'ಹಣದ ಆಮಿಷ, ವೈಷಮ್ಯ ಮೂಡಿಸುವುದೇ ಬಿಜೆಪಿ ಸಂಸ್ಕೃತಿ'

By Kannadaprabha News  |  First Published Dec 26, 2020, 2:18 PM IST

ರಾತ್ರಿ ಕರ್ಫ್ಯೂ ಬಗ್ಗೆ ಸರ್ಕಾರದ ನಿಲುವು ಅಸ್ಪಷ್ಟ| ರಾತ್ರಿ ಕರ್ಫ್ಯೂ ಹೇರಿಕೆ ಮತ್ತು ಹಿಂಪಡೆಯುವಿಕೆ ರಾಜ್ಯ ಸರ್ಕಾರದ ಅಸ್ಪಷ್ಟ ನಿಲುವುಗಳ ಬಗ್ಗೆ ಸಾಕ್ಷಿ| ಯಾವಾಗ ಕರ್ಫ್ಯೂ ಜಾರಿಗೆ ತರಬೇಕು ಎಂಬುದೇ ಅವರಿಗೆ ತಿಳಿದಿಲ್ಲ: ಸಂತೋಷ ಲಾಡ್‌| 


ಶಿರಸಿ(ಡಿ.26): ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡುವುದು ಮತ್ತು ಜನತೆಯ ನಡುವೆ ವೈಷಮ್ಯ ಮೂಡಿಸುವುದು ಬಿಜೆಪಿಯ ಸಂಸ್ಕೃತಿಯಾಗಿ ಬದಲಾಗಿದೆ. ಇಂತಹ ಕೃತ್ಯಗಳನ್ನು ಕಾಂಗ್ರೆಸ್‌ ಬೆಂಬಲಿಸುವುದಿಲ್ಲ ಮತ್ತು ಇಂತಹ ಕೃತ್ಯಕ್ಕೆ ಇಳಿಯುವುದೂ ಇಲ್ಲ ಎಂದು ಮಾಜಿ ಸಚಿವ, ಕಾಂಗ್ರೆಸ್‌ ಪ್ರಮುಖ ಸಂತೋಷ ಲಾಡ್‌ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳನ್ನು ಜನತೆ ಗಮನಿಸುತ್ತಿದ್ದಾರೆ. ರಾತ್ರಿ ಕರ್ಫ್ಯೂ ಹೇರಿಕೆ ಮತ್ತು ಹಿಂಪಡೆಯುವಿಕೆ ರಾಜ್ಯ ಸರ್ಕಾರದ ಅಸ್ಪಷ್ಟ ನಿಲುವುಗಳ ಬಗ್ಗೆ ಸಾಕ್ಷಿಯಾಗಿದೆ. ಯಾವಾಗ ಕರ್ಫ್ಯೂ ಜಾರಿಗೆ ತರಬೇಕು ಎಂಬುದೇ ಅವರಿಗೆ ತಿಳಿದಿಲ್ಲ. ಏಕೆ ಈ ರೀತಿ ಗೊಂದಲ ಮಾಡಿಕೊಳ್ಳುತ್ತಿದ್ದಾರೆ ಎಂಬುದೂ ಅರ್ಥವಾಗದ ಸಂಗತಿ ಎಂದರು.

Latest Videos

undefined

ಉತ್ತರ ಕನ್ನಡ ಜಿಲ್ಲೆ ಮತ್ತು ಸುತ್ತಲಿನ ಪ್ರದೇಶಗಳ 22 ಗ್ರಾಮ ಪಂಚಾಯಿತಿಯಲ್ಲಿ ಕಳೆದ ಕೆಲವು ದಿನಗಳಿಂದ ಓಡಾಡಿದ್ದೇನೆ. ಎಲ್ಲೆಡೆ ಜನತೆ ನಮ್ಮನ್ನು ಪ್ರೀತಿ-ವಿಶ್ವಾಸದಿಂದ ಕಂಡಿದ್ದಾರೆ. ನಾನು ಸಂಚರಿಸಿದ ಪ್ರದೇಶಗಳ ಅಧ್ಯಯನ ಮಾಡಿದಾಗ ಶೇ. 70ರಷ್ಟು ಗೆಲ್ಲುವ ಭರವಸೆ ಇದೆ ಎಂದರು.

'ಬಿಜೆಪಿ ಸರ್ಕಾ​ರ​ದಲ್ಲಿ ಅಭಿ​ವೃದ್ಧಿ ಕಾರ್ಯ ಕುಂಠಿ​ತ'

ಯಲ್ಲಾಪುರ ವಿಧಾನಸಭೆ ಚುನಾವಣೆ ಅಸಹಜವಾಗಿತ್ತು. ಶಿವರಾಮ ಹೆಬ್ಬಾರ್‌ ಅವರನ್ನು ಗೆಲ್ಲಿಸುವ ಸಲುವಾಗಿ ಸಂಪೂರ್ಣ ರಾಜ್ಯ ಸರ್ಕಾರವೇ ಯಲ್ಲಾಪುರ-ಮುಂಡಗೋಡಿಗೆ ಬಂದಿತ್ತು. ಈ ಕ್ಷೇತ್ರದಲ್ಲಿ 55 ಸಾವಿರ ಮತಗಳು ಕಾಂಗ್ರೆಸ್‌ ಪರವಾಗಿದ್ದವು. ಆದರೆ, ನಾವು ಹೆಬ್ಬಾರ ಬದಲು ಸರ್ಕಾರದ ವಿರುದ್ಧ ಹೋರಾಟ ಮಾಡಿದಂತಾಗಿದೆ. ಬಿಜೆಪಿ 25 ಕೋಟಿ ಖರ್ಚು ಮಾಡಿದೆ. ಶಿವರಾಮ ಹೆಬ್ಬಾರ್‌ ಕಾಂಗ್ರೆಸ್‌ನಲ್ಲಿ ಬಹುಕಾಲ ಇದ್ದಿದ್ದರಿಂದ ಅನೇಕ ಕಾರ್ಯಕರ್ತರೂ ಅವರೊಂದಿಗೆ ಬಿಜೆಪಿಗೆ ತೆರಳಿದ್ದರು. ಈಗ ಪುನಃ ಅವರನ್ನು ಪಕ್ಷಕ್ಕೆ ಕರೆ ತರಲಾಗಿದ್ದು, ಇದರ ಫಲಿತಾಂಶ ಗ್ರಾಪಂ ಚುನಾವಣೆಯಲ್ಲಿ ವ್ಯಕ್ತವಾಗಲಿದೆ ಎಂದರು.

ಪ್ರಶ್ನೆಗೆ ಉತ್ತರಿಸಿದ ಸಂತೋಷ ಲಾಡ್‌, ಸಮ್ಮಿಶ್ರ ಸರ್ಕಾರ ಬೀಳಲು ಸಿದ್ದರಾಮಯ್ಯ ಕಾರಣ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅದು ಹೇಗೆ ಎಂದು ಕುಮಾರಸ್ವಾಮಿಯವರೇ ಉತ್ತರಿಸಬೇಕು ಎಂದರು. ಕಳೆದ ಅವಧಿಯಲ್ಲಿ ನನಗೆ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಹೀಗಾಗಿ, ಆತ್ಮಾವಲೋಕನ ಮಾಡಿಕೊಳ್ಳುವ ಸಲುವಾಗಿ ನಾನೇ ಸ್ವಲ್ಪ ದೂರ ಇದ್ದೇನೆಯೇ ಹೊರತೂ ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡುವ ಯಾವುದೇ ಯತ್ನ ನಡೆದಿಲ್ಲ. ರಾಮಕೃಷ್ಣ ಹೆಗಡೆ ಅವರ ಕಾಲದಿಂದಲೂ ರಾಜಕೀಯದಲ್ಲಿರುವ ನನಗೆ ಅನುಭವವೂ ಜಾಸ್ತಿ ಇದೆ ಎಂದರು.

ಕೇಂದ್ರದಲ್ಲಿ ಮನಮೋಹನ ಸಿಂಗ್‌ ಅವರ 10 ವರ್ಷಗಳ ಆಡಳಿತ ಮತ್ತು ನರೇಂದ್ರ ಮೋದಿ ಅವರ 6 ವರ್ಷಗಳ ಅವಧಿ ಹೋಲಿಕೆ ಮಾಡಿದರೆ ಬಿಜೆಪಿ ಪ್ರಗತಿಯಲ್ಲಿ ಹಿಂದಿದೆ. ಪ್ರಚಾರಕ್ಕೆ ಮಾತ್ರ ಅವರು ಮುಂಚೂಣಿಯಲ್ಲಿದ್ದಾರೆ ಎಂದರು.
ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಜಿಪಂ ಸದಸ್ಯ ಬಸವರಾಜ ದೊಡ್ಮನಿ, ಪ್ರಮುಖರಾದ ಜ್ಯೋತಿ ಗೌಡ, ಜಗದೀಶ ಗೌಡ, ಸಿ.ಎಫ್‌. ನಾಯ್ಕ, ಶ್ರೀನಿವಾಸ ಗಡಳ್ಳಿ, ದೀಪಕ ದೊಡ್ಡೂರು ಇತರರಿದ್ದರು.
 

click me!