ತುಮಕೂರಿನ ಸಮೀಪವಿರುವ ನಾಮದ ಚಿಲುಮೆಗೆ ಅಕ್ಷರಶಃ ಕಾಯಕಲ್ಪ ಬೇಕಾಗಿದೆ. ಭರ್ತಿ 42.2 ಚದರ್ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲೇ ಇರುವ ನಾಮದ ಚಿಲುಮೆಯಲ್ಲಿರುವ ಪಕ್ಷಿ ತಜ್ಞ ಸಲೀಂ ಅಲಿ ತಂಗಿದ್ದ ಕೊಠಡಿ ಪಾಳು ಬಿದ್ದಿದೆ.
ಉಗಮ ಶ್ರೀನಿವಾಸ್
ತುಮಕೂರು : ತುಮಕೂರಿನ ಸಮೀಪವಿರುವ ನಾಮದ ಚಿಲುಮೆಗೆ ಅಕ್ಷರಶಃ ಕಾಯಕಲ್ಪ ಬೇಕಾಗಿದೆ. ಭರ್ತಿ 42.2 ಚದರ್ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ದೇವರಾಯನದುರ್ಗ ಅರಣ್ಯ ಪ್ರದೇಶದಲ್ಲೇ ಇರುವ ನಾಮದ ಚಿಲುಮೆಯಲ್ಲಿರುವ ಪಕ್ಷಿ ತಜ್ಞ ಸಲೀಂ ಅಲಿ ತಂಗಿದ್ದ ಕೊಠಡಿ ಪಾಳು ಬಿದ್ದಿದೆ.
ನಾಮದ ಚಿಲುಮೆಯಲ್ಲಿರುವ ಜಿಂಕೆವನದ ಸಮೀಪ ಇರುವ ತಜ್ಞ ಸಲೀಂ ಅಲಿ ಉಳಿದುಕೊಂಡಿದ್ದ ಕಟ್ಟಡದ ಹೆಂಚುಗಳು ಅಕ್ಷರಶಃ ಒಡೆದು ಹೋಗಿದೆ. ಅಲ್ಲದೆ, ಯಾವುದೇ ಕಾಯಕಲ್ಪವಿಲ್ಲದೆ ಪಾಳು ಬಿದ್ದಿದೆ. ದೇವರಾಯನದುರ್ಗ ಹಾಗೂ ನಾಮದ ಚಿಲುಮೆ ಸುತ್ತಮುತ್ತ ಇರುವ ಸಸ್ಯ ಸಂಕುಲದ ಬಗ್ಗೆ ಅಧ್ಯಯನ ಮಾಡಲು ಸಲೀಂ ಆಲಿ ನಾಲ್ಕು ಬಾರಿ ಇಲ್ಲಿಗೆ ಬಂದಿದ್ದರು. ಒಮ್ಮೆ ಮೂರು ದಿವಸ, ಮೂರು ಬಾರಿ ಒಂದು ವಾರಗಳ ಕಾಲ ಕಾಡಿನ ಮಧ್ಯೆಯೇ ತಂಗಿದ್ದರು.
ನಾಮದ ಚಿಲುಮೆ ಬಳಿ ಇರುವ ಈ ಕಟ್ಟಡದಲ್ಲೇ ಅವರು ಉಳಿದುಕೊಂಡಿದ್ದರು. ಸುಂದರ ಪರಿಸರದಲ್ಲಿದ್ದ ಈ ಜಾಗ ಅವರಿಗೆ ಅಚ್ಚುಮೆಚ್ಚಾಗಿತ್ತು. ಒಮ್ಮೆ ಪಕ್ಷಿ ವೀಕ್ಷಣೆಗೆ ಬಂದಿದ್ದ ಸಲೀಂ ಅಲಿ ಅವರಿಗೆ ಈ ಜಾಗ ಇಷ್ಟವಾಗಿದ್ದರಿಂದ ಬಳಿಕ ಮೂರು ಬಾರಿ ಇಲ್ಲಿಗೆ ಬಂದಿದ್ದರು. ಆದರೆ, ಈಗ ಅವರು ಉಳಿದುಕೊಂಡಿದ್ದ ಕಟ್ಟಡ ಪಾಳುಬಿದ್ದಿದೆ. ತುಮಕೂರು ಜಿಲ್ಲೆಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಹೀಗಾಗಿ ಸಲೀಂ ಅಲಿ ಉಳಿದುಕೊಂಡಿದ್ದ ಕಟ್ಟಡವನ್ನು ಪುನರುಜ್ಜೀವನಗೊಳಿಸಬೇಕೆಂಬ ಆಗ್ರಹ ಪರಿಸರವಾದಿಗಳದ್ದಾಗಿದೆ.
ಕಲ್ಲು ಗಣಿಗಾರಿಕೆ ಬೇಡ:
ನಾಮದ ಚಿಲುಮೆ ಒಳಗೊಂಡು ದೇವರಾಯನದುರ್ಗ ಸುತ್ತಮುತ್ತ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಹೀಗಾಗಿ ಬಂಡೆಗಳನ್ನು ಸ್ಫೋಟಿಸಲು ಸ್ಫೋಟಕಗಳನ್ನು ಬಳಸುತ್ತಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿರುವ ಪ್ರಾಣಿಗಳಿಗೆ ಸಾಕಷ್ಟುತೊಂದರೆಯಾಗುತ್ತಿದೆ. ಕಲ್ಲು ಗಣಿಗಾರಿಕೆ ಹೀಗೆ ಅವ್ಯಾಹತವಾಗಿ ನಡೆದರೆ ಮುಂದೊಂದು ದಿನ ಪ್ರಾಣಿಗಳು ಶಾಶ್ವತವಾಗಿ ಗುಳೆ ಹೊರಡುವ ಅಪಾಯ ಬಂದೊದಗಿದೆ. ತುಮಕೂರಿನ ಬಳಿ ಇರುವ ಈ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಿಧಾನಕ್ಕೆ ರೆಸಾರ್ಟ್‌ಗಳು ತಲೆ ಎತ್ತುತ್ತಿವೆ. ಇದಕ್ಕೆ ಕಡಿವಾಣ ಹಾಕಲೇಬೇಕು. ಈ ಹಿಂದೆ ಕೂಡ ಆಧ್ಯಾತ್ಮಿಕ ಸಂಸ್ಥೆಯೊಂದು ಧ್ಯಾನ ಮಂದಿರಕ್ಕೆ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿತ್ತು. ಆದರೆ ಪರಿಸರವಾದಿಗಳು ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಜಾಗ ನೀಡಲು ನಿರಾಕರಿಸಲಾಯಿತು. ಒಟ್ಟಾರೆಯಾಗಿ ತುಮಕೂರಿನ ಬಳಿ ಇರುವ ಈ ಸಂರಕ್ಷಿತ ಅರಣ್ಯ ಪ್ರದೇಶವನ್ನು ಅರಣ್ಯ ಇಲಾಖೆಯವರು ರಕ್ಷಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಪರಿಸರವಾದಿಗಳು ಇದ್ದಾರೆ.
ಜಿಂಕೆವನ ಕೂಡ ಅಭಿವೃದ್ಧಿಯಾಗಬೇಕು:
ಮೃಗಾಲಯ ಪ್ರಾಧಿಕಾರದ ನೆರವಿನಿಂದ ಜಿಂಕೆವನಕ್ಕೆ ಒಂದಿಷ್ಟುಕಾಯಕಲ್ಪವೇನೋ ಆಗಿದೆ. ಆದರೆ ನೀರಿನ ಅರವಟ್ಟಿಗೆಗಳನ್ನು ಇನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ಮಿಸಬೇಕಾಗಿದೆ. ಅಲ್ಲದೇ ಮಧ್ಯಾಹ್ನದ ವೇಳೆ ತಂಗಲು ಅವಕ್ಕೆ ಪುಟ್ಟಗುಡಿಸಲಿನ ಚೋಪಡಿಗಳನ್ನು ಮಾಡಿದ್ದಾರೆ. ಆದರೆ 75 ಕ್ಕೂ ಹೆಚ್ಚು ಜಿಂಕೆಗಳಿರುವುದರಿಂದ ಇನ್ನು ಮೂರ್ನಾಕು ಚೋಪಡಿಗಳನ್ನು ನಿರ್ಮಿಸಬೇಕಾಗಿದೆ.
ಪಿರಮಿಡ್ ಧ್ಯಾನ ಕೇಂದ್ರ
ಇನ್ನು ನಾಮದ ಚಿಲುಮೆ ಎದುರಿಗಿರುವ ಸಸ್ಯ ತೋಟದಲ್ಲಿ ಪಿರಮಿಡ್ ಧ್ಯಾನ ಕೇಂದ್ರವಿದೆ. ಆರಂಭದಲ್ಲಿ ಇಲ್ಲಿ ಧ್ಯಾನದ ತರಗತಿಗಳನ್ನು ಮಾಡುತ್ತಿದ್ದರು. ಆದರೆ, ಈಗ ಅದನ್ನು ಯಾರೂ ಬಳಸದಂತಾಗಿದೆ. ನಾಮದ ಚಿಲುಮೆಯಿಂದ ದೇವರಾಯನದುರ್ಗದ ಮಾರ್ಗವಾಗಿ ಬಹಳಷ್ಟುಮಂದಿ ಪ್ರವಾಸಿಗರು ನಡದೇ ಹೋಗುತ್ತಾರೆ. ಈ ಹಾದಿ ಮಧ್ಯೆ ಬರುವ ವ್ಯೂಹ್ ಪಾಯಿಂಟ್ ನೋಡಲು ಜನ ಹಾತೊರೆಯುತ್ತಾರೆ. ವ್ಯೂಹ್ ಪಾಯಿಂಟ್‌ನಿಂದ ಇಡೀ ಹಸಿರು ಹೊದ್ದ ಬೆಟ್ಟಗುಡ್ಡಗಳು ಕಾಣಸಿಗುತ್ತದೆ. ಈ ಜಾಗದಲ್ಲಿ ಪ್ರವಾಸಿಗರಿಗೆ ಕೂರಲು ವ್ಯವಸ್ಥೆ ಕಲ್ಪಿಸಬೇಕಾಗಿದೆ.
ಚೆಕ್ ಪೋಸ್ಟ್ ಇಲ್ಲ:
ನಾಮದ ಚಿಲುಮೆ ಮೂಲಕ ದೇವರಾಯನದುರ್ಗ ಅರಣ್ಯವನ್ನು ಕ್ರಮಿಸಲು ಐದಾರು ಕಡೆ ಜಾಗವಿದೆ. ಆದರೆ, ಎಲ್ಲಿಯೂ ಕೂಡ ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಿಲ್ಲ. ಚೆಕ್ ಪೋಸ್ಟ್ ನಿರ್ಮಿಸಿ ಬಂದು ಹೋಗುವವರ ಬಗ್ಗೆ ನಿಗಾ ಇಡಬೇಕಾಗಿದೆ. ಈ ಹಿಂದೆ ನಾಮದ ಚಿಲುಮೆ ಸುತ್ತಮುತ್ತ ಅವ್ಯಾಹತವಾಗಿ ನಾಟ ಕಳವು ಆಗುತ್ತಿತ್ತು.
-42.2 ಚೆದುರ ಕಿಲೋ ಮೀಟರ್ ವ್ಯಪ್ತಿಯಲ್ಲಿರುವ ಅರಣ್ಯ
-ಕಲ್ಲು ಗಣಿಗಾರಿಕೆ, ರೆಸಾರ್ಟ್‌ಗಳಿಗೆ ಕಡಿವಾಣ ಹಾಕಬೇಕು
-ಕಾಡು ಪ್ರಾಣಿಗಳ ಆವಾಸ ಸ್ಥಾನ ನಾಶವಾಗುತ್ತಿದೆ
-ನಾಲ್ಕು ಬಾರಿ ನಾಮದ ಚಿಲುಮೆಗೆ ಬಂದಿದ್ದ ಸಲೀಂ ಆಲಿ