ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಜು.4ರಂದು ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆದಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಹಮ್ಮಿಕೊಂಡ ಹೋರಾಟ 50 ದಿನ ಪೋರೈಸಿದರೂ ಜನಪ್ರತಿನಿಧಿಗಳು ಮಾತ್ರ ಸಮಸ್ಯೆಗೆ ಸ್ಪಂದಿಸಿಲ್ಲ.
ಶಿವಮೊಗ್ಗ(ಆ.24): ಭದ್ರಾವತಿ ನಗರದ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಜು.4ರಂದು ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆದಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಮುಂಭಾಗ ಹಮ್ಮಿಕೊಂಡಿರುವ ಹೋರಾಟ ಶುಕ್ರವಾರ 50ನೇ ದಿನ ಪೂರೈಸಿದೆ.
ಆದರೆ ಇದುವರೆಗೂ ಹೋರಾಟದ ಸ್ಥಳಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಭೇಟಿ ನೀಡಿಲ್ಲ. ಕಾರ್ಮಿಕರು ಸಹ ತಮ್ಮ ಹೋರಾಟ ಮೊಟಕುಗೊಳಿಸಿಲ್ಲ. ನಿರಂತರ ಮಳೆಯ ನಡುವೆಯೂ ಹೋರಾಟ ಮುಂದುವರಿಸಿದ್ದಾರೆ. ಈಗಾಗಲೇ ಹಂತ ಹಂತವಾಗಿ ವಿವಿಧ ರೀತಿಯ ಹೋರಾಟಗಳನ್ನು ನಡೆಸಿದ್ದಾರೆ.
ಮನವಿಗೂ ಸ್ಪಂದನೆ ಇಲ್ಲ:
ಈ ನಡುವೆ ನಿರಂತರ ಮಳೆಯಿಂದಾಗಿ ಪ್ರವಾಹಕ್ಕೆ ಒಳಗಾಗಿದ್ದ ನೆರೆ ಸಂತ್ರಸ್ತರ ಸಮಸ್ಯೆ ಆಲಿಸಲು ನಗರಕ್ಕೆ ಆಗಮಿಸಿದ್ದ ಸಂಸದ ಬಿ.ವೈ. ರಾಘವೇಂದ್ರರನ್ನು ಕಾರ್ಮಿಕ ಸಂಘಟನೆಗಳ ಮುಖಂಡರು ಭೇಟಿ ಮಾಡಿ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸಿಕೊಂಡು ಅಭಿವೃದ್ಧಿ ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವಂತೆ ಪುನಃ ಮನವಿ ಮಾಡಿದ್ದಾರೆ. ಆದರೂ ಪ್ರಯೋಜನವಾಗಿಲ್ಲ.
ಹೋರಾಟದ ಕೂಗು:
ನಗರದ ನ್ಯೂಕಾಲೋನಿ ಶ್ರೀ ವಿನಾಯಕ ಸೇವಾ ಸಮಿತಿ 9ನೇ ವರ್ಷದ ವಿನಾಯಕ ಮಹೋತ್ಸವದ ಅಂಗವಾಗಿ ಮುದ್ರಿಸಿರುವ ಕರ ಪತ್ರ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ‘ಮಿಸ್ಟರ್ ಸಿ.ಎಂ, ಮಿಸ್ಟರ್ ಎಂ.ಪಿ. ಸೇವ್ ವಿಐಎಸ್‌ಎಲ್ ಸೆಕ್ಯೂರ್ ಭದ್ರಾವತಿ’ ಎಂಬುದನ್ನು ಮುದ್ರಿಸಲಾಗಿದೆ. ಜೊತೆಗೆ ವಿಐಎಸ್‌ಎಲ್ ಕಾರ್ಖಾನೆ ಮತ್ತು ಈ ಕಾರ್ಖಾನೆಯ ನಿರ್ಮಾತೃ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳನ್ನು ಮುದ್ರಿಸಲಾಗಿದೆ. ಸಾಮಾನ್ಯ ಕರಪತ್ರದಂತೆ ಕಂಡು ಬಂದರೂ ಹೋರಾಟಕ್ಕೂ ನಮ್ಮದು ಬೆಂಬಲವಿದೆ ಎಂಬುದನ್ನು ನಾಗರಿಕರು ತೋರಿಸಿದ್ದಾರೆ.
ಶಿವಮೊಗ್ಗ: 'ಸಚಿವ ಸ್ಥಾನ ನೀಡದಿರುವುದು ತೀವ್ರ ನೋವಾಗಿದೆ'
ಉಕ್ಕು ಸಚಿವರಿಗೆ ಮನವಿ:
ವಿಐಎಸ್‌ಎಲ್ ಕಾರ್ಖಾನೆ ಬಂಡವಾಳ ಹಿಂಪಡೆಯುವಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗಿಕರಣ ಕಾರ್ಖಾನೆಗಳ ಪಟ್ಟಿಯಿಂದ ಕೈ ಬಿಡುವಂತೆ ಒತ್ತಾಯಿಸಿ ಭಾರತೀಯ ಮಜ್ದೂರ್ ಸಂಘ ಜಿಲ್ಲಾ ಶಾಖೆ ಕೇಂದ್ರ ಉಕ್ಕು ಸಚಿವರಿಗೆ ಮನವಿ ಸಲ್ಲಿಸಿದೆ. ಕಾರ್ಖಾನೆಯ ಉತ್ಪನ್ನಗಳನ್ನು ದೇಶದ ರಕ್ಷಣಾ ಇಲಾಖೆ, ರೈಲ್ವೆ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ದೇಶದ ಮಾರುಕಟ್ಟೆಯಲ್ಲಿ ಬಹುಬೇಡಿಕೆಯ ಉತ್ಪನ್ನವಾಗಿವೆ. ಪ್ರಸ್ತುತ ಕಾರ್ಖಾನೆ ನಷ್ಟಕ್ಕೆ ಕೇಂದ್ರ ಸರ್ಕಾರ ಮತ್ತು ಉಕ್ಕು ಪ್ರಾಧಿಕಾರ ಕಾರಣ ಎಂದು ಮುಖಂಡರು ಗುಡುಗಿದ್ದಾರೆ.
ಕಾರ್ಮಿಕರನ್ನು ರಕ್ಷಿಸಿ:
ರಾಜ್ಯ ಸರ್ಕಾರದಿಂದ ಒಂದು ರು. ಟೋಕನ್ ಬೆಲೆಗೆ ಕಾರ್ಖಾನೆಯನ್ನು ಪಡೆದು ಯಾವುದೇ ಬಂಡವಾಳ ತೊಡಗಿಸದೆ ಇರುವುದು ನಷ್ಟಕ್ಕೆ ಮೂಲ ಕಾರಣವಾಗಿದೆ. ಈ ಕಾರ್ಖಾನೆಯಿಂದ ಲಾಭವನ್ನು ನಿರೀಕ್ಷಿಸುವುದು ನ್ಯಾಯ ಸಮ್ಮತವಲ್ಲ. ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಲು ಎಲ್ಲಾ ರೀತಿ ಅವಕಾಶವಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಕ್ಷಣಾ, ರೈಲ್ವೆ, ಹಣಕಾಸು, ಕಬ್ಬಿಣ ಮತ್ತು ಉಕ್ಕು ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಕಾರ್ಮಿಕ ಇಲಾಖೆಗಳ ಸಚಿವರನ್ನೊಳಗೊಂಡ ಸಮಿತಿ ರಚನೆ ಮಾಡಿ ಪುನಶ್ಚೇತಗೊಳಿಸಲು ಮುಂದಾಗುವಂತೆ ಮುಖಂಡರು ಒತ್ತಾಯಿಸಿದ್ದಾರೆ. ತಕ್ಷಣ ಕಾರ್ಖಾನೆಗೆ ಅಗತ್ಯವಿರುವ ಬಂಡವಾಳ ತೊಡಗಿಸಿ ಕಾರ್ಮಿಕರು ಹಾಗೂ ಕುಟುಂಬ ವರ್ಗದವರ ರಕ್ಷಣೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಕಾರ್ಯದರ್ಶಿ ಎಚ್.ಎಲ್ ವಿಶ್ವನಾಥ್ ಹೇಳಿದ್ದಾರೆ.
ಶಿವಮೊಗ್ಗ: ಭಾರೀ ಮಳೆ, ಮನೆಯೊಳಗೆ ನುಗ್ಗಿತು ಕೊಳಚೆ ನೀರು