* ನೆರೆ ಪೀಡಿತ ಪ್ರದೇಶ ಭೇಟಿಗೆ ಇದೇ ರಸ್ತೆ ಮೂಲಕ ಟೋಲ್‌ಗೇಟ್ ಹಾದುಹೋದ ಸಿಎಂ
* ಬ್ರಹ್ಮರಕೂಟ್ಲು ರಸ್ತೆಯ ದುರವಸ್ಥೆ
* ಧಾರಾಕಾರ ಮಳೆಗೆ ಅಲ್ಲಲ್ಲಿ ಕಿತ್ತು ಹೋದ ರಾಷ್ಟ್ರೀಯ ಹೆದ್ದಾರಿ
ಮಂಗಳೂರು(ಜು.13): ರಾಷ್ಟ್ರೀಯ ಹೆದ್ದಾರಿ 75ರ ಟೋಲ್‌ಗೇಟ್ ಹಾದುಹೋಗುವ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ರಸ್ತೆಯ ದುರವಸ್ಥೆ ಫೋಟೋ ಈಗ ಪ್ರಧಾನಿ ಕಚೇರಿ ಹಾಗೂ ಕರ್ನಾಟಕ ಮುಖ್ಯಮಂತ್ರಿಗಳಿಗೆ ತಲುಪಿದೆ.
ಸಾಮಾಜಿಕ ಹೋರಾಟಗಾರರಾದ ಪುತ್ತೂರಿನ ರಾಜೇಶ್ ಕೃಷ್ಣ ಪ್ರಸಾದ್ ಹಾಗೂ ರೋಶನ್ ಕುಮಾರ್ ಕುಂಬ್ಳೆ ಇವರು ಕಿತ್ತುಹೋದ ಟೋಲ್‌ಗೇಟ್ ಹಾದುಹೋಗುವ ರಸ್ತೆಯ ಫೋಟೋ ಕ್ಲಿಕ್ಕಿಸಿ ಮಂಗಳವಾರ ಪಿಎಂಒ ಇಂಡಿಯಾ ಕಚೇರಿ, ಕೇಂದ್ರ ಭೂಸಾರಿಗೆ ಸಚಿವಾಲಯ ಹಾಗೂ ಕರ್ನಾಟಕ ಸಿಎಂ ಇವರಿಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದಾರೆ.
ಕಳೆದ ಒಂದು ವಾರದಿಂದ ಅವ್ಯಾಹತವಾಗಿ ಸುರಿದ ಧಾರಾಕಾರ ಮಳೆಗೆ ರಾಷ್ಟ್ರೀಯ ಹೆದ್ದಾರಿ ಕೂಡ ಅಲ್ಲಲ್ಲಿ ಕಿತ್ತು ಹೋಗಿತ್ತು. ಮುಖ್ಯವಾಗಿ ಬ್ರಹ್ಮರಕೂಟ್ಲು ಟೋಲ್‌ಗೇಟ್ ಹಾದುಹೋಗುವ ರಸ್ತೆ ಪೂರ್ತಿ ಹೊಂಡ ಗುಂಡಿ ಬಿದ್ದು ಹಾನಿಗೀಡಾಗಿತ್ತು. ಸಮೀಪದಲ್ಲೇ ಹೆದ್ದಾರಿಯ ಟೋಲ್ ಸಂಗ್ರಹ ಕೇಂದ್ರವಿದ್ದರೆ, ಇದನ್ನು ಅಣಕಿಸುವಂತೆ ಡಾಂಬರು ಎದ್ದುಹೋದ ರಸ್ತೆ ಇದೆ. ರಸ್ತೆ ಸರಿ ಇಲ್ಲದಿದ್ದರೂ ಅದನ್ನು ದುರಸ್ತಿಪಡಿಸುವ ಗೋಜಿಗೆ ಹೋಗದೆ ಟೋಲ್ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿರುವ ಸನ್ನಿವೇಶವನ್ನು ಬಿಂಬಿಸುವ ಫೋಟೋವನ್ನು ರಾಜೇಶ್ ಕೃಷ್ಣ ಪ್ರಸಾದ್ ಪಿಎಂಒ ಇಂಡಿಯಾ ಕಚೇರಿಯ ಪೋರ್ಟಲ್‌ಗೆ ಮೇಲ್ ಮಾಡಿದ್ದಾರೆ. ಅದಕ್ಕೆ ಸ್ವೀಕೃತಿ ಪತ್ರ ಲಭಿಸಿದೆ. ಅದೇ ರೀತಿ ರೋಶನ್ ಕಮಾರ್ ಕುಂಬ್ಳೆ ಎಂಬವರು ಪ್ರಧಾನಿ ಕಾರ್ಯಾಲಯ ಮಾತ್ರವಲ್ಲ ಕರ್ನಾಟಕ ಮುಖ್ಯಮಂತ್ರಿಗಳಿಗೆ ಟ್ವೀಟ್ ಮೂಲಕ ಟ್ಯಾಗ್ ಮಾಡಿದ್ದಾರೆ.
ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು..!
ನೆರೆ ಪೀಡಿತ ಪ್ರದೇಶಗಳ ಭೇಟಿಗೆ ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಇದೇ ರಸ್ತೆ ಮೂಲಕ ಟೋಲ್‌ಗೇಟ್ ದಾಟಿ ಪುತ್ತೂರಿನಿಂದ ಮಂಗಳೂರಿಗೆ ಆಗಮಿಸಿದ್ದಾರೆ. ಆದರೂ ಕಿತ್ತುಹೋದ ರಸ್ತೆಗೆ ಕನಿಷ್ಠ ತೇಪೆ ಹಚ್ಚುವ ಸೌಜನ್ಯವನ್ನೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಐಎ) ಇಲ್ಲವೇ ಗುತ್ತಿಗೆದಾರರು ಮಾಡದೇ ಇರುವುದು ಇಂದಿನ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ನಿತ್ಯ ಸಂಚಾರಿಗಳು ಆಡಿಕೊಳ್ಳುವಂತಾಗಿದೆ.