್‌ ಅಧಿಕಾರಿಗಳು ಬಿಂಗೀಪುರ ಭೂಭರ್ತಿ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದರು. ಈ ವೇಳೆ ಸಂಚಾರಿ ಪೊಲೀಸರು ನಗರದಲ್ಲಿ ಜಪ್ತಿ ಮಾಡಿದ ವಾಹನ ನಿಲ್ಲಿಸುವುದಕ್ಕೆ ಸ್ಥಳಾವಕಾಶ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ್ದ ಮೇಯರ್‌ ಗಂಗಾಂಬಿಕೆ, ಬಿಂಗೀಪುರದ ಬಿಬಿಎಂಪಿಯ 23 ಭೂರ್ತಿ ಪ್ರದೇಶದಲ್ಲಿ 10 ಎಕರೆಯನ್ನು ಜಪ್ತಿ ಮಾಡಿದ ವಾಹನ ನಿಲ್ಲುಸುವುದರ ಜತೆಗೆ ಪಾಲಿಕೆಯ 6 ಕೋಟಿ ರು. ಅನುದಾನದಲ್ಲಿ 10 ಎಕರೆ ಪ್ರದೇಶವನ್ನು ಸಮತಟ್ಟುಗೊಳಿಸಿ ಕಾಂಪೌಂಡ್‌ ನಿರ್ಮಾಣ ಹಾಗೂ ಬೇಲಿ ಅಳವಡಿಸಿ ಕೊಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಬಿಬಿಎಂಪಿ ಅನುದಾನದಲ್ಲಿ ಕಾಮಗಾರಿ ನಡೆಸಿ ಪೊಲೀಸ್‌ ಇಲಾಖೆಗೆ ಹಸ್ತಾಂತರಿಸುವುದಕ್ಕೆ ಮುಂದಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಗರ ಸಂಚಾರಿ ಪೊಲೀಸ್‌ ಆಯುಕ್ತ ಬಿ.ಆರ್‌.ರವಿಕಾಂತೇಗೌಡ, ನಗರದ ಪೊಲೀಸ್‌ ಠಾಣೆಗಳ ಮುಂಭಾಗ ಹಾಗೂ ಪಾದಚಾರಿ ಮಾರ್ಗದಲ್ಲಿ ಜಪ್ತಿ ವಾಹನಗಳನ್ನು ನಿಲ್ಲಿಸಿರುವುದರಿಂದ ಸಾರ್ವಜನಿಕರೊಂದಿಗೆ ತೊಂದರೆಯಾಗುತ್ತಿದೆ, ಜತೆಗೆ ವಾಹನ ದಟ್ಟಣೆಗೂ ಕಾರಣವಾಗಿದೆ. ಆ ಹಿನ್ನೆಲೆಯಲ್ಲಿ ಠಾಣೆಗಳಲ್ಲಿರುವ ಜಪ್ತಿ ವಾಹನಗಳ ಸ್ಥಳಾಂತರಕ್ಕೆ ಜಾಗ ನೀಡುವಂತೆ ಬಿಬಿಎಂಪಿಗೆ ಮನವಿ ಮಾಡಲಾಗಿತ್ತು. ಅದರಂತೆ ಬಿಬಿಎಂಪಿ ಬಿಂಗೀಪುರದ ಭೂಭರ್ತಿ ಪ್ರದೇಶದ 10 ಎಕರೆ ನೀಡಿದೆ. ಎರಡು ಮೂರು ದಿನದಲ್ಲಿ ಭೂಭರ್ತಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಜಪ್ತಿ ಮಾಡಿದ ವಾಹನಗಳನ್ನು ಸ್ಥಳಾಂತರ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ನಗರದ ಎಲ್ಲ ಪೊಲೀಸ್‌ ಠಾಣೆಗಳಿಗೆ ಜಪ್ತಿ ಮಾಡಿ ಅನುಪಯುಕ್ತವಾಗಿ ಠಾಣೆ ಮುಂದೆ ನಿಲ್ಲಿಸಿಕೊಂಡಿರುವ ವಾಹನಗಳ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ. ಮಾಹಿತಿ ಲಭ್ಯವಾದ ಬಳಿಕ ಎಷ್ಟುವಾಹನ ಬಿಂಗೀಪುರ ಭೂರ್ತಿ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುವುದು ಎಂಬುದರ ಬಗ್ಗೆ ಮಾಹಿತಿ ಸಿಗಲಿದೆ ಎಂದು ತಿಳಿಸಿದರು.


ನಗರದ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಜಪ್ತಿ ಮಾಡಿದ ವಾಹನ ನಿಲುಗಡೆಯಿಂದ ಸಂಚಾರಿ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಜಾಗವನ್ನು ಪೊಲೀಸ್‌ ಇಲಾಖೆ ನೀಡಲಾಗುತ್ತಿದೆ. ಜತೆಗೆ ಬಿಬಿಎಂಪಿಯೇ .6 ಕೋಟಿ ವೆಚ್ಚ ಮಾಡಿ ಬಿಂಗೀಪುರ ಭೂರ್ತಿ ಪ್ರದೇಶಕ್ಕೆ ತಡೆಗೋಡೆ, ಜಪ್ತಿ ಮಾಡಿದ ವಾಹನ ನಿಲುಗಡೆ ಸ್ಥಳದಲ್ಲಿ ವಿದ್ಯುತ್‌ ದೀಪ, ಶೆಡ್‌ ನಿರ್ಮಿಸಿಕೊಡಲಾಗಿದೆ.

-ಗಂಗಾಂಬಿಕೆ ಬಿಬಿಎಂಪಿ ಮೇಯರ್‌

23 ಎಕರೆ ವಿವಿಧ ಉದ್ದೇಶಕ್ಕೆ ಬಳಕೆ

ಸುಮಾರು 23 ಎಕರೆ ಪ್ರದೇಶವಿರುವ ಬಿಂಗೀಪುರ ಭೂಭರ್ತಿ ಪ್ರದೇಶದಲ್ಲಿ ಪಾಲಿಕೆಯಿಂದ ಈಗಾಗಲೇ 4.50 ಎಕರೆ ಪ್ರದೇಶದಲ್ಲಿ ಟ್ರೀ ಪಾರ್ಕ್ ಅಭಿವೃದ್ಧಿ, ಎರಡು ಎಕರೆ ಜಾಗವನ್ನು ಗೋಶಾಲೆ ನಿರ್ಮಿಸಲು ಕಾಯ್ದಿರಿಸಲಾಗಿದೆ. ಇದೀಗ 10 ಎಕರೆ ಜಾಗವನ್ನು ಅನುಪಯುಕ್ತ ಹಾಗೂ ಜಪ್ತಿ ಮಾಡಿದ ವಾಹನಗಳನ್ನು ನಿಲುಗಡೆಗೆ ನಗರ ಸಂಚಾರಿ ಪೋಲಿಸರಿಗೆ ನೀಡಲಾಗುತ್ತಿದೆ.

click me!