* ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸರ್ಕಾರ ಸೂಚನೆ
* ಬೆಂಗಳೂರಿನಾದ್ಯಂತ ನಿಷೇಧಾಜ್ಞೆ ಜಾರಿ
* ಉಲ್ಲಂಘನೆ ಮಾಡಿದ್ರೆ ಕಾನೂನು ಕ್ರಮದ ಎಚ್ಚರಿಕೆ
ಬೆಂಗಳೂರು, (ಡಿ.31): ಕೋವಿಡ್ ಸೋಂಕು (Coronvirus) ಹೆಚ್ಚಳ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ (New Year Celebration) ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್(Kamal Pant), ಇಂದು (ಡಿ. 31) ಸಂಜೆ 6 ಗಂಟೆಯಿಂದ ನಾಳೆ (ಜ. 1) ಬೆಳಗ್ಗೆ 5 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ 9Section 144) ಆದೇಶ ಹೊರಡಿಸಿದ್ದಾರೆ.
Coronavirus Update: ಶಾಕಿಂಗ್, ಕರ್ನಾಟಕದಲ್ಲಿ ಕೊರೋನಾ ಭಾರಿ ಏರಿಕೆ, ಹೆಚ್ಚಿದ ಆತಂಕ
ಇದರ ಪ್ರಕಾರ 5ಕ್ಕಿಂತ ಹೆಚ್ಚು ಜನ ಎಲ್ಲಿಯೂ ಸಮಾವೇಶಗೊಳ್ಳುವಂತಿಲ್ಲ. ರಸ್ತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಮಾಡಲು ಅವಕಾಶವಿಲ್ಲ. ಪಾರ್ಕ್, ಮೈದಾನ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲಾಗಿದೆ.
ಪ್ರಮುಖವಾಗಿ ಪ್ರತಿ ವರ್ಷ ಅದ್ಧೂರಿ ವರ್ಷಾ ಚರಣೆ ನಡೆಯುವ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ, ಕೋರಮಂಗಲ ಸೇರಿದಂತೆ ಆಯಕಟ್ಟಿನ ಜಾಗಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಆಯಕಟ್ಟಿನ ಜಾಗಗಳೂ ಸೇರಿದಂತೆ ಎಲ್ಲೆಡೆ ಬಿಗಿಭದ್ರತೆ ಆಯೋಜಿಸಲಾಗಿದೆ.
ಜನವಸತಿ ಸಂಕೀರ್ಣ, ಖಾಸಗಿ ಕ್ಲಬ್‍ಗಳಲ್ಲಿ ಅದರ ನಿವಾಸಿಗಳು ಮತ್ತು ಸದಸ್ಯರು ಯಾವುದೇ ಸಂಘಟನಾತ್ಮಕ ಚಟುವಟಿಕೆಗಳಿಲ್ಲದೆ ಹೊಸ ವರ್ಷಾಚರಣೆ ಮಾಡಬಹುದಾಗಿದೆ. ಹೋಟೆಲ್, ಮಾಲ್, ರೆಸ್ಟೋರೆಂಟ್, ಕ್ಲಬ್, ಪಬ್, ಕ್ಲಬ್‍ಹೌಸ್ ಅಥವಾ ಇನ್ನಿತರ ಸ್ಥಳಗಳಲ್ಲಿ ಡಿಜೆ ಹಾಕುವುದು, ಕಾರ್ಯಕ್ರಮ ಆಯೋಜಿಸುವುದು, ಪ್ರದರ್ಶನಗಳು ಮತ್ತಿತರ ಆಚರಣೆಗಳಿಗೆ ಕಡಿವಾಣವಿದೆ. ಸಂಗೀತ ರಸಸಂಜೆ, ನೃತ್ಯ ಇತರ ಪಾರ್ಟಿಗಳಿಗೂ ಅವಕಾಶವಿಲ್ಲ.
ಆದರೆ ಅನುಮತಿ ಪಡೆದ ಪ್ರಮಾಣದಲ್ಲಿ ಸಂಗೀತದೊಂದಿಗೆ ಯಾಂತ್ರಿಕ ವ್ಯವಹಾರಗಳನ್ನು ನಡೆಸಲು ಅವಕಾಶವಿದೆ. ಆದರೆ ಹೋಟೆಲ್, ಮಾಲ್, ಪಬ್, ರೆಸ್ಟೋರೆಂಟ್‍ಗಳು ಕೋವಿಡ್ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ನಾಗರಿಕ ಸುರಕ್ಷತೆಗೆ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕು, ಪೊಲೀಸ್ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಆಡಳಿತ ಅಕಾರಿಗಳು ಕೋವಿಡ್ ಮಾರ್ಗಸೂಚಿಗಳ ಪಾಲನೆ ಮೇಲೆ ನಿಗಾ ಇಡಲಿದ್ದಾರೆ ಎಂದಿದ್ದಾರೆ.
ಯಾರಾದರೂ ನಿಯಮ ಉಲ್ಲಂಘನೆ ಮಾಡಿದ್ದು ಕಂಡುಬಂದರೆ ವಿಪತ್ತು ನಿರ್ವಹಣಾ ಕಾಯ್ದೆ, ಸೆಕ್ಷನ್ 51ರಿಂದ 60ರಡಿ ಕ್ರಮ ಜರುಗಿಸಲಾಗುವುದು ಜೊತೆಗೆ ನಿಷೇಧಾಜ್ಞೆ ನಿಯಮಾವಳಿಗಳ ಅಡಿ ಕೂಡ ಕಾನೂನು ಕ್ರಮ ಜರುಗಿಸುವುದಾಗಿ ಆಯುಕ್ತರು ತಿಳಿಸಿದ್ದಾರೆ.
ಗೃಹ ಸಚಿವರ ಮನವಿ
ಬೆಂಗಳೂರು ನಗರದಲ್ಲಿ ಶುಕ್ರವಾರ ಸಂಜೆ 6 ಗಂಟೆಯಿಂದ ನಿರ್ಬಂಧವಿದೆ. ಹೊಸ ವರ್ಷಾಚರಣೆ ಹೆಸರಿನಲ್ಲಿ ಹೆಚ್ಚು ಜನರ ಸೇರಬಾರದು. ರಾತ್ರಿ 10 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಕೊರೋನಾ ಸ್ಫೋಟವಾಗಿದೆ. ಸೋಂಕು ಹರಡದಂತೆ ತಡೆಯಲು ನಿರ್ಬಂಧ ವಿಧಿಸಲಾಗುತ್ತಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ನಿರ್ಬಂಧ ಹಾಕಲಾಗಿದೆ. ಜನರು ತಮ್ಮ ಮನೆಗಳಲ್ಲೇ ಹೊಸವರ್ಷಾಚರಣೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ದಿನೇ ದಿನೇ ಕೋವಿಡ್ ಮತ್ತು ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕಫ್ರ್ಯೂವನ್ನು ಜಾರಿಗೆ ತಂದಿದೆ. ಹೊಸ ವರ್ಷಾಚರಣೆ ವೇಳೆ ಯುವ ಸಮುದಾಯವೂ ಸೇರಿದಂತೆ ಬಹಳಷ್ಟು ಮಂದಿ ಹದ್ದುಮೀರಿದ ವರ್ತನೆ ಪ್ರದರ್ಶಿಸುವುದು ಸಾಮಾನ್ಯ. ಇದರಿಂದ ಜನ ಸಂದಣಿಯ ನಡುವೆ ಸೋಂಕು ವ್ಯಾಪಿಸಿ ಮತ್ತಷ್ಟು ಅಪಾಯಕಾರಿ ಸನ್ನಿವೇಶಗಳನ್ನು ಸೃಷ್ಟಿಸುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಹೊಸ ವರ್ಷದ ಸಂಭ್ರಮವನ್ನು ಮರೆತು ಪೊಲೀಸರು ಇಂದು ಸಂಜೆಯಿಂದಲೇ ರಸ್ತೆಗಿಳಿದಿದ್ದಾರೆ. ನಗರಾದ್ಯಂತ 500 ಕಡೆ ಬ್ಯಾರಿಕೇಡ್‍ಗಳನ್ನು ಹಾಕಿ ನಾಕಾಬಂಧಿ ನಡೆಸಲಿದ್ದಾರೆ.