ಪರಿಶಿಷ್ಟ ಜಾತಿ ಹಾಸ್ಟೆಲ್‌ನಲ್ಲಿ ಶೌಚಕ್ಕೂ ಸರದಿ ಸಂಕಟ| ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಆದೇಶಿಸಿದ ಸರ್ಕಾರ ಮೂಲಸೌಕರ್ಯಗಳನ್ನೇ ನೀಡಿಲ್ಲ| ಹಾಸ್ಟೆಲ್‌ನಲ್ಲಿರುವ ಎಸ್ಸಿ ವಿದ್ಯಾರ್ಥಿಗಳ ಗೋಳು ಹೇಳತೀರದು| ಮಂಜೂರಾತಿಗಿಂತಲೂ ದುಪ್ಪಟ್ಟು ವಿದ್ಯಾರ್ಥಿಗಳು ದಾಖಲು| ಬಾಡಿಗೆ ಕಟ್ಟಡದಲ್ಲಿರುವ ಸಮಸ್ಯೆಗಳನ್ನು ಕೇಳುವಂತೆಯೇ ಇಲ್ಲ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಸೆ.29): ಅರ್ಜಿ ಹಾಕಿದವರೆಲ್ಲರಿಗೂ ಅವಕಾಶ ನೀಡಲಾಗುತ್ತಿರುವುದರಿಂದ ಎಸ್ಸಿ-ಎಸ್ಟಿ ಹಾಸ್ಟೆಲ್‌ಗಳು ತುಂಬಿ ತುಳುಕುತ್ತಿವೆ. ಹೀಗಾಗಿ ಇಲ್ಲಿನ ಹಾಸ್ಟೆಲ್‌ಗಳ ಸಾಮರ್ಥ್ಯಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಇರುವುದರಿಂದ ಸಹಜವಾಗಿಯೇ ಬರ್ಹಿದೆಸೆಗೂ ಹೋಗುವುದಕ್ಕೆ ಬೆಳಗಿನ ಜಾವವೇ ಎದ್ದು ಕಾಯಬೇಕಾದ ಅನಿವಾರ್ಯತೆ ಇದೆ. ಇಲ್ಲಿ ಓದುವ ವಿದ್ಯಾರ್ಥಿಗಳ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಜಿಲ್ಲೆಯಲ್ಲಿ 47 ಎಸ್‌ಸಿ ಹಾಸ್ಟೆಲ್‌ಗಳು ಇದ್ದು, ಇದರಲ್ಲಿ 37 ಸ್ವಂತ ಕಟ್ಟಡದಲ್ಲಿವೆ. ಉಳಿದ 2 ಬಾಡಿಗೆ ರಹಿತ ಮತ್ತು 8 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಸಮಾಜ ಕಲ್ಯಾಣ ಇಲಾಖೆ ವರದಿಯ ಪ್ರಕಾರವೇ ಸ್ವಂತ ಕಟ್ಟಡದಲ್ಲಿಯೇ 154 ಶೌಚಾಲಯ ಹಾಗೂ 140 ಬಾತ್‌ರೂಮ್ ಹಾಗೂ 71 ಮಲಗುವ ಕೊಠಡಿಗಳು ಬೇಕಾಗುತ್ತವೆ. ಅಂದರೆ ಇಷ್ಟು ಸಮಸ್ಯೆ ಇರುವುದನ್ನು ಅಧಿಕೃತವಾಗಿ ದಾಖಲು ಮಾಡಲಾಗಿದೆ.
ಬಾಡಿಗೆ ಕಟ್ಟಡದಲ್ಲಿರುವ ಸಮಸ್ಯೆಗಳನ್ನು ಕೇಳುವಂತೆಯೇ ಇಲ್ಲ. ಇದರಿಂದ ವಿದ್ಯಾರ್ಥಿಗಳು ಶಾಲಾ- ಕಾಲೇಜು ಸಮಯಕ್ಕೆ ಹೋಗಬೇಕು ಎಂದರೆ ಬೆಳಗಿನ ಜಾವವೇ ಎದ್ದು ಶೌಚದ ಸರದಿಯಲ್ಲಿ ನಿಲ್ಲಬೇಕು. ಆದರೆ, ಇದನ್ನು ಯಾರು ಮುಂದೆಯೂ ವಿದ್ಯಾರ್ಥಿಗಳು ತೋಡಿಕೊಳ್ಳುವಂತೆಯೇ ಇಲ್ಲ.
ಡಬಲ್ ವಿದ್ಯಾರ್ಥಿಗಳು:
ಮಂಜೂರಾತಿ ಪ್ರಕಾರ 3767 ವಿದ್ಯಾರ್ಥಿಗಳು ಎಸ್ಸಿ ಹಾಸ್ಟೆಲ್‌ನಲ್ಲಿ ಇರಬೇಕು. ಆದರೆ, ಅರ್ಜಿ ಹಾಕಿದವರೆಲ್ಲರಿಗೂ ಅವಕಾಶ ನೀಡುವಂತಾಗಬೇಕು ಎನ್ನುವ ಸರ್ಕಾರದ ಆದೇಶದ ಪ್ರಕಾರ ಪ್ರವೇಶ ನೀಡಿದ್ದರಿಂದ ಈಗ 47 ಹಾಸ್ಟೆಲ್‌ಗಳಲ್ಲಿ ಬರೋಬ್ಬರಿ 6,298 ವಿದ್ಯಾರ್ಥಿಗಳು ಇದ್ದಾರೆ. ಅಂದರೆ ನಿಗದಿತ ಪ್ರಮಾಣಕ್ಕಿಂತ 2500 ವಿದ್ಯಾರ್ಥಿಗಳು ಅಧಿಕವಾಗಿದ್ದರೆ ಅಲ್ಲಿ ವಿದ್ಯಾರ್ಥಿಗಳ ನಿತ್ಯ ಕರ್ಮಾದಿಗಳನ್ನು ಪೂರ್ಣಗೊಳಿಸಿಕೊಳ್ಳುವುದಾದರೂ ಹೇಗೆ ಎನ್ನುವುದಕ್ಕೆ ಸರ್ಕಾರವೇ ಉತ್ತರ ನೀಡಬೇಕಾಗಿದೆ.
ಕೊಡಲಿಲ್ಲ ಸೌಲಭ್ಯ:
ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿ ಆದೇಶ ಮಾಡಿತು. ಇದಾದ ಮೇಲೆ ಅಗತ್ಯ ಸೌಕರ್ಯಗಳನ್ನು ನೀಡುವುದಕ್ಕೂ ಕ್ರಮ ವಹಿಸಿತು. ಆದರೆ, ಅದು ಅನುಷ್ಠಾನದಲ್ಲಿ ನಿಧಾನಗತಿಯಾಗಿದ್ದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದರೂ ಅದಕ್ಕೆ ತಕ್ಕಂತೆ ಮೂಲಸೌಕರ್ಯ ನೀಡುವುದಕ್ಕೆ ಬೇಕಾಗುವ ಅನುದಾನವನ್ನು ಸಕಾಲಕ್ಕೆ ಬಿಡುಗಡೆ ಮಾಡುತ್ತಿಲ್ಲವಾದ್ದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ.
ಸಚಿವರೇ ಎಲ್ಲಿದ್ದೀರಿ?
ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ ಅವರೇ ಎಲ್ಲಿದ್ದೀರಿ? ನೀವು ಹಾಸ್ಟೆಲ್‌ನಲ್ಲಿ ರಾತ್ರಿ ವಾಸ್ತವ್ಯ ಮಾಡಿದರೆ ನಿಜ ಸಮಸ್ಯೆ ಏನೆಂದು ಗೊತ್ತಾಗುತ್ತದೆ. ಹೀಗಾಗಿ ಈ ದಿಸೆಯಲ್ಲಿ ಕ್ರಮಕೈಗೊಳ್ಳುವ ಮೂಲಕ ಸಚಿವರು ವಾಸ್ತವ್ಯ ಮಾಡುವರೇ ಎನ್ನುವುದು ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಇರುವ ಹಾಸ್ಟೆಲ್‌ಗಳಲ್ಲಿ ಶೌಚಾಲಯ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ವಿಶೇಷವಾಗಿ ಹಾಸ್ಟೆಲ್‌ನಲ್ಲಿ ಯಾವುದೇ ಸೌಲಭ್ಯ ಕೊರತೆಯಾದರೂ ಪರವಾಗಿಲ್ಲ. ಮೊದಲು ಶೌಚಾಲಯಗಳ ವ್ಯವಸ್ಥೆಯಾಗಬೇಕು. ಇಲ್ಲದಿದ್ದರೆ ವಿದ್ಯಾರ್ಥಿಗಳು ಸರದಿಯಲ್ಲಿ ನಿಂತು ಶೌಚಕ್ಕೆ ವಿಳಂಬ ಮಾಡುವುದರಿಂದ ಆನಾರೋಗ್ಯಕ್ಕೆ ತುತ್ತಾಗುತ್ತಾರೆ ಎನ್ನುವುದು ಪ್ರಜ್ಞಾವಂತ ಆತಂಕವಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ಜಿಲ್ಲಾ ಎಸ್‌ಎಫ್‌ಐ ಸಂಚಾಲಕ ಅಮರೇಶ ಕಡಗದ ಅವರು, ಸಮಾಜ ಕಲ್ಯಾಣ ಇಲಾಖೆ ನಡೆಸುವ ಹಾಸ್ಟೆಲ್‌ಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಅದರಲ್ಲೂ ಶೌಚಾಲಯಗಳ ಕೊರತೆ ಇರುವುದರಿಂದ ಅಲ್ಲಿಯ ವಿದ್ಯಾರ್ಥಿಗಳ ಪಾಡು ಹೇಳತೀರದು ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಳ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಬಿ. ಕಲ್ಲೇಶ ಅವರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗಿದ್ದರಿಂದ ಮೂಲಸೌಲಭ್ಯಗಳ ಕೊರತೆಯಾಗಿದ್ದು, ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದಕ್ಕೂ ಸರ್ಕಾರ ಮಂಜೂರಾತಿ ನೀಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.