ಕೇವಲ ಎರಡು ವರ್ಷದಲ್ಲಿ ಶಿರಾಡಿ ರೈಲ್ವೆ ಮಾರ್ಗದ ವಿದ್ಯುದ್ಧೀಕರಣ ಪೂರ್ಣ, ಪಶ್ಚಿಮಘಟ್ಟದ ರೈಲು ಹಾದಿಗೆ ಹೊಸ ಚೈತನ್ಯ

Published : Jan 10, 2026, 07:00 PM IST
 Railway

ಸಾರಾಂಶ

ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ 55 ಕಿ.ಮೀ. ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾರ್ಯವು ಕೇವಲ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಸಾಧನೆಯು ಪಶ್ಚಿಮಘಟ್ಟದ ಮೂಲಕ ರೈಲು ಸಂಚಾರಕ್ಕೆ ಹೊಸ ಚೈತನ್ಯ ನೀಡಲಿದೆ.

ಸಕಲೇಶಪುರ: ಪಶ್ಚಿಮಘಟ್ಟದ ಕಠಿಣ ಭೌಗೋಳಿಕ ಸವಾಲುಗಳನ್ನು ಮೀರಿ, ಸಕಲೇಶಪುರ–ಸುಬ್ರಹ್ಮಣ್ಯ ನಡುವಿನ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾರ್ಯವನ್ನು ರೈಲ್ವೆ ಇಲಾಖೆ ಕೇವಲ ಎರಡು ವರ್ಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ಭಾರತೀಯ ರೈಲ್ವೆ ಇತಿಹಾಸದಲ್ಲೇ ಗಮನಾರ್ಹ ಸಾಧನೆಯಾಗಿ ಹೊರಹೊಮ್ಮಿದೆ.

ಸುಮಾರು 55 ಕಿಲೋಮೀಟರ್ ಉದ್ದದ ಈ ರೈಲ್ವೆ ಮಾರ್ಗವು ತೀವ್ರ ಕಡಿದಾದ ಪಶ್ಚಿಮಘಟ್ಟದ ಬೆಟ್ಟಶ್ರೇಣಿಗಳ ಮಧ್ಯೆ ಹಾದು ಹೋಗುತ್ತಿದ್ದು, ಇಲ್ಲಿ ವಿದ್ಯುದ್ದೀಕರಣ ಕಾರ್ಯ ನಡೆಸುವುದು ರೈಲ್ವೆ ಇಲಾಖೆಗೆ ದೊಡ್ಡ ಸವಾಲಾಗಿತ್ತು. ಆದರೂ, 2023ರ ಡಿಸೆಂಬರ್‌ನಲ್ಲಿ ₹93.55 ಕೋಟಿ ವೆಚ್ಚದಲ್ಲಿ ಆರಂಭಗೊಂಡ ಕಾಮಗಾರಿ 2025ರ ಡಿಸೆಂಬರ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ.

ಸುರಂಗಗಳು, ಸೇತುವೆಗಳು ಮತ್ತು ತಾಂತ್ರಿಕ ಸಾಧನೆ

ಈ ಮಾರ್ಗದಲ್ಲಿ ಐದು ಸ್ವಿಚಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಲಾಗಿದ್ದು, ಸುರಂಗ ಮಾರ್ಗಗಳಲ್ಲಿ ಮೇಲ್ಮೈ ವಿದ್ಯುತ್ ಸಾಧನಗಳನ್ನು ಅಳವಡಿಸಲಾಗಿದೆ. ಒಟ್ಟು 419 ಮುಖ್ಯ ಬ್ರಾಕೆಟ್‌ಗಳು ಹಾಗೂ ಅಷ್ಟೇ ಸಂಖ್ಯೆಯ ಹೆಚ್ಚುವರಿ ಬ್ರಾಕೆಟ್‌ಗಳನ್ನು ಸ್ಥಾಪಿಸುವ ಮೂಲಕ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡಿದೆ.

ಇದಲ್ಲದೆ, ವಿದ್ಯುತ್ ಪವರ್ ಸ್ಟೇಷನ್ ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದ್ದು, ಅದು ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ಡೀಸೆಲ್ ಇಂಜಿನ್‌ಗಳಿಗೆ ವಿದಾಯ ಹೇಳಿ ಸಂಪೂರ್ಣವಾಗಿ ವಿದ್ಯುತ್ ರೈಲುಗಳು ಸಂಚರಿಸಲಿವೆ.

ರೈಲು ಸಂಚಾರಕ್ಕೆ ಹೊಸ ಚೈತನ್ಯ

ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಪ್ರಸ್ತುತ ಸಂಚರಿಸುತ್ತಿರುವ 10 ಪ್ರಯಾಣಿಕ ರೈಲುಗಳ ಜೊತೆಗೆ ಇನ್ನಷ್ಟು ರೈಲುಗಳನ್ನು ಆರಂಭಿಸಲು ರೈಲ್ವೆ ಇಲಾಖೆ ಯೋಜನೆ ರೂಪಿಸುತ್ತಿದೆ. ಹಾಗೆಯೇ, ಈಗಿರುವ ನಾಲ್ಕು ಸರಕು ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎನ್ನಲಾಗಿದೆ. ಇದರಿಂದ ಸರಕು ಸಾಗಣೆ ಸುಗಮವಾಗುವ ಜೊತೆಗೆ ಆರ್ಥಿಕ ಚಟುವಟಿಕೆಗೂ ಉತ್ತೇಜನ ಸಿಗಲಿದೆ.

ಪ್ರವಾಸೋದ್ಯಮಕ್ಕೆ ಹೊಸ ಉಸಿರು

ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಈ ರೈಲ್ವೆ ಮಾರ್ಗವೇ ಒಂದು ವಿಸ್ಮಯ. ಈ 55 ಕಿ.ಮೀ. ಉದ್ದದ ಮಾರ್ಗದಲ್ಲಿ 20 ಮೀಟರ್‌ನಿಂದ 2 ಕಿಲೋಮೀಟರ್ ದೂರದ 57 ಸುರಂಗಗಳು ಹಾಗೂ 258 ಸೇತುವೆಗಳು ನಿರ್ಮಾಣವಾಗಿವೆ. ತೀವ್ರ ಕಡಿದಾದ ಪಶ್ಚಿಮಘಟ್ಟದ ಪರ್ವತ ಶ್ರೇಣಿಗಳ ಮಧ್ಯೆ ಹಾದು ಹೋಗುವ ಈ ಮಾರ್ಗದಲ್ಲಿ ರೈಲು ಪ್ರಯಾಣವೇ ಒಂದು ಅದ್ಭುತ ಅನುಭವ.

ರೈಲಿನ ವೇಗವನ್ನು ಇಲ್ಲಿ 30 ಕಿ.ಮೀ.ಗೆ ಮಿತಿಗೊಳಿಸಲಾಗಿದ್ದು, 55 ಕಿ.ಮೀ. ದೂರವನ್ನು ಸುತ್ತಮುತ್ತ 3 ಗಂಟೆಗಳ ಅವಧಿಯಲ್ಲಿ ರೈಲು ದಾಟುತ್ತದೆ. ಪಶ್ಚಿಮಘಟ್ಟದ ರಮಣೀಯ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇದೊಂದು ಅಪೂರ್ವ ಅವಕಾಶವಾಗಿದೆ.

ವಿಸ್ಡಮ್ ರೈಲು ಮತ್ತು ಪ್ರವಾಸಿಗರ ಆಕರ್ಷಣೆ

ಪ್ರಕೃತಿ ಸೌಂದರ್ಯ ಸವಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ವಿಸ್ಡಮ್ ರೈಲು (ಗಾಜಿನ ಕಿಟಕಿಗಳಿರುವ ವಿಶೇಷ ರೈಲು) ಪರಿಚಯಿಸಿದೆ. ಈ ರೈಲು ಪ್ರತಿದಿನ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ ಬುಕ್ ಮಾಡಬೇಕಾಗುತ್ತದೆ.

ವಿದ್ಯುದ್ದೀಕರಣ ಪೂರ್ಣಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ಡಮ್ ರೈಲುಗಳ ಸಂಚಾರ ಆರಂಭಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಹೆದ್ದಾರಿಯ ಮೇಲಿನ ಒತ್ತಡ ಕಡಿಮೆ

ಈ ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಾದರೆ, ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನಗಳ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ. ಸದ್ಯ ಸರಕು ರೈಲುಗಳ ಕೊರತೆಯಿಂದ ಲಾರಿಗಳ ಸಂಚಾರ ಹೆಚ್ಚಾಗಿದ್ದು, ರೈಲು ಸಂಚಾರ ಹೆಚ್ಚಿದಂತೆ ಹೆದ್ದಾರಿಯ ಮೇಲಿನ ಒತ್ತಡವೂ ಇಳಿಕೆಯಾಗಲಿದೆ.

ತಾಲೂಕು ಪ್ರವಾಸೋದ್ಯಮಕ್ಕೆ ಉತ್ತೇಜನ

ಸುಬ್ರಹ್ಮಣ್ಯ–ಸಕಲೇಶಪುರ ನಡುವಿನ ಈ ಮಾರ್ಗದಲ್ಲಿ ದೋಣಿಗಾಲ್ ಹಾಗೂ ಎಡಕುಮೆರಿ ಎಂಬ ಎರಡು ರೈಲ್ವೆ ನಿಲ್ದಾಣಗಳಿದ್ದು, ಅವು ಅಭಿವೃದ್ಧಿ ಹಂತದಲ್ಲಿವೆ. ಈ ನಿಲ್ದಾಣಗಳು ಪೂರ್ಣವಾಗಿ ಅಭಿವೃದ್ಧಿಗೊಂಡ ಬಳಿಕ ಪ್ರವಾಸೋದ್ಯಮಕ್ಕೆ ಹೊಸ ಮೆರುಗು ಸಿಗಲಿದೆ.

ಎಡಕುಮೆರಿ ರೈಲ್ವೆ ನಿಲ್ದಾಣದಿಂದ ಹೆತ್ತೂರು ಹೋಬಳಿಗೆ ಸಂಪರ್ಕ ದೊರೆಯಲಿದ್ದು, ಅಲ್ಲಿನ ಕಾಗೆನಹರೆ, ಪಟ್ಲಬೆಟ್ಟ, ಗವಿಬೆಟ್ಟ, ಮೂಕನಮನೆ ಜಲಪಾತ, ಬಿಸಿಲೆಘಾಟ್ ಸೇರಿದಂತೆ ಹಲವು ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಈ ಮೊದಲು ಈ ತಾಣಗಳಿಗೆ ವಾಹನಗಳ ಮೂಲಕ ಮಾತ್ರ ತೆರಳಬೇಕಾಗಿತ್ತು.

ಟ್ರೆಕ್ಕಿಂಗ್ ಪ್ರಿಯರಿಗೆ ಸ್ವರ್ಗ

ಈ ರೈಲು ಮಾರ್ಗದ ಹಲವು ಪ್ರದೇಶಗಳು ಟ್ರೆಕ್ಕಿಂಗ್‌ಗೆ ಅತ್ಯುತ್ತಮವಾಗಿವೆ. ಎಡಕುಮೆರಿ ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ, ಟ್ರೆಕ್ಕಿಂಗ್ ಮಾಡುವವರ ಸಂಖ್ಯೆ ಭಾರಿಯಾಗಿ ಹೆಚ್ಚಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪಟ್ಟಣದಲ್ಲಿ ಪವರ್ ಸ್ಟೇಷನ್ ನಿರ್ಮಾಣ

55 ಕಿ.ಮೀ. ಉದ್ದದ ರೈಲ್ವೆ ಮಾರ್ಗಕ್ಕೆ ವಿದ್ಯುತ್ ಪೂರೈಕೆ ನೀಡುವ ಪ್ರಮುಖ ಪವರ್ ಸ್ಟೇಷನ್‌ನ್ನು ಸಕಲೇಶಪುರ ಪಟ್ಟಣದ ಚಂಪಕನಗರ ಸಮೀಪದ ಸುಮಾರು ಒಂದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಈ ಕಾಮಗಾರಿ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

 

PREV
Read more Articles on
click me!

Recommended Stories

ಮಹತ್ವದ ರೈಲ್ವೇ ಸುದ್ದಿಗಳು: ಸಂಕ್ರಾಂತಿಗೆ ಮೈಸೂರು-ಟ್ಯುಟಿಕಾರನ್‌ ಮಧ್ಯೆ ವಿಶೇಷ ರೈಲು, ಕರಾವಳಿ ರೈಲ್ವೆಗೆ ಹೊಸ ಬೇಡಿಕೆ
ಥಣಿಸಂದ್ರ ಮನೆ ತೆರವು: ಮುಸ್ಲಿಂ-ದಲಿತರ ಮನೆಗಳನ್ನೇ ಟಾರ್ಗೆಟ್ ಮಾಡ್ತಿದೆಯೇ ಸರ್ಕಾರ? ಸಿಎಂ ವಿರುದ್ಧ ಎಸ್‌ಡಿಪಿಐ ಮಜೀದ್ ವಾಗ್ದಾಳಿ!