ವಸಂತಕುಮಾರ ಕತಗಾಲ
ಕಾರವಾರ (ಸೆ.22) : ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಅದಕ್ಕೆ ಅಧಿಕೃತ ಮುದ್ರೆ ಒತ್ತಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕಿಂತ ತಜ್ಞ ವೈದ್ಯರನ್ನು ತರುವ ಸವಾಲನ್ನು ಎದುರಿಸುವುದು ಕಠಿಣವಾಗಲಿದೆ. ಎಂಬಿಬಿಎಸ್ ಉತ್ತೀರ್ಣರಾದ ವೈದ್ಯರ ಕೊರತೆಯೇ ಜಿಲ್ಲೆಯಲ್ಲಿ ತೀವ್ರವಾಗಿದೆ. ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಸಿಗುತ್ತಿಲ್ಲ. ಕೆಲವೆಡೆ ಆಯುರ್ವೇದ ವೈದ್ಯರನ್ನೂ ನೇಮಿಸಲಾಗಿದೆ. ಇದಲ್ಲದೇ ಒಬ್ಬರೇ ವೈದ್ಯರು 2-3 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನೋಡಿಕೊಳ್ಳಬೇಕಾದ ಉದಾಹರಣೆಯೂ ನಮ್ಮ ಮುಂದಿದೆ. ಹೀಗಿರುವಾಗ ತಜ್ಞ ವೈದ್ಯರು ಜಿಲ್ಲೆಗೆ ಆಗಮಿಸುವುದು ಹೇಗೆ ಎನ್ನುವ ಪ್ರಶ್ನೆ ಕಾಡದೇ ಇರದು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಂ ತಾತ್ವಿಕ ಒಪ್ಪಿಗೆ:ಉ.ಕನ್ನಡದ ಬಹುದಿನಗಳ ಬೇಡಿಕೆ ಈಡೇರಲಿದ್ಯಾ?
ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಸೂಪರ್ ಸ್ಪೆಷಾಲಿಟಿ ಸೌಲಭ್ಯ ಕಲ್ಪಿಸಲು ತಜ್ಞ ವೈದ್ಯರುಗಳನ್ನು ನೇಮಕ ಮಾಡಲು 2011ರ ನವೆಂಬರ್ 20ರಂದು ಕಾರ್ಡಿಯಾಲಜಿ, ಪಿಡಿಯಾಟ್ರಿಕ್ ಸರ್ಜರಿ, ಯುರಾಲಜಿ, ನ್ಯುರಾಲಜಿ, ನ್ಯುರೋ ಸರ್ಜನ್, ಪ್ಲಾಸ್ಟಿಕ್ ಸರ್ಜರಿ ಹಾಗೂ ನೆಪ್ರೊಲಜಿ ಹುದ್ದೆಗೆ ನೇರ ಸಂದರ್ಶನದ ಮೂಲಕ ಭರ್ತಿ ಮಾಡಲು ಪ್ರಕಟಣೆ ಹೊರಡಿಸಲಾಗಿತ್ತು. ಆದರೆ ನೆಪ್ರೊಲಜಿ ಹುದ್ದೆಗೆ ಮಾತ್ರ ಒಬ್ಬರು ಸಂದರ್ಶನಕ್ಕೆ ಹಾಜರಾದರೆ, ಉಳಿದ ವಿಭಾಗಗಳಲ್ಲಿ ಯಾರೂ ಹಾಜರಾಗಲಿಲ್ಲ. ಇದರಿಂದ ಸರ್ಕಾರ ಮಂಜೂರು ಮಾಡಿದರೂ ವೈದ್ಯರು ಬಾರದೇ ಉದ್ದೇಶವೇ ಈಡೇರದಂತಾಗಿದೆ.
ವೈದ್ಯರ ಹಿಂದೇಟಿಗೆ ಕಾರಣವೇನು:
ವೈದ್ಯರು ಬರಲು ಹಿಂದೇಟು ಹಾಕಲು ಹಲವು ಕಾರಣಗಳನ್ನು ನೀಡಲಾಗುತ್ತಿದೆ. ಉತ್ತರ ಕನ್ನಡದಲ್ಲಿ ಮೂಲಭೂತ ಸೌಲಭ್ಯಗಳು, ಅತ್ಯಾಧುನಿಕ ಸೇವೆಗಳು ಇಲ್ಲದಿರುವುದೇ ವೈದ್ಯರ ನಿರಾಸಕ್ತಿಗೆ ಕಾರಣವಾಗಿದೆ. ಉತ್ತರ ಕನ್ನಡದಲ್ಲಿ ಏರ್‌ಪೋರ್ಚ್ ಇಲ್ಲ. ಬೆಂಗಳೂರು, ದೆಹಲಿ, ಗೋವಾ ಹೀಗೆ ದೇಶದ ವಿವಿಧೆಡೆಯ ನಗರಗಲ್ಲಿ ಶೀಘ್ರವಾಗಿ ತಲುಪಲು ಸಾಧ್ಯವಾಗದು. ಏರ್‌ಪೋರ್ಚ್‌ಗಾಗಿ ಗೋವಾ, ಮಂಗಳೂರಿಗೆ ಹೋಗಬೇಕು. ನೌಕಾನೆಲೆಯವರು ನಿರ್ಮಿಸಲು ಉದ್ದೇಶಿಸಿರುವ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಿದ ಮೇಲೆ ಈ ಸಮಸ್ಯೆ ನಿವಾರಣೆಯಾಗಲಿದೆ.
ಉತ್ತರ ಕರ್ನಾಟಕ ಹಾಗೂ ರಾಜ್ಯದ ರಾಜಧಾನಿಯನ್ನು ನೇರವಾಗಿ ಸಂಪರ್ಕಿಸುವ ರೈಲುಗಳಿಲ್ಲ. ಈಗಿರುವ ರೈಲು ಮುಂಗಳೂರು, ಮೈಸೂರು ಮೂಲಕ ತೆರಳುತ್ತದೆ. ಅಂಕೋಲಾ ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣವಾದರೆ ಮಾತ್ರ ಈ ಸಮಸ್ಯೆ ಬಗೆಹರಿಯಲಿದೆ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಇಲ್ಲ. ವೈದ್ಯರು ತಮ್ಮ ಮಕ್ಕಳನ್ನು ಇಲ್ಲಿ ಓದಿಸಲು ಸಾಧ್ಯವಿಲ್ಲ. ಇದರಿಂದ ಕುಟುಂಬ ಒಂದೆಡೆ ಇರಬೇಕು. ನಾವೊಬ್ಬರೇ ಇಲ್ಲಿರಬೇಕು. ಮಕ್ಕಳನ್ನು ಓದಿಸುವುದು ಕಷ್ಟಎನ್ನುತ್ತಾರೆ.
ಎಲ್ಲಕ್ಕಿಂತ ಮುಖ್ಯವಾಗಿ ಹೃದಯ, ಮಿದುಳು, ಕಿಡ್ನಿ ಮತ್ತಿತರ ಶಸ್ತ್ರಚಿಕಿತ್ಸೆ ನಡೆಸುವ ಖಾಸಗಿ ಆಸ್ಪತ್ರೆಗಳಿಲ್ಲ. ಖಾಸಗಿ ಆಸ್ಪತ್ರೆಗಳಿದ್ದರೆ ಬಿಡುವಿನ ವೇಳೆಯಲ್ಲಿ ಆ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುವ ಅವಕಾಶ ಸಿಗುತ್ತಿತ್ತು. ಏನಿದ್ದರೂ ಕೆಲಸ ಮಾಡುವ ಸಂಸ್ಥೆಯೊಂದನ್ನೇ ನೆಚ್ಚಿಕೊಂಡಿರಬೇಕು. ಶಾಪಿಂಗ್ ಹೋಗಬೇಕೆಂದರೆ ದೊಡ್ಡ ಮಾಲ್‌ಗಳಿಲ್ಲ. ಕೆಲಸ ಮಾಡುವ ಆಸ್ಪತ್ರೆಯೊಂದನ್ನು ಹೊರತು ಪಡಿಸಿದರೆ ಇಂತಹ ಇಲ್ಲಗಳ ಪಟ್ಟಿಯೇ ಹೆಚ್ಚು ಬೆಳೆಯುತ್ತಿದೆ.
ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸ್ಥಳ ನಿಗದಿ, ಆಡಳಿತಾತ್ಮಕ ಒಪ್ಪಿಗೆ, ಹಣ ಬಿಡುಗಡೆ, ಆಸ್ಪತ್ರೆ ನಿರ್ಮಾಣ ಎಲ್ಲಕ್ಕಿಂತ ತಜ್ಞ ವೈದ್ಯರನ್ನು ಕರೆತರುವುದೇ ದೊಡ್ಡ ಸವಾಲು.
ಸರ್ಕಾರ ಮನಸ್ಸು ಮಾಡಿದ್ರೆ 10 ದಿನದಲ್ಲಿ ಆಸ್ಪತ್ರೆ
ಉತ್ತರ ಕನ್ನಡ ಜಿಲ್ಲೆಯ ಆಸ್ಪತ್ರೆಯ ಸ್ಥಿತಿಯನ್ನು ಸರ್ಕಾರ ಮನಸ್ಸು ಮಾಡಿದರೆ ಕೇವಲ 10 ದಿನದಲ್ಲಿ ಬಗೆಹರಿಸಬಹುದು. ಆದರೆ, ಸರ್ಕಾರ ನಾಟಕವಾಡುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಉಸ್ತುವಾರಿ ಐವನ್ ಡಿಸೋಜ ಹೇಳಿದರು. ರಾಜ್ಯದಲ್ಲಿ ಬಿಜೆಪಿ ಆಡಳಿತವೇ ಇದ್ದು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಮೀನಮೇಷ ಎಣಿಸುತ್ತಿದೆ. ಆಸ್ಪತ್ರೆ ನಿರ್ಮಾಣಕ್ಕೆ ಜಾಗ ಹುಡುಕಲು ಐದು ವರ್ಷ ಬೇಕಾಯಿತಾ? ಅಲ್ಲಿಯವರೆಗೆ ಸರ್ಕಾರಿ ಆಸ್ಪತ್ರೆಗಳನ್ನು ಅಪ್‌ಡೇಟ್ ಮಾಡುವ ಪ್ರಕ್ರಿಯೆ ಸರ್ಕಾರ ನಡೆಸಲಿ. ಖಾಲಿ ಇರುವ ವೈದ್ಯರ ಹುದ್ದೆಯನ್ನು ಭರ್ತಿ ಮಾಡಿದರೆ ಕೇವಲ 10 ದಿನಗಳಲ್ಲಿಯೇ ಜಿಲ್ಲೆಯ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ದುರಾಡಳಿತದಿಂದಾಗಿ ಜನತೆ ಕಂಗೆಟ್ಟಿದ್ದಾರೆ. ದೇಶದ ಜನತೆಯನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡೊ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿದೆ. ರಾಜ್ಯದ 224 ಕ್ಷೇತ್ರದಿಂದ ಈ ಯಾತ್ರೆ ಪಾಲ್ಗೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಈ ಯಾತ್ರೆ 511 ಕಿ.ಮೀ. ಸಂಚರಿಸಲಿದ್ದು, ಈ ಯಾತ್ರೆಯಲ್ಲಿ ಪ್ರತಿ ಕ್ಷೇತ್ರದಿಂದ 5 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ. ಉ.ಕ.ದ ಜನತೆ ಅ.15ರಂದು ಚಳ್ಳಕೆರೆ ಮತ್ತು 16ರಂದು ಮೊಳಕಾಲ್ಮೂರಿನಲ್ಲಿ ನಡೆಯುವ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಪೂರ್ವ ಸಿದ್ಧತೆಯಾಗಿ ಜಿಲ್ಲೆಯ 14 ಬ್ಲಾಕ್‌ಗಳಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗಿದೆ ಎಂದರು. ಪ್ರತಿ ವಾರ್ಡ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಪಾಲ್ಗೊಳ್ಳಬೇಕು. ಎಲ್ಲ ಕೆಲಸ ಕಾರ್ಯ ಬದಿಗಿಟ್ಟು ಪಾಲ್ಗೊಳ್ಳಲಿದ್ದಾರೆ. ಮಯೂರ ಜಯಕುಮಾರ, ದೇಶಪಾಂಡೆ, ನನ್ನನ್ನೂ ಸೇರಿ ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಸಂಚಾರಿಸಲು ಐದು ಸಮಿತಿ ರಚಿಸಿದ್ದೇವೆ ಎಂದರು.
Uttara Kannada; ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆಗೆ ಬ್ರೇಕ್, ಜನರ ಕೆಂಗಣ್ಣಿಗೆ ಸರಕಾರ!
ಜನತೆ ಈಗಾಗಲೇ ರಾಜ್ಯದಲ್ಲಿ ಸರ್ಕಾರ ಬದಲಾವಣೆ ಆಗಬೇಕು ಎಂದು ತೀರ್ಮಾನಿಸಿದ್ದಾರೆ. ಬಿಜೆಪಿ ಆಡಳಿತ ಹದಗೆಟ್ಟಿದೆ. ಮಂಗಳೂರಿಗೆ ಮೋದಿ ಕರೆಸುವಾಗ ಸರ್ಕಾರದ ಹೆಸರನ್ನು ದುರುಪಯೋಗಿಸಿಕೊಂಡಿದ್ದಾರೆ. ಅಲ್ಲಿ ಮೂರ್ನಾಲು ಲಕ್ಷ ಜನ ಸೇರಿಸಬೇಕೆಂದಿದ್ದರೂ 50 ಸಾವಿರ ಜನ ಸೇರಿರಲಿಲ್ಲ. ಬಿಜೆಪಿಯಿಂದ ಜನಪರ ಆಡಳಿತ ನಡೆಯುತ್ತಿಲ್ಲ ಎಂದು ಸಾಮಾನ್ಯರು ಹೇಳುತ್ತಿದ್ದಾರೆ ಎಂದು ದೂರಿದರು. ಪಕ್ಷದ ಕಾರ್ಯಕರ್ತರೇ ವಿಶ್ವಾಸ ಕಳೆದುಕೊಂಡು ರಾಜೀನಾಮೆ ನೀಡುತ್ತಿರುವುದು ಇತಿಹಾಸದಲ್ಲೇ ಮೊದಲ ಬಾರಿ. ಸ್ಥಿತಿ ಹೀಗಿರುವಾಗ ಪಕ್ಷದ ಪ್ರಮುಖರು ತಾಕತ್ತಿದ್ದರೆ ನಾವು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಿರಿ ಎನ್ನುತ್ತಿದ್ದಾರೆ. ತಡೆಯುವುದು ಕಾಂಗ್ರೆಸ್ ಧರ್ಮವಲ್ಲ. ಆದರೆ ನೀವೇ ಗೆದ್ದು ಬರಲ್ಲ ಎಂದರು.