ಡಿ.ಜೆ-ಕೆ.ಜಿ.ಹಳ್ಳಿ ಗಲಭೆ ಪ್ರಕರಣ: ಆಸ್ಪತ್ರೆಯಿಂದಲೇ ಸಂಪತ್‌ ರಾಜ್‌ ಪರಾರಿ

By Kannadaprabha NewsFirst Published Oct 31, 2020, 7:19 AM IST
Highlights

ಡಿ.ಜೆ-ಕೆ.ಜಿ.ಹಳ್ಳಿ ಗಲಭೆಗೆ ಪ್ರಚೋದನೆ ಆರೋಪ ಹಿನ್ನೆಲೆ| ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದ ಸಿಸಿಬಿ| ಕೊರೋನಾ ನೆಪ ಹೇಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮೇಯರ್‌| ಮಾಹಿತಿ ನೀಡದೇ ಅಲ್ಲಿಂದ ಪರಾರಿ| 

ಬೆಂಗಳೂರು(ಅ.31): ಒಂದು ತಿಂಗಳಿಂದ ಕೊರೋನಾ ಸೋಂಕು ಕಾರಣ ನೀಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆಯುತ್ತಿದ್ದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ.

ಸಿಸಿಬಿ ಎಸಿಪಿ ವೇಣುಗೋಪಾಲ್‌ ನೇತೃತ್ವದ ತಂಡ ಆರೋಪಿ ಸಂಪತ್‌ ರಾಜ್‌ಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದು, ಬಂಧನಕ್ಕೆ ಬಲೆ ಬೀಸಿದೆ. ಇನ್ನು ಆಸ್ಪತ್ರೆ ವೈದ್ಯರು ಡಿಸ್ಚಾರ್ಜ್‌ ಬಗ್ಗೆ ಸೂಕ್ತ ಮಾಹಿತಿ ನೀಡದ ಬಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರಿಗೆ ಎರಡನೇ ಬಾರಿ ನೋಟಿಸ್‌ ಜಾರಿ ಮಾಡಲಾಗಿದೆ.

ಗಲಭೆ ಪ್ರಕರಣ ಸಂಬಂಧ ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಮಾಜಿ ಮೇಯರ್‌ಗೆ ಸಿಸಿಬಿ ಅಧಿಕಾರಿಗಳು ಅ.7ರಂದು ನೋಟಿಸ್‌ ನೀಡಿತ್ತು. ಆದರೆ ಕೊರೋನಾ ಸೋಂಕು ನೆಪ ಹೇಳಿ ವಿಚಾರಣೆಗೆ ಗೈರಾದ ಸಂಪತ್‌ ಅವರು, ಸೆ.15ರಿಂದ ಕನ್ನಿಂಗ್‌ಹ್ಯಾಮ್‌ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕೊರೋನಾಗೆ ಒಂದು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ಅನುಮಾನಗೊಂಡ ತನಿಖಾಧಿಕಾರಿಗಳು ಸಂಪತ್‌ರಾಜ್‌ ಯಾವ್ಯಾವ ಖಾಯಿಲೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ವರದಿ ಕೇಳಿದ್ದರು.

ಬೆಂಗಳೂರು ಗಲಭೆ ಪ್ರಕರಣ: ಸಂಪತ್‌ ರಾಜ್‌ಗೆ ನಿರೀಕ್ಷಣಾ ಜಾಮೀನು ನೀಡಬೇಡಿ

ಅಲ್ಲದೆ, ಸಂಪತ್‌ರಾಜ್‌ ಅವರ ಆರೋಗ್ಯದ ಕುರಿತು ತಜ್ಞ ವೈದ್ಯರ ತಂಡದಿಂದ ಪರಾಮರ್ಶಿಸಿ ವರದಿ ನೀಡುವಂತೆ ಆರೋಗ್ಯ ಇಲಾಖೆಗೆ ಕೋರಿದ್ದರು. ಆರೋಗ್ಯ ಪರಿಸ್ಥಿತಿ ಅಧ್ಯಯನಕ್ಕೆ ಐವರು ತಜ್ಞ ವೈದ್ಯರ ತಂಡ ರಚಿಸುವಂತೆ ಸಿಸಿಬಿ ಪೊಲೀಸರು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿತ್ತು. ಈ ಬೆನ್ನಲ್ಲೇ ಇದೀಗ ಶುಕ್ರವಾರ ಬೆಳಗ್ಗೆಯಿಂದಲೇ ಸಂಪತ್‌ರಾಜ್‌ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಇನ್ನು ಒಮ್ಮೆ ವಿಚಾರಣೆಗೆ ಹಾಜರಾಗಿದ್ದ ಸಂಪತ್‌ರಾಜ್‌ ಮೊಬೈಲನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೀಗ ಆರೋಪಿ ಉಪಯೋಗಿಸುತ್ತಿರುವ ಮೊಬೈಲ್‌ ಸಂಖ್ಯೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.
ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆಗೆ ಪ್ರಧಾನ ಸೂತ್ರಧಾರ ಎಂಬ ಆರೋಪಕ್ಕೆ ಸಂಪತ್‌ ತುತ್ತಾಗಿದ್ದಾರೆ. ಈಗಾಗಲೇ ಅಂದು ಗಲಾಟೆ ವೇಳೆ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಿ ಸುಟ್ಟು ಹಾಕಿದ ಪ್ರಕರಣದಲ್ಲಿ ಅವರ ವಿರುದ್ಧ ನ್ಯಾಯಾಲಯಕ್ಕೆ ಸಿಸಿಬಿ ಆರೋಪ ಪಟ್ಟಿಸಲ್ಲಿಸಿದೆ. ಒಂದು ಬಾರಿ ಸಿಸಿಬಿಯಿಂದ ಸುದೀರ್ಘ ವಿಚಾರಣೆ ಸಹ ನಡೆದಿದೆ.
 

click me!