Belagavi; ಪೆಟ್ಟಿಗೆಯಲ್ಲಿ ಸೌದತ್ತಿ ಯಲ್ಲಮ್ಮನ 42ಕೆಜಿ ಚಿನ್ನ, ಮಹತ್ವದ ಯೋಜನೆ ರೂಪಿಸಿದ ಸಿಎಂ ಡಿಕೆ ಶಿವಕುಮಾರ್

Published : Oct 27, 2026, 12:26 PM IST
Cm DK Shivakumar Visit Renuka Yellamma Temple

ಸಾರಾಂಶ

ದೇವಸ್ಥಾನಗಳಲ್ಲಿ ಪೆಟ್ಟಿಗೆಯಲ್ಲಿರುವ ಚಿನ್ನವನ್ನು ಕಳ್ಳತನದಿಂದ ರಕ್ಷಿಸಲು ದೇವರ ಅಲಂಕಾರಕ್ಕೇ ಬಳಸಲು ಡಿಕೆ ಶಿವಕುಮಾರ್ ನಿರ್ಧರಿಸಿದ್ದಾರೆ. ಸೌದತ್ತಿ ಯಲ್ಲಮ್ಮ ದೇವಸ್ಥಾನದ 42 ಕೆಜಿ ಚಿನ್ನದ ಕುರಿತು ಮಹತ್ವದ ಹೇಳಿಕೆ ನೀಡಿದ ಅವರು, ₹215 ಕೋಟಿ ವೆಚ್ಚದಲ್ಲಿ ದೇವಾಲಯ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ.

ದೇವಸ್ಥಾನಗಳ ಚಿನ್ನಾಭರಣಗಳನ್ನು ಕೇವಲ ಪೆಟ್ಟಿಗೆಗಳಲ್ಲಿ ಬೀಗ ಹಾಕಿ ಇಡುವುದರಿಂದ ಕಳ್ಳತನದ ಆತಂಕವಿರುತ್ತದೆ. ಅದಕ್ಕೆ ಆಸ್ಪದ ನೀಡದೆ, ಆಯಾ ದೇವಸ್ಥಾನದ ಚಿನ್ನವನ್ನು ದೇವರ ಅಲಂಕಾರಕ್ಕೇ ಬಳಸಲು ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಯೋಜನೆ ರೂಪಿಸುತ್ತಿದ್ದಾರೆ. ಅಲ್ಲದೇ ಸೌದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಸದ್ಯ ಪೆಟ್ಟಿಗೆಯಲ್ಲಿ ಇಡಲಾಗಿರುವ ಬರೋಬ್ಬರಿ 42 ಕೆಜಿ ಚಿನ್ನವನ್ನು ದೇವಿಯ ಆಭರಣ ಹಾಗೂ ಅಲಂಕಾರಕ್ಕೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಅಲ್ಲದೇ ಅದಕ್ಕೊಂದು ಹೊಸ ಯೋಜನೆ ರೂಪಿಸುವುದಾಗಿ ಸಿಎಂ ಡಿಕೆ ಶಿವಕುಮಾರ್‍‌ ಭರವಸೆ ನೀಡಿದ್ದಾರೆ!

ಮುಜರಾಯಿ ಸಚಿವರಿಗೆ ಟಾಸ್ಕ್!

ಈ 42 ಕೆಜಿ ಚಿನ್ನವನ್ನು ದೇವಿಯ ಅಲಂಕಾರಕ್ಕೆ ಬಳಸಿ, ಭಕ್ತರಿಗೆ ದಿವ್ಯ ದರ್ಶನ ಸಿಗುವಂತೆ ಮಾಡಲು ಮುಜರಾಯಿ ಸಚಿವ ಕೆ.ಎಸ್. ಬಸವಂತಪ್ಪ ಅವರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಅಲ್ಲದೇ ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿರುವ ಚಿನ್ನ ಮತ್ತು ಆಭರಣಗಳಿಗೆ ಅತ್ಯಂತ ನಿಖರವಾದ ಮತ್ತು ಕಟ್ಟುನಿಟ್ಟಾದ ಲೆಕ್ಕಪತ್ರ ನಿರ್ವಹಣೆ ಕಡ್ಡಾಯಗೊಳಿಸಲಾಗುತ್ತಿದೆ. ದೇವಸ್ಥಾನಕ್ಕೆ ಬರುವ ಕೋಟ್ಯಂತರ ಭಕ್ತರು ದರ್ಶನ ಪಡೆಯುವಾಗ ಒಂದು ಶ್ರೇಷ್ಠ ಹಾಗೂ ಅದ್ಭುತ ಅನುಭವದೊಂದಿಗೆ ಮರಳಬೇಕು ಎನ್ನುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್‍‌ ಹೇಳಿದ್ದಾರೆ.

₹215 ಕೋಟಿ ವೆಚ್ಚದ ಮಹಾ ಯೋಜನೆ!

ಸೌದತ್ತಿ ಯಲ್ಲಮ್ಮ ಬೆಟ್ಟದ ಸಮಗ್ರ ಚಿತ್ರಣವನ್ನು ಬದಲಾಯಿಸಲು ಮತ್ತು ಭಕ್ತರಿಗೆ ಹೈಟೆಕ್ ಸೌಲಭ್ಯಗಳನ್ನು ಕಲ್ಪಿಸಲು ₹215 ಕೋಟಿ ವೆಚ್ಚದ ಬೃಹತ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಸೌದತ್ತಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿ, ದೈನಂದಿನ ನಿರ್ವಹಣೆ ಹಾಗೂ ಭಕ್ತರ ಸೌಕರ್ಯಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮೇಲ್ವಿಚಾರಣೆ ಮಾಡಲು ಸರ್ಕಾರದಿಂದ 'ವಿಶೇಷ ಅಭಿವೃದ್ಧಿ ಪ್ರಾಧಿಕಾರ'ವನ್ನು ರಚಿಸಲಾಗಿದೆ ಎನ್ನುವುದರ ಸುಳಿವು ಹೊರಬಿದ್ದಿದೆ.

ಸಾಂಸ್ಕೃತಿಕ ಪರಂಪರೆಗೆ ರಕ್ಷಣೆ!

ದೇವಸ್ಥಾನದ ಧಾರ್ಮಿಕ ಮಹತ್ವ, ಸಾಂಸ್ಕೃತಿಕ ಪರಂಪರೆ ಮತ್ತು ಪುರಾತನ ಸಂಪ್ರದಾಯಗಳಿಗೆ ಯಾವುದೇ ಧಕ್ಕೆ ಬಾರದಂತೆ ಅತ್ಯಂತ ಜಾಗರೂಕತೆಯಿಂದ ಈ ಆಧುನಿಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಅದರೊಂದಿಗೆ ಕರ್ನಾಟಕ ಮಾತ್ರವಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ ಹಾಗೂ ಗೋವಾದಿಂದ ಬರುವ ಕೋಟ್ಯಂತರ ಭಕ್ತರಿಗೆ ಕುಡಿಯುವ ನೀರು, ವಸತಿ, ಶೌಚಾಲಯ ಮತ್ತು ಸುಸಜ್ಜಿತ ರಸ್ತೆಗಳ ತಡೆರಹಿತ ಸೌಲಭ್ಯವನ್ನು ಈ ಮಾಸ್ಟರ್ ಪ್ಲಾನ್ ಒಳಗೊಂಡಿದೆ. ಅಲ್ಲದೇ ದೇವಾಲಯದ ಆವರಣದ ಸೌಂದರ್ಯೀಕರಣ, ಭಕ್ತರ ತಂಗುದಾಣ ಹಾಗೂ ಕ್ಯೂ ಲೈನ್‌ಗಳ ವ್ಯವಸ್ಥೆಯನ್ನು ಸಂಪೂರ್ಣ ಹೈಟೆಕ್ ದರ್ಜೆಗೆ ಏರಿಸುವ ಮೂಲಕ ಇಡೀ ಧಾರ್ಮಿಕ ಕ್ಷೇತ್ರಕ್ಕೆ ಹೊಸ ಕಳೆ ನೀಡಲು ಯೋಜನೆ ರೂಪಿಸಲಾಗಿದೆ ಎನ್ನುವುದನ್ನು ಸರ್ಕಾರ ತಿಳಿಸಿದೆ.

PREV
Read more Articles on
click me!

Recommended Stories

ಕೊಪ್ಪಳ: ಮರಳು ದಂಧೆಗಾಗಿ ತೆರೆದ ಬ್ಯಾರೇಜ್ ಗೇಟ್‌ಗಳು, 40 ಗ್ರಾಮಗಳ ಆಸರೆ ಹಿರೇಹಳ್ಳ ಖಾಲಿ, ಕುಡಿಯುವ ನೀರಿಗೆ ಕುತ್ತು!
ಬಂಗಾರಪ್ಪ ರಾಜ್ಯ ಕಂಡ ಅಪರೂಪದ ಜನನಾಯಕ: ಸಭಾಪತಿ ಸಲೀಂ ಅಹಮದ್