ಮದ್ಯ ಮಾರಾಟ ಅನುಮತಿ: ಸಾಣೆಹಳ್ಳಿ ಮಠದ ಶ್ರೀ ಅಸಮಾಧಾನ

By Suvarna NewsFirst Published May 2, 2020, 2:48 PM IST
Highlights

ಮದ್ಯ ಮಾರಾಟ ಅನುಮತಿ ಕುರಿತಂತೆ ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಪ್ರತಿಕ್ರಿಯಿಸಿದ್ದಾರೆ. ಜನರ ಆರೋಗ್ಯಕ್ಕಿಂತ ಆದಾಯವೇ ಮುಖ್ಯವೆಂದು ಭಾವಿಸುವ ನೇತಾರರಿಂದ ಖಂಡಿತ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಚಿಕ್ಕಮಗಳೂರು(ಮೇ.02): ಕೇಂದ್ರ ಸರ್ಕಾರ ಮದ್ಯ ಪಾನಕ್ಕೆ ಅನುಮತಿ ನೀಡಿರುವುದನ್ನು ತಿಳಿದು ನಿಜಕ್ಕೂ ನಮಗೆ ಆಘಾತವಾಗಿದೆ. ಜನರ ಆರೋಗ್ಯಕ್ಕಿಂತ ಆದಾಯವೇ ಮುಖ್ಯವೆಂದು ಭಾವಿಸುವ ನೇತಾರರಿಂದ ಖಂಡಿತ ದೇಶದ ಪ್ರಗತಿ ಸಾಧ್ಯವಿಲ್ಲ ಎಂದು ಸಾಣೆಹಳ್ಳಿ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ತಿಳಿಸಿದ್ದಾರೆ.

ಮದ್ಯ ಮಾರಾಟ ಅನುಮತಿ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಕಾರಣದಿಂದ ಮದ್ಯಪಾನ ನಿಷೇಧಿಸಿದ್ದರಿಂದ ಬಹುತೇಕ ಕುಡುಕರು ಆ ದುಶ್ಚಟದಿಂದ ದೂರವಾಗಲು ನಿರ್ಧರಿಸಿದ್ದರು. ಸರ್ಕಾರದ ತೀರ್ಮಾನ ನಿದ್ರೆ ಬಂದವರಿಗೆ ನಿದ್ರೆ ಮಾತ್ರೆ ಕೊಟ್ಟಂತಾಗುವುದು ಎಂದಿದ್ದಾರೆ.

ಬಡವರಿಗೆ ಕುಡಿಸಿ ಆ ಹಣದಿಂದಲೇ ರಾಜ್ಯಭಾರ ಮಾಡಬೇಕೇ

ಕುಡಿದವರು ಸಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ? ಇದು ಮತ್ತೇನೇನು ಅನಾಹುತಕ್ಕೆ ಕಾರಣವಾಗುವುದೋ? ಕುಡಿತದಿಂದ ಹಣ, ಆರೋಗ್ಯ, ನೆಮ್ಮದಿ ನೆಲಕಚ್ಚುವುದಲ್ಲದೆ ಕಳವು, ಸುಲಿಗೆ, ಅಪಘಾತ ಮತ್ತಿತರ ಅನಾಹುತಗಳು ಸಾಲು ಸಾಲಾಗಿ ನಡೆಯಬೇಕೆ? ಬಡವರಿಗೆ ಕುಡಿಸಿ ಆ ಹಣದಿಂದಲೇ ರಾಜ್ಯಭಾರ ಮಾಡಬೇಕೇ? ಎಂದು ಪ್ರಶ್ನಿಸಿದ್ದಾರೆ.

ಲಾಕ್‌ಡೌನ್ ವಿಸ್ತರಣೆ: ಮದ್ಯ ಪ್ರಿಯರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

ಕುಡಿತ ಬಿಟ್ಟಿರುವುದರಿಂದ ಆಗಿರುವ ಅನುಕೂಲತೆ, ಅನಾನುಕೂಲಗಳನ್ನು ಸರ್ವೆ ಮಾಡಿಸಿದ್ದರೆ ಖಂಡಿತ ಕೇಂದ್ರ ಸರ್ಕಾರ ಈ ನಿಲವನ್ನು ತೆಗೆದುಕೊಳ್ಳುತ್ತಿರಲಿಲ್ಲ. ಸರ್ಕಾರದ ಈ ನಿಲವನ್ನು ನಾವು ಉಗ್ರವಾಗಿ ಸಾರ್ವಜನಿಕರ ಆರೋಗ್ಯ, ಆದಾಯ, ನೆಮ್ಮದಿಯ ಹಿನ್ನೆಲೆಯಲ್ಲಿ ಖಂಡಿಸುತ್ತೇವೆ. ಈ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಇನ್ನೂ ಸ್ವಾತಂತ್ಯವಿದೆ ಎಂದಿದ್ದಾರೆ.

ಮದ್ಯ ಮಾರಾಟಕ್ಕೆ ಅನುಮತಿ: ಮತ್ತೊಂದೆಡೆ ಬ್ಯಾನ್‌ ಮಾಡುವಂತೆ ಓಡಾಡುತ್ತಿರುವ ಪತ್ರ

ಕೊರೊನಾ ಮಾರಿ ಮರೆಯಾಗುವವರೆಗಾದರೂ ಸಂಪೂರ್ಣ ಮದ್ಯ ನಿಷೇಧ ಮಾಡಿ ನಂತರ ಸರ್ವೆ ಮೂಲಕ ಮುಂದಿನ ಕ್ರಮ ಜರುಗಿಸಬೇಕೆಂದು ಕಳಕಳಿಯ ಮನವಿಯನ್ನು ಸರ್ಕಾರಕ್ಕೆ ಮಾಡಿಕೊಳ್ಳಬಯಸಿದ್ದೇವೆ. ಕೇಂದ್ರ ಸರಕಾರದ ನಿಲುವನ್ನು ಜನಪರ ಕಾಳಜಿ ಇರುವ ರಾಜಕೀಯ ನೇತಾರರು, ಮಠಾಧೀಶರು, ವೈದ್ಯರು, ಮಾಧ್ಯಮದವರು, ಸಂಘಟನೆಗಳು ವಿರೋಧಿಸಿ ಸರಕಾರದ ಕಣ್ಣು ತೆರೆಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ. ಇಲ್ಲವಾದರೆ ಖಂಡಿತ ಕೊರೊನಾ ತಡೆಗಟ್ಟಲು ಇದುವರೆಗೂ ಮಾಡಿರುವ ಸಾಹಸ ಹೊಳೆಯಲ್ಲಿ ಹುಣಸೇಹಣ್ಣನ್ನು ಕದಡಿದಂತಾಗುವುದು. ತುಂಬಾ ನೊಂದ ಮನದಿಂದ ನಮ್ಮ ಭಾವನೆಗಳನ್ನು ಮಾಧ್ಯಮದ ಮೂಲಕ ಹಂಚಿಕೊಂಡಿದ್ದೇವೆ. ಸಾರ್ವಜನಿಕ ರು ಸಹ ತಮ್ಮ ಪ್ರತಿಭಟನೆಯನ್ನು ವ್ಯಕ್ಯಪಡಿಸಿ ಕುಡಿತದಿಂದ ಕುಟುಂಬಗಳನ್ನು ರಕ್ಷಿಸುವ ಸಂಕಲ್ಪ ಸ್ವೀಕರಿಸಿಬೇಕೆಂದು ಮನವಿ ಮಾಡಿದ್ದಾರೆ.

48 ದಿನಗಳಿಂದ ಮದ್ಯ ಮಾರಾಟ ನಿಂತಿದ್ದು, ಇದೇ ಅವಕಾಶ ಬಳಸಿ ರಾಜ್ಯದಲ್ಲಿ ಪೂರ್ಣ ಪಾನ ನಿಷೇಧಿಸುವಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರಕ್ಕೆ ಮನವಿ ಮಾಡಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಮದ್ಯ ವ್ಯಸನದಿಂದ ಅಧಿಕಾರ ದುರುಪಯೋಗ, ಜಗಳ, ಅಶಾಂತಿ  ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಿದೆ. ಹೀಗಾಗಿ ಮದ್ಯಪಾನ ನಿಷೇಧಿಸುವುದು ಇಂದಿನ  ಅತ್ಯಂತ ಅವಶ್ಯಕತೆಯಾಗಿದೆ ಎಂದಿದ್ದಾರೆ.

click me!