
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಡಿ ಗ್ಯಾಂಗ್‌ನಿಂದ ನಡೆದಿದೆ ಎನ್ನಲಾದ ರೇಣುಕಾಸ್ವಾಮಿ ಪ್ರಕರಣದ ನ್ಯಾಯಾಂಗ ವಿಚಾರಣೆ ನಗರದ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವ ಮತ್ತು ಪ್ರಕರಣದ ಮಾಫಿ ಸಾಕ್ಷಿಯಾಗಿರುವ ಪ್ರದೋಷ್ ಸಲ್ಲಿಸಿರುವ ಮಧ್ಯಂತರ ಜಾಮೀನು ಅರ್ಜಿಗೆ ನಟ ದರ್ಶನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.
ತಮ್ಮ ತಂದೆಯವರ ಪ್ರಥಮ ವರ್ಷದ ತಿಥಿ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರದೋಷ್ ಪರ ವಕೀಲರು 3 ವಾರಗಳ ಕಾಲ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ 59ನೇ ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಅಕ್ಟೋಬರ್ 27 ಅಂದರೆ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.
ಆದರೆ, ಈ ಅರ್ಜಿಗೆ ನಟ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ದರ್ಶನ್ ಪರ ವಕೀಲರ ಆಕ್ಷೇಪಣಾ ಅರ್ಜಿಯನ್ನು ಸ್ವೀಕರಿಸಿದ ಕೋರ್ಟ್, ಪ್ರಕರಣದಲ್ಲಿ ಪ್ರದೋಷ್ ಮಧ್ಯಂತರ ಜಾಮೀನು ಕೋರಿಕೆಯ ವಿರುದ್ಧ ವಾದ ಮಂಡಿಸಲು ದರ್ಶನ್ ಪರ ವಕೀಲರಿಗೆ ಅನುಮತಿ ನೀಡಿದೆ.
ಪ್ರದೋಷ್ ಜಾಮೀನು ಅರ್ಜಿಗೆ ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪಿಸಿ, ಪ್ರದೋಷ್ ಈಗ ಆರೋಪಿಯಾಗಿ ಉಳಿದಿಲ್ಲ, ಆತ ಈಗ ಸಾಕ್ಷಿ. ಸಿಆರ್‌ಪಿಸಿ 439 ಅಡಿ ಜಾಮೀನು ಆರೋಪಿಗೆ ಮಾತ್ರ ಅನ್ವಯ ಆಗುತ್ತೆ. ಮಾಫಿ ಸಾಕ್ಷಿಯ ಮುಖ್ಯ ಸಾಕ್ಷಿ ಹೇಳಿಕೆ ದಾಖಲಾಗಿದ್ದು, ಪಾಟೀ ಸವಾಲ್ ಬಾಕಿ ಇದೆ. ಈ ಮಧ್ಯೆ ಮಧ್ಯಂತರ ಜಾಮೀನು ಕೋರಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಟ್ರಯಲ್ ಮುಗಿಯುವವರೆಗೂ ಜಾಮೀನು ಅವಕಾಶ ಇಲ್ಲ ಅನ್ನೋದು ಮಾಫಿ ಸಾಕ್ಷಿಗೆ ಮನವರಿಕೆ ಮಾಡಲಾಗಿದೆ. ಕಾಮಾಕ್ಷಿಪಾಳ್ಯ ಪೊಲೀಸರು ಮಾಫಿ ಸಾಕ್ಷಿಗೆ ಪ್ರಭಾವ ಬೀರುವ ಯತ್ನ ಮಾಡಲಾಗಿತ್ತು. ಆ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸರು ಎಸ್ಕಾರ್ಟ್ ಮಾಡದಂತೆ ಕೋರ್ಟ್ ಆದೇಶಿಸಿದೆ. ಪ್ರದೋಷ್ ಜಾಮೀನು ನೀಡಿದರೆ ಆತನಿಗೆ ಪ್ರಭಾವ ಭೀರುವ ಸಾಧ್ಯತೆ ಇದೆ. ಒಂದು ದಿನ ಅಥವಾ ಒಂದು ಗಂಟೆಗೆ ಹೊರಗೆ ಹೋದರೂ ಪ್ರಭಾವ ಭೀರುವ ಸಾಧ್ಯತೆ ಇದೆ. ಹೀಗಾಗಿ ಮಾಫಿ ಸಾಕ್ಷಿಯನ್ನ ಜೈಲಿನಿಂದ ಹೊರಗೆ ಹೋಗುವುದಕ್ಕೆ ಅವಕಾಶ ನೀಡಬಾರದು ಎಂಬ ವಾದ ಮಂಡಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿಯಾಗಿದ್ದಾನೆ. ದರ್ಶನ್ ಅತ್ಯಾಪ್ತನೇ ಪ್ರಕರಣದಲ್ಲಿ ಡಿ ಗ್ಯಾಂಗ್ ಗೆ ತಿರುಗಿಬಿದ್ದಿರುವುದು ಕೂಡ ಈ ಪ್ರಕರಣದ ಪ್ರಮುಖ ಕುತೂಹಲ. ಈ ಹಿಂದೆ ಮಾಫಿ ಸಾಕ್ಷಿಯಾಗಿ ಪರಿಗಣನೆಗೆ ತೆಗೆದುಕೊಳ್ಳಬಾರದೆಂದು ಹೈಕೋರ್ಟ್ ತನಕ ಹೋಗಲಾಗಿತ್ತು. ದರ್ಶನ್ ಪರ ವಕೀಲರ ಕೊನೆಯ ಹಂತದ ಪ್ರಯತ್ನ ಕೂಡ ವಿಫಲವಾಗಿತ್ತು.
ಇನ್ನೊಂದೆಡೆ, ಪ್ರಕರಣದ ಸಾಕ್ಷಿಗಳ ವಿಚಾರಣೆಯೂ ನ್ಯಾಯಾಲಯದಲ್ಲಿ ಚುರುಕಿನಿಂದ ನಡೆಯುತ್ತಿದ್ದು, ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಮುಖ ಪ್ರತ್ಯಕ್ಷ ಸಾಕ್ಷಿ ಪುನೀತ್ ಕೋರ್ಟ್‌ಗೆ ಗೈರುಹಾಜರಾಗಿದ್ದರು.
ಈ ಹಿನ್ನೆಲೆಯಲ್ಲಿ ಸಾಕ್ಷಿ ವಿಚಾರಣೆಯನ್ನು ನಾಳೆಗೆ ಮುಂದೂಡುವಂತೆ ವಿಶೇಷ ಸರ್ಕಾರಿ ಅಭಿಯೋಜಕರು (SPP) ನ್ಯಾಯಾಲಯಕ್ಕೆ ಮನವಿ ಮಾಡಿದರು. ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯವು ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದು, ಪ್ರತ್ಯಕ್ಷ ಸಾಕ್ಷಿಗಳಾದ ಪುನೀತ್ ಮತ್ತು ಕಿರಣ್ ಅವರಿಗೆ ನಾಳೆ ಕಡ್ಡಾಯವಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ.