ಸೀಲ್‌ಡೌನ್‌ಗೆ ಒಳಗಾಗಿದ್ದ ಹಕ್ಕಿಪಕ್ಕಿ ಕ್ಯಾಂಪ್‌ನ ಸುಮಾರು 50 ಮಂದಿಯ ಗುಂಪೊಂದು ಪಕ್ಕದ ಗ್ರಾಮವಾದ ಚಿಕ್ಕಮರಡಿ ಗ್ರಾಮದ ಮೇಲೆ ದಂಡೆತ್ತಿ ಬಂದು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.03): ಕೊರೋನಾ ರೋಗ ವಿಚಾರ ಕೆಲವು ವ್ಯಕ್ತಿಗಳ, ದೇಶಗಳ ನಡುವಿನ ದ್ವೇಷಮಯ ಮನಃಸ್ಥಿತಿಗೆ ಕಾರಣವಾಗಿದ್ದರೆ, ಇದೇ ಮೊದಲ ಬಾರಿಗೆ ಎರಡು ಗ್ರಾಮಗಳ ನಡುವೆ ದೊಡ್ಡ ಗಲಾಟೆಗೆ ಕಾರಣವಾಗಿದೆ.
ಸೀಲ್‌ಡೌನ್‌ಗೆ ಒಳಗಾಗಿದ್ದ ಹಕ್ಕಿಪಕ್ಕಿ ಕ್ಯಾಂಪ್‌ನ ಸುಮಾರು 50 ಮಂದಿಯ ಗುಂಪೊಂದು ಪಕ್ಕದ ಗ್ರಾಮವಾದ ಚಿಕ್ಕಮರಡಿ ಗ್ರಾಮದ ಮೇಲೆ ದಂಡೆತ್ತಿ ಬಂದು ಕಲ್ಲುಗಳಿಂದ ದಾಳಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಗಲಭೆಯಲ್ಲಿ 5-10 ಜನ ತೀವ್ರವಾಗಿ ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ವಿವರ:
ಹೊರ ರಾಜ್ಯಕ್ಕೆ ತೆರಳಿದ್ದ ಕೆಲವರು ಕೆಲ ದಿನಗಳ ಹಿಂದೆ ವಾಪಸ್ಸು ಶಿವಮೊಗ್ಗ ತಾಲೂಕಿನ ಹಕ್ಕಿಪಕ್ಕಿ ಕ್ಯಾಂಪ್‌ಗೆ ಮರಳಿದ್ದಾರೆ. ಇವರನ್ನು ಪರೀಕ್ಷೆಗೆ ಒಳಪಡಿಸಿದಾಗ ಮೂರು ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿತ್ತು. ಹೀಗಾಗಿ ಈ ಕ್ಯಾಂಪ್ ಅನ್ನು ಸೀಲ್‌ಡೌನ್ ಮಾಡಲಾಗಿತ್ತು. ಆದರೆ ಗ್ರಾಮದ ಕೆಲವರು ಕದ್ದು ಮುಚ್ಚಿ ಚಿಕ್ಕಮರಡಿ ಗ್ರಾಮಕ್ಕೆ ಬರುತ್ತದ್ದರು ಎಂಬುದು ಚಿಕ್ಕಮರಡಿ ಗ್ರಾಮಸ್ಥರು ದೂರು. ಇನ್ನು ಕೆಲವು ಮೂಲಗಳ ಪ್ರಕಾರ ನಿತ್ಯ ಪರೀಕ್ಷೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಹೋಗುವಾಗ ಚಿಕ್ಕಮರಡಿ ಗ್ರಾಮದ ಮೂಲಕವೇ ಹಾದು ಹೋಗುತ್ತಿದ್ದರು ಎನ್ನಲಾಗುತ್ತಿದೆ.
ಮಾನ್ಸೂನ್ ಸಂಭಾವ್ಯ ಅಪಾಯ ಎದುರಿಸಲು ಮುಂಜಾಗ್ರತೆ ವಹಿಸಿ: ಶಿವಮೊಗ್ಗ ಡಿಸಿ
ಒಟ್ಟಾರೆ ಹಕ್ಕಿಪಕ್ಕಿ ಗ್ರಾಮದವರು ತಮ್ಮ ಗ್ರಾಮಕ್ಕೆ ಬಂದು ಸಂಪರ್ಕ ಇಟ್ಟುಕೊಳ್ಳುವುದನ್ನು ಚಿಕ್ಕಮರಡಿ ಗ್ರಾಮದವರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಮಾತು ಬೆಳೆದು ಅಸಮಾಧಾನ ಮುಗಿಲು ಮುಟ್ಟಿತ್ತು.
ಮಂಗಳವಾರ ಸಂಜೆ ಏಕಾಏಕಿ ಹಕ್ಕಿಪಕ್ಕಿ ಗ್ರಾಮದ ಸುಮಾರು 50 ಜನರ ಗುಂಪು ಚಿಕ್ಕಮರಡಿ ಗ್ರಾಮದ ಮೇಲೆ ಕಲ್ಲು, ಬಡಿಕೆ ಇತ್ಯಾದಿಗಳಿಂದ ದಾಳಿ ನಡೆಸಿದೆ. ಕಂಡ ಕಂಡವರನ್ನು ಹೊಡೆಯಲಾಗಿದೆ. ಮನೆ, ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.ಇದರಿಂದ ಸಾಕಷ್ಟುಹಾನಿ ಸಂಭವಿಸಿದೆ. ಐದಾರು ಮಂದಿಗೆ ತೀವ್ರವಾಗಿ ಪೆಟ್ಟಾಗಿದ್ದು,ಎಲ್ಲರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿದ್ದಾರೆ. ಸುಮಾರು 50 ಮಂದಿ ಪೊಲೀಸರನ್ನು ಗ್ರಾಮಕ್ಕೆ ಕಳುಹಿಸಲಾಗಿದ್ದು, ಇದೀಗ ಗ್ರಾಮದಲ್ಲಿ ಬಿಗಿ ವಾತಾವರಣವಿದೆ. ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.