ಗದಗ: ಮರಳು ಮಾಫಿಯಾಕ್ಕೆ ಇನ್ನೆಷ್ಟು ಬಲಿ ಬೇಕು?

By Kannadaprabha News  |  First Published Feb 18, 2024, 1:32 PM IST

ಗದಗ ಜಿಲ್ಲೆಯ ರಾಜಕೀಯ ನಿರ್ಧಾರವಾಗುವುದೇ ಮರಳಿನ ಮೇಲೆ, ಮರಳು ದಂಧೆಗೆ ತೊಂದರೆ ಕಾರಣ ಪೊಲೀಸ್ ಠಾಣೆಯನ್ನೇ ಸುಟ್ಟು ಹಾಕಿದ ಘಟನೆಗಳಿವೆ. ಜಿಲ್ಲೆಯ ಇಂಥ ಹಲವಾರು ಪ್ರಕರಣಗಳ ಕುರಿತು ಬೆಳಕು ಚೆಲ್ಲಲು ಮರಳು ಮಾಫಿಯಾ ಸರಣಿ ''ಕನ್ನಡಪ್ರಭ''ದಲ್ಲಿ ಇಂದಿನಿಂದ.


ಶಿವಕುಮಾರ ಕುಷ್ಟಗಿ

ಗದಗ(ಫೆ.18): ಗದಗ ಭೌಗೋಳಿಕವಾಗಿ ಸಣ್ಣ ಜಿಲ್ಲೆಯಾದರೂ ಇಲ್ಲಿನ ನೈಸರ್ಗಿಕ ಸಂಪತ್ತು ಹೇರಳವಾಗಿದ್ದು, ಅದರಲ್ಲಿಯೂ ಗುಣಮಟ್ಟದ ಮರಳಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ವಿಶೇಷ ವಲಯವೆಂದು ಗುರುತಿಸಿಕೊಂಡಿದೆ. ಆದರೆ ಈ ನೈಸರ್ಗಿಕ ಸಂಪತ್ತನ್ನು ಹಗಲು ರಾತ್ರಿ ಎನ್ನದೇ ಲೂಟಿ ಮಾಡಿರುವ ಪ್ರಭಾವಿಗಳೇ ಜಿಲ್ಲೆಯಲ್ಲಿ ಕಳೆದ 10 ವರ್ಷದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು, ಸದ್ಯ ಜಿಲ್ಲೆಯ ರಾಜಕೀಯವನ್ನು ಅವರೇ ನಿಯಂತ್ರಿಸುತ್ತಿದ್ದಾರೆ.

Tap to resize

Latest Videos

undefined

2 ನದಿಗಳು, 35 ಹಳ್ಳಗಳು:

ಜಿಲ್ಲೆಯ ಒಂದು ಭಾಗದಲ್ಲಿ ಮಲಪ್ರಭಾ ನದಿ, ಇನ್ನೊಂದು ಭಾಗದಲ್ಲಿ ತುಂಗಭದ್ರಾ ನದಿ ಹರಿಯುತ್ತಿದ್ದು, ಇದರೊಟ್ಟಿಗೆ 35 ಹಳ್ಳಗಳಿದ್ದು, ಎಲ್ಲಾ ಕಡೆಗಳಲ್ಲಿಯೂ ಅತ್ಯುತ್ತಮ ಮರಳು ಹೇರಳವಾಗಿ ಸಿಗುತ್ತಿದೆ. 2013 ಕ್ಕಿಂತಲೂ ಮೊದಲು ಮರಳು ದಂಧೆಯನ್ನು ಕೆಲವರು ದೂರದ ಆಂಧ್ರದಿಂದ ಬಂದು ಅಲ್ಪ ಪ್ರಮಾಣದಲ್ಲಿ ಸಾಗಾಟ ನಡೆಸುತ್ತಿದ್ದರು. ನಂತರ ಇದಕ್ಕೆ ರಾಜಕೀಯ ಪಕ್ಷಗಳ 2ನೇ ದರ್ಜೆಯ ನಾಯಕರು, ಶಾಸಕರು, ಸಚಿವರುಗಳ ಹಿಂಬಾಲಕರು, ಹಣ ಉಳ್ಳವರು ಇಳಿದರೋ ಅಲ್ಲಿಗೆ ಮರಳು ಎನ್ನುವುದು ಜಿಲ್ಲೆಯ ರಾಜಕೀಯ ನಿರ್ಧರಿಸುವ ಪ್ರಮುಖ ವಸ್ತುವಾಗಿ ಮಾರ್ಪಟ್ಟಿತು.

ಗದಗ: ವೈದ್ಯ ಶಶಿಧರ ಹಟ್ಟಿ ಆತ್ಮಹತ್ಯೆ ಪ್ರಕರಣ, ಶರಣಗೌಡ ಬಂಧನಕ್ಕೆ ಪೊಲೀಸರ ಮೀನಮೇಷ?

ಹಿಂಬಾಲಕರದ್ದೇ ದರ್ಬಾರ್‌:

ಮರಳು ದಂಧೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರ ಹಿಂಬಾಲಕರಿಗೆ, ಕಾಂಗ್ರೆಸ್ ಬಂದಾಗ ಅವರ ಹಿಂಬಾಲಕರಿಗೆ ಉಸ್ತುವಾರಿ ನೋಡಿಕೊಳ್ಳುವ ಅಲಿಖಿತ ವ್ಯವಸ್ಥೆ ಜಿಲ್ಲೆಯಲ್ಲಿ ಜಾರಿಯಲ್ಲಿದೆ. ನಿತ್ಯವೂ ಕೋಟ್ಯಂತರ ವಹಿವಾಟು ನಡೆಸುವ ಈ ಮರಳು ಮಾಫಿಯಾ ನಿಯಂತ್ರಿಸಲು ಪ್ರಭಾವಿಗಳು ಹಗಲು ರಾತ್ರಿ ಎನ್ನದೇ ಪ್ರಯತ್ನಿಸುತ್ತಲೇ ಇರುತ್ತಾರೆ. ಅಧಿಕಾರ ಇದ್ದವರು ಸಹಜವಾಗಿ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದರೆ. ಸೋತವರು ಹಿಂದೆ ನಿಂತು ಇದನ್ನೇ ಮಾಡುತ್ತಿದ್ದಾರೆ.

ರೋಣ ಪ್ರಕರಣ ಜ್ವಲಂತ ಉದಾಹರಣೆ

ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮದ ವೈದ್ಯ ಡಾ. ಶಶಿಧರ ಹಟ್ಟಿ ಕಾಂಗ್ರೆಸ್‌ನಲ್ಲಿ ಪ್ರಭಾವಿ ವ್ಯಕ್ತಿ, ಪ್ರಭಾವಿ ಸಮುದಾಯದಿಂದ ಬಂದವರಾಗಿದ್ದರು. ಫೆ. 12ರಂದು ಅವರು ಇದೇ ಮರಳು ಮಾಫಿಯಾದ ಹಣಕಾಸಿನ ವಹಿವಾಟಿನ ವಿಷಯವಾಗಿ ಅವರದೇ (ಕಾಂಗ್ರೆಸ್) ಪಕ್ಷದ ಸರ್ಜಾಪುರದ ಶರಣಗೌಡ ಪಾಟೀಲ್‌ ಹೆಸರು ಬರೆದಿಟ್ಟು (ಡೆತ್ ನೋಟ್) ಆತ್ಮಹತ್ಯೆ ಮಾಡಿಕೊಂಡಿದ್ದು, ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇದುವರೆಗೂ ಆರೋಪಿ ಶರಣಗೌಡನ ಬಂಧನವಾಗಿಲ್ಲ. ಇದು ಮರಳು ದಂಧೆ ನಡೆಸುವವರು ಭಾರೀ ಪ್ರಭಾವ ಹೊಂದಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ. ಮರಳು ಮಾರಾಟ ಮತ್ತು ವಹಿವಾಟು ಎಷ್ಟು ಪ್ರಭಾವಿತವಾಗಿದೆ ಎಂದರೆ ಅವರು ಏನು ಬೇಕಾದರೂ, ಯಾರನ್ನು ಬೇಕಾದರೂ ಖರೀದಿಸುತ್ತಾರೆ ಎನ್ನುವ ಚರ್ಚೆ ಸಾರ್ವಜನಿಕ ವಲಯದಲ್ಲಿದೆ.

2017ರ ಫೆ. 5ರಂದು ಮರಳು ಸಾಗಾಟ ಮಾಡುವವರು, ಮರಳು ಮಾಫಿಯಾ ನಿಯಂತ್ರಿಸುವವರು ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ನುಗ್ಗಿ ಠಾಣೆಯನ್ನೇ ಸುಟ್ಟು ಹಾಕಿದ್ದರು. ಜೀಪುಗಳು, ಸಾಮಗ್ರಿ, ದಾಖಲೆಗಳು ಬೆಂಕಿಗೆ ಆಹುತಿಯಾಗಿದ್ದವು. ಇದು ದಾಖಲಾಗಿರುವ ಪ್ರಕರಣ ಮಾತ್ರ, ದಾಖಲಾಗದೇ ರಾಜಕೀಯ ಪ್ರಭಾವದಿಂದ ಮುಚ್ಚಿ ಹೋಗಿರುವ ಸಾವಿರಾರು ಪ್ರಕರಣಗಳಿವೆ. ಮುಚ್ಚಿ ಹೋಗಿರುವ ಪ್ರತಿಯೊಂದು ಪ್ರಕರಣದ ಹಿಂದೆಯೂ ರಾಜಕೀಯ ಕೈವಾಡವಿದೆ. ಅಮಾಯಕ ಜೀವಗಳು ಬಲಿಯಾಗಿವೆ. ಅವರ ಸಂಬಂಧಿಗಳು ನೋವನ್ನು ಸಹಿಸಲಾಗದೇ, ಹೊರಗಡೆಯೂ ಹೇಳಲಾಗದೇ ಇಂದಿಗೂ ಬೆಂದ ಜೀವದಂತೆ ಬದುಕುತ್ತಿವೆ.

ಗದಗ: ಕಾಂಗ್ರೆಸ್ ಮುಖಂಡ ಶಶಿಧರ್ ಹಟ್ಟಿ ನೇಣಿಗೆ ಶರಣು, ಕಾರಣ?

ವ್ಯಾಪಕ ಹಸ್ತಕ್ಷೇಪ

ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಮರಳು ದಂಧೆಯನ್ನು ಪ್ರಭಾವಿಗಳೇ ಮುಂದೆ ನಿಂತು ನಡೆಸುತ್ತಾರೆ. ಅವರ ಹಿಂಬಾಲಕರಿಗೆ ಸೂಚನೆ ಕೊಟ್ಟು ಆ ಮೂಲಕ ಹಣ ಗಳಿಸುತ್ತಾರೆ. ಇದನ್ನು ಪ್ರಶ್ನೆ ಮಾಡುವ ನೈತಿಕತೆ ವಿರೋಧ ಪಕ್ಷಗಳಿಗೂ ಇಲ್ಲ. ಕಾರಣ ಅವರ ಸರ್ಕಾರ ಇದ್ದಾಗ ಅವರೂ ಈ ಅಕ್ರಮವನ್ನು ವ್ಯಾಪಕವಾಗಿ ನಡೆಸಿದ್ದಾರೆ. ಮರಳು ಸಾಗಾಟ ಮಾಡುವ ಶೇ. 90 ಲಾರಿಗಳು ಕೂಡಾ ರಾಜಕೀಯ ನಾಯಕರ ಹಿಂಬಾಲಕರಿಗೇ ಸೇರಿವೆ. ಅದಕ್ಕಾಗಿ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ, ಕಂದಾಯ ಹೀಗೆ ಪ್ರತಿಯೊಂದು ಇಲಾಖೆಯಲ್ಲಿಯೂ ವ್ಯಾಪಕ ರಾಜಕೀಯ ಪ್ರಭಾವ, ಹಸ್ತಕ್ಷೇಪ ನಡೆಯುತ್ತಿದೆ.

ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಮರಳು ದಂಧೆಯನ್ನು ಪ್ರಭಾವಿಗಳೇ ಮುಂದೆ ನಿಂತು ನಡೆಸುತ್ತಾರೆ. ಅವರ ಹಿಂಬಾಲಕರಿಗೆ ಸೂಚನೆ ಕೊಟ್ಟು ಆ ಮೂಲಕ ಹಣ ಗಳಿಸುತ್ತಾರೆ. ಇದನ್ನು ಪ್ರಶ್ನೆ ಮಾಡುವ ನೈತಿಕತೆ ವಿರೋಧ ಪಕ್ಷಗಳಿಗೂ ಇಲ್ಲ. ಕಾರಣ ಅವರ ಸರ್ಕಾರ ಇದ್ದಾಗ ಅವರೂ ಈ ಅಕ್ರಮವನ್ನು ವ್ಯಾಪಕವಾಗಿ ನಡೆಸಿದ್ದಾರೆ. 

click me!