ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ‘ಸೆಕ್ಯುರಿಟಿ’ ಗೋಲ್ಮಾಲ್‌?

By Kannadaprabha NewsFirst Published Sep 22, 2022, 10:00 AM IST
Highlights

ಭದ್ರತಾ ಸೇವೆಯಲ್ಲಿ ಆರ್‌ಸಿಯು ಮತ್ತೊಂದು ಕಾನೂನು ಉಲ್ಲಂಘಿಸಿರುವುದನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯವರು ನಡೆಸಿದ ಲೆಕ್ಕ ಪರಿಶೋಧನೆ ವೇಳೆ ಬರೋಬ್ಬರಿ 66,05,497 ಹೊಂದಾಣಿಕೆಯಾಗದಿರುವುದು ಬೆಳಕಿಗೆ ಬಂದಿದೆ. 

ಬೆಳಗಾವಿ(ಸೆ.22): ರಾಣಿ ಚನ್ನಮ್ಮ ವಿಶ್ವವಿದ್ಯಾಲಯ (ಆರ್‌ಸಿಯು) ಸ್ಥಾಪನೆಯಾದಾಗಿಂದಲೂ ಒಂದಿಲ್ಲೊಂದು ವಿವಾದ, ಹಗರಣದಲ್ಲಿ ಸಿಕ್ಕಿ ನಲಗುತ್ತಿದೆ. ಕಾನೂನು ಕಟ್ಟಳೆಗಳಿಗೆ ಒಳಪಟ್ಟು, ಪ್ರಾಮಾಣಿಕ ಆಡಳಿತ ನಡೆಸಬೇಕಾದವರೇ ಈಗ ಕಾನೂನು ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.

ಭದ್ರತಾ ಸೇವೆ (ಸೆಕ್ಯುರಿಟಿ ಸರ್ವಿಸ್‌)ಯಲ್ಲಿ ಆರ್‌ಸಿಯು ಮತ್ತೊಂದು ಕಾನೂನು ಉಲ್ಲಂಘಿಸಿರುವುದನ್ನು ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯವರು ನಡೆಸಿದ ಲೆಕ್ಕ ಪರಿಶೋಧನೆ ವೇಳೆ ಬರೋಬ್ಬರಿ .66,05,497 ಹೊಂದಾಣಿಕೆಯಾಗದಿರುವುದು ಬೆಳಕಿಗೆ ಬಂದಿದೆ. ಮಾತ್ರವಲ್ಲ, ಭದ್ರತಾ ಏಜೆನ್ಸಿಗೆ ಟೆಂಡರ್‌ ನೀಡುವಾಗ ಹಲವಾರು ಕಾನೂನು ಉಲ್ಲಂಘನೆಯನ್ನೂ ಆರ್‌ಸಿಯು ಮಾಡಿರುವುದನ್ನು ಸಿಎಜಿ ಪತ್ತೆ ಮಾಡಿದೆ. ಮಾತ್ರವಲ್ಲ, ತಾಳೆಯಾಗದ ಹಣವನ್ನು ಕೂಡ ಇಲಾಖೆ ಆಕ್ಷೇಪಣೆಯಲ್ಲಿಟ್ಟಿದ್ದಾರೆ.

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ನೇಮಕಾತಿಯಲ್ಲಿ ಅವ್ಯವಹಾರ?

ಏನಿದು ಗೋಲ್‌ಮಾಲ್‌?:

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಭದ್ರತಾ ಸೇವೆಗಾಗಿ 2018-19ನೇ ಸಾಲಿನಲ್ಲಿ ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಟೆಂಡರ್‌ ಕರೆಯಲಾಗಿತ್ತು. ಮೊದಲ ಟೆಂಡರ್‌ ಅನ್ನು 2017ರಲ್ಲಿ .88 ಲಕ್ಷ ಮೊತ್ತದಲ್ಲಿ ಟೆಂಡರ್‌ ಆಹ್ವಾನಿಸಿದ್ದರು. ಈ ವೇಳೆ ಧಾರವಾಡದ ಇಂಡಸ್‌ ಸೆಕ್ಯುರಿಟಿ ಆ್ಯಂಡ್‌ ಡಿಟೆಕ್ಟಿವ್‌ಸ್‌ ಪ್ರೈ. ಲಿ. .73,36,310 ವನ್ನು ನಮೂದಿಸಿದ್ದರು. ಅಲ್ಲದೇ 2018ರಲ್ಲಿ .88 ಲಕ್ಷ ಮೊತ್ತದಲ್ಲಿ ಎರಡನೇ ಟೆಂಡರ್‌ ಅನ್ನು ಆಹ್ವಾನಿಸಲಾಗಿತ್ತು. ಈ ವೇಳೆಯೂ ಮೊದಲ ಅವಧಿಗೆ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನೇ .89,67,479 ಮೊತ್ತವನ್ನು ನಮೂದಿಸಿದ್ದರು.

ಮೊದಲನೇ ಟೆಂಡರ್‌ ಕರೆಯಲ್ಲಿ 4 ಗುತ್ತಿಗೆದಾರರು ಭಾಗವಹಿಸಿದ್ದರು. ಅದರಲ್ಲಿ ತಾಂತ್ರಿಕವಾಗಿ ಒಬ್ಬರು ಮಾತ್ರ ಅರ್ಹರಾಗಿದ್ದು, ಅರ್ಹ ಗುತ್ತಿಗೆದಾರ ಕಾರ್ಮಿಕ ಕಾಯ್ದೆ (ಕನಿಷ್ಠ ವೇತನ) ದರಕ್ಕಿಂತ ಕಡಿಮೆ ದರವನ್ನು ನಮೂದಿಸಿರುವುದರಿಂದ ಟೆಂಡರ್‌ ಕಮಿಟಿ ಸಭೆಯಲ್ಲಿ ಭದ್ರತಾ ಸೇವೆ ಒದಗಿಸುವ ಟೆಂಡರ್‌ ಅನ್ನು ರದ್ದುಪಡಿಸಿ 2ನೇ ಬಾರಿ ಆಹ್ವಾನಿಸಲಾಗಿತ್ತು. ಆದರೆ ಟೆಂಡರ್‌ ರದ್ದುಪಡಿಸಿದ್ದು ಕೆಟಿಪಿಪಿ 14(2)ರ ನಿಯಮ ಪಾಲನೆಯಾಗಿಲ್ಲ. ಸರ್ಕಾರದ ಆದೇಶ ನಂ. ಎಫ್‌ಡಿ 9 ಪಿಸಿಎಲ್‌ 2004 (2) ಬೆಂಗಳೂರು, 06.08.2005ರನ್ವಯ ಸ್ಟ್ಯಾಂಡರ್ಡ್‌ ಟೆಂಡರ್‌ ಡಾಕ್ಯುಮೆಂಟ್‌ನಲ್ಲಿ ಟೆಂಡರ್‌ ಆಹ್ವಾನಿಸದೇ ಇರುವುದರಿಂದ ಕೆ/ಜಿ ನಿಯಮ ಉಲ್ಲಂಘಿಸಿದೆ. ಕಾರ್ಮಿಕ ಕಾಯ್ದೆ ಕನಿಷ್ಠ ವೇತನ ಅನುಗುಣವಾಗಿ ಅಂದಾಜು ತಯಾರಿಸಿ ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿ ಪಡೆದುಕೊಂಡ ಬಗ್ಗೆ ದಾಖಲೆಗಳನ್ನು ಪೂರೈಸಿಲ್ಲ. ಅಲ್ಲದೇ ಸಿಂಡಿಕೇಟ್‌ನಿಂದ ಅನುಮೋದನೆ ಪಡೆದುಕೊಂಡ ದಾಖಲೆಯನ್ನು ಆರ್‌ಸಿಯು ಪೂರೈಸಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಕೆಟಿಟಿಪಿ ಅಧಿನಿಯಮ 1999 ಕಲಂ 13ರ ಅನುಸಾರ ಟೆಂಡರ್‌ ಅಂಗೀಕರಿಸುವುದಕ್ಕೆ ಕಾರಣಗಳ ಸಂಗ್ರಹಣಾ ಸಂಸ್ಥೆಗೆ ಮತ್ತು ಟೆಂಡರ್‌ ಬುಲೆಟಿನ್‌ ಅಧಿಕಾರಿಗೆ ತಿಳಿಸಬೇಕು. ಆದರೆ ನಿಯಮ ಪಾಲನೆಯಾದ ಬಗ್ಗೆ ದಾಖಲೆ, 2008 ಅಕ್ಟೋಬರ್‌ 14ರ ಸರ್ಕಾರ ಆದೇಶ ನಂ.ಎಫ್‌ಡಿ 9 ಪಿಸಿಎಲ್‌. 2008 (2) ಬೆಂಗಳೂರು ಅನ್ವಯ ಭದ್ರತಾ ಠೇವಣಿಯನ್ನು ಶೇ.5ರಷ್ಟುಪಡೆದುಕೊಂಡ ಬಗ್ಗೆ ದಾಖಲೆಗಳನ್ನು ಹಾಜರುಪಡಿಸುವಲ್ಲಿ ವಿಫಲರಾಗಿದ್ದಾರೆ. ಆರ್‌ಸಿಯು ಕುಲಸಚಿವರ ಆದೇಶ 2018 ಫೆಬ್ರುವರಿ 28ರಲ್ಲಿ ಇರುವಂತೆ ಭದ್ರತಾ ಸಿಬ್ಬಂದಿ ಸಂಖ್ಯೆ 55ರಂತೆ ಪ್ರತಿ ತಿಂಗಳು .13,587 ವೇತನ ನಿಗದಿಪಡಿಸಲಾಗಿದೆ. ಆದರೆ ಆರ್‌ಸಿಯು ಗುತ್ತಿಗೆದಾರನಿಗೆ ಬರೋಬ್ಬರಿ .66,05,497 ಸಂದಾಯ ಮಾಡಲಾಗಿದೆ. ಅದಕ್ಕೆ ಅನುಗುಣವಾಗಿ ಇಪಿಎಫ್‌ ಮತ್ತು ಇಎಸ್‌ಐ ಭರಣಾ ಮಾಡಿದ ಕುರಿತು ಮೊತ್ತದ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಲೆಕ್ಕ ಪರಿಶೋಧನೆಗೆ ಹಾಜರುಪಡಿಸದಿರುವುದು ಇದೀಗ ಹಲವು ಅನುಮಾನಗಳ ಹುಟ್ಟು ಹಾಕಿದೆ. ಹೀಗಾಗಿ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯವರು .66,05,497 ಹಣವನ್ನು ಆಕ್ಷೇಪಣೆಯಲ್ಲಿಟ್ಟಿದೆ.

ಬಡತನದ ಮಧ್ಯೆ ಅರಳಿದ ಪ್ರತಿಭೆ, ಮೆಕ್ಯಾನಿಕ್‌ ಮಗಳು ಫಸ್ಟ್ ರ‍್ಯಾಂಕ್

ಮಾಹಿತಿ ನೀಡಲು ಹಿಂಜರಿದ ಕುಲಪತಿ ಪ್ರೊ.ರಾಮಚಂದ್ರೇಗೌಡ

ಭದ್ರತಾ ಸೇವೆಗಾಗಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಕನ್ನಡಪ್ರಭವು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ರಾಮಚಂದ್ರೇಗೌಡ ಅವರನ್ನು ಸಂಪರ್ಕಿಸಿ ವ್ಯತ್ಯಾಸದ ಬಗ್ಗೆ ಸ್ಪಷ್ಟಿಕರಣ ಕೇಳಿದಾಗ, ಅವರು ತಾಳ್ಮೆ ಕಳೆದುಕೊಂಡಿದಲ್ಲದೇ ಈ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದರು. ಅಲ್ಲದೇ ಆರ್‌ಸಿಯು ಮುಖ್ಯಸ್ಥರಾಗಿರುವ ಕುಲಪತಿ ಅವರು ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡದೆ, ಜವಾಬ್ದಾರಿಯಿಂದ ನುಣುಚಿಕೊಂಡು ರಿಜಿಸ್ಟರ ಅವರನ್ನೇ ಕೇಳಿ ಎಂದು ಹೇಳಿದ್ದಾರೆ.

ಆರ್‌ಸಿಯು ವ್ಯಾಪ್ತಿಯಲ್ಲಿ ಭದ್ರತಾ ಸೇವೆಗಳಿಗಾಗಿ ಕರೆಯಲಾಗಿದ್ದ ಟೆಂಡರ್‌ನಲ್ಲಿ ಭಾರೀ ಪ್ರಮಾಣದಲ್ಲಿ ಹಗರಣವಾಗಿರುವುದು ಲೆಕ್ಕ ಪರಿಶೋಧನೆಯಿಂದ ಬೆಳಕಿಗೆ ಬಂದಿದೆ. ಈ ಬಗ್ಗೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗುವುದು ಅಂತ ಮಾಹಿತಿ ಹಕ್ಕು ಕಾರ್ಯಕರ್ತ ಸುರೇಂದ್ರ ಉಗಾರೆ ತಿಳಿಸಿದ್ದಾರೆ. 
 

click me!