ಅಥಣಿಯಲ್ಲಿ ಎಗ್ಗಿಲ್ಲದೇ ನಡೆದಿದೆ ಮಾವಾ, ಗುಟ್ಕಾ ಮಾರಾಟ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

By Kannadaprabha NewsFirst Published Jan 14, 2023, 2:20 PM IST
Highlights

ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆ ಬಸ್‌ ನಿಲ್ದಾಣ, ದೇವಸ್ಥಾನಗಳು ಮತ್ತು ಶಾಲಾ-ಕಾಲೇಜುಗಳ ಸುತ್ತಮುತ್ತಲು 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನ ಮಾರಾಟ ಮಾಡಬಾರದೆಂಬ ನಿಯಮವಿದ್ದರೂ ಗುಟ್ಕಾ, ತಂಬಾಕು, ಸಿಗರೇಟ್‌ ಮತ್ತು ಬೀಡಿಗಳನ್ನು ಮಾರಾಟ ಮಾಡುತ್ತಿರುವ ಅನೇಕ ಅಂಗಡಿಕಾರರು. 

ಅಣ್ಣಾಸಾಬ ತೆಲಸಂಗ

ಅಥಣಿ(ಜ.14):  ಮಾದಕ ವಸ್ತುಗಳಿಂದ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಇದರ ಮಧ್ಯೆ ಮಾರಾಟ ಮಾಡಲು ನಿಷೇಧಿಸಿದ ತಂಬಾಕು ಮಿಶ್ರಿತ ಮಾವಾ, ಗುಟ್ಕಾ ಮಾರಾಟ ಮಾತ್ರ ಎಗ್ಗಿಲ್ಲದೇ ಅಥಣಿ ತಾಲೂಕಿನಲ್ಲಿ ಸಾಗಿದೆ. ಇದರಿಂದ ಜನರು ದಾರಿ ತಪ್ಪಿ, ಅನೇಕ ಚಟಗಳಿಗೆ ದಾಸರಾಗುತ್ತಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ, ಸಾರಿಗೆ ಬಸ್‌ ನಿಲ್ದಾಣ, ದೇವಸ್ಥಾನಗಳು ಮತ್ತು ಶಾಲಾ-ಕಾಲೇಜುಗಳ ಸುತ್ತಮುತ್ತಲು 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನ ಮಾರಾಟ ಮಾಡಬಾರದೆಂಬ ನಿಯಮವಿದ್ದರೂ ಅನೇಕ ಅಂಗಡಿಕಾರರು ಗುಟ್ಕಾ, ತಂಬಾಕು, ಸಿಗರೇಟ್‌ ಮತ್ತು ಬೀಡಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವುಗಳ ಚಟಕ್ಕೆ ಅಂಟಿಕೊಂಡಿರುವ ಜನರು ಸಾರ್ವಜನಿಕ ಸ್ಥಳದಲ್ಲಿಯೇ ತಂಬಾಕು ಮಿಶ್ರಿತ ಗುಟ್ಕಾ, ಮಾವಾ ತಿಂದು ಎಲ್ಲಿ ಬೇಕೆಂದರಲ್ಲಿ ಉಗಿದು ಸಾರ್ವಜನಿಕರ ಸ್ಥಳಗಳ ಸ್ವಚ್ಛತೆಗೆ ಭಂಗ ತರುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿಯೇ ನಿಂತು ಬೀಡಿ, ಸಿಗರೇಟ್‌ ಸೇದಿ ಹೊಗೆ ಬಿಡುತ್ತಿದ್ದರೂ ಅವರನ್ನು ಯಾರೂ ಪ್ರಶ್ನಿಸದಂತಾಗಿದೆ.

ಕರ್ನಾಟಕ-ಮಹಾರಾಷ್ಟ್ರ ತಾಯಿ-ಚಿಕ್ಕಮ್ಮ ಇದ್ದಂತೆ: ಮಹಾ ಸಂಸದ ಅಮೋಲ್ ಕೋಲ್ಹೆ

ಹೆಸರಿಗೆ ಮಾತ್ರ ದಾಳಿ:

ಕೆಲ ದಿನಗಳ ಹಿಂದೆ ಪೊಲೀಸ್‌ ಇಲಾಖೆಯವರು ತಂಬಾಕು ಮಿಶ್ರಿತ ಮಾವಾ ಘಟಕದ ಮೇಲೆ ದಾಳಿ ನಡೆಸಿ ಪ್ರಕರಣದ ದಾಖಲಿಸಿ ಶಿಸ್ತು ಕ್ರಮ ಕೈಗೊಂಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಥಣಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಅಂಗಡಿಗಳಲ್ಲಿ ಅಕ್ರಮ ಸಾರಾಯಿ ಮಾದರಿಯಲ್ಲಿಯೇ ಅಕ್ರಮ ತಂಬಾಕು ಉತ್ಪನ್ನಗಳು ಮಾರಾಟವಾಗುತ್ತಿವೆ. ಪಟ್ಟಣದ ಪಾನ್‌ಶಾಪ್‌ ಅಂಗಡಿಗಳಲ್ಲಿ ಇತ್ತೀಚೆಗೆ ತಂಬಾಕು ಉತ್ಪನ್ನ ಮತ್ತು ಗುಟ್ಕಾಗಳನ್ನು ಬಹಿರಂಗವಾಗಿ ಮಾರಾಟ ಮಾಡುವವರ ಅಂಗಡಿಗಳ ಮೇಲೆ ಪೊಲೀಸ್‌ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಆದರೆ, ಈ ದಾಳಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ.
ಅಥಣಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಅನಧಿಕೃತವಾಗಿ ಸರ್ಕಾರದ ಮಾನ್ಯತೆ ಪಡೆಯದೇ ಅಕ್ರಮವಾಗಿ ತಂಬಾಕು ಮಿಶ್ರಿತ ಮಾವಾ ಪ್ಯಾಕೆಟ್‌ ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಅನೇಕ ಯುವಕರು ದುಶ್ಚಟಗಳ ದಾಸರಾಗುತ್ತಿದ್ದಾರೆ. ಕೆಲವೊಂದು ಶಾಲಾ ಕಾಲೇಜಿನ ಪರಿಸರದಲ್ಲಿ ಡ್ರಗ್ಸ್‌ ಮಾಫಿಯಾ ಕೇಳಿ ಬರುತ್ತಿದ್ದು, ಈ ವಿಷಯ ತಾಲೂಕಿನ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ಹಲವು ಸಂದೇಹಗಳಿಗೆ ಎಡೆ ಮಾಡಿದೆ. ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಇಂತಹ ಅಕ್ರಮಗಳನ್ನು ತಡೆಗಟ್ಟಲು ಮುಂದಾಗಬೇಕು. ಇಲ್ಲವಾದಲ್ಲಿ ಜನರು ಇನ್ನಷ್ಟುಚಟಗಳಿಗೆ ದಾಸರಾಗಿ ಹಾಳಾಗಿ ಹೋಗುತ್ತಾರೆ.

ತಂಬಾಕು ಸೇವನೆಯಿಂದ ಕ್ಯಾನ್ಸರ್‌ ನಂತಹ ರೋಗಗಳು ಬರುತ್ತವೆ. ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಇದು ಅಪಾಯವಾಗಿದೆ. ಹೃದಯ ಸಂಬಂಧಿ ಕಾಯಿಲೆಗಳು, ಉಸಿರಾಟದ ಕಾಯಿಲೆಗಳು ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಅಪಾಯಕಾರಿ ಅಂಶವಾಗಿದೆ. ಅಂಗಡಿಕಾರರು ಮತ್ತು ಪಾನ್‌ಶಾಪ್‌ ನಡೆಸುವವರು ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಅಂತ ತಾಲೂಕು ಆರೋಗ್ಯಾಧಿಕಾರಿ ಡಾ.ಬಸಗೌಡಾ ಕಾಗೆ ತಿಳಿಸಿದ್ದಾರೆ. 

click me!