ರಾಮಕೃಷ್ಣ ನಗರದ ಶ್ರೀ ಶಿರಡಿಸಾಯಿನಾಥ ದೇಗುಲ ಸೇರಿದಂತೆ ನಗರದ ವಿವಿಧಡೆ ಇರುವ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ತುಮಕೂರು : ರಾಮಕೃಷ್ಣ ನಗರದ ಶ್ರೀ ಶಿರಡಿಸಾಯಿನಾಥ ದೇಗುಲ ಸೇರಿದಂತೆ ನಗರದ ವಿವಿಧಡೆ ಇರುವ ಸಾಯಿಬಾಬಾ ದೇಗುಲಗಳಲ್ಲಿ ಗುರುಪೂರ್ಣಿಮೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ರಾಮಕೃಷ್ಣ ನಗರದ ಸಾಯಿನಾಥ ಮಂದಿರದಲ್ಲಿ ಬೆಳಿಗ್ಗೆ 6 ಗಂಟೆಗೆ ಕಾಕಡ ಆರತಿ, 7 ಗಂಟೆಗೆ ಅಭಿಷೇಕ ಮತ್ತು ಅಲಂಕಾರ, 8 ಗಂಟೆಗೆ ರುದ್ರಾಭಿಷೇಕ, 10 ಗಂಟೆಗೆ 108 ಗುರುಗಳ ಅವಾಹನೆ ಪೂಜಾ, ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿ ನೆರವೇರಿತು. ಮಧ್ಯಾಹ್ನ ಭಕ್ತಾದಿಗಳಿಗಾಗಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
undefined
ರಾಮ ಕೃಷ್ಣನಗರದ ಸಾಯಿನಾಥ ಮಂದಿರದಲ್ಲಿ 108 ಗುರುಗಳ ಅವಾಹನೆ ಪೂಜೆ ನೆರವೇರಿಸಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಮಾತನಾಡಿ, ವೇದಗಳನ್ನು ವಿಭಜನೆ ಮಾಡಿ 4 ವೇದ ಮತ್ತು 18 ಪುರಾಣಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ವೇದ ವ್ಯಾಸರಾಜರಿಗೆ ಸಲ್ಲುತ್ತದೆ. ಶಂಕರಾಚಾರ್ಯ, ಸ್ವಾಮಿ ವಿವೇಕಾನಂದರು, ಶಿರಡಿ ಬಾಬಾರವರು ಮಹಾನ್ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದವರು ಎಂದರು.
ಗುರುತ್ವಾಕರ್ಷಣೆಯನ್ನು ಕಂಡು ಹಿಡಿದ ನ್ಯೂಟನ್‌ನಗೆ ಭೂಮಿ ತಾಯಿಯೇ ಗುರುವಾಗಿ ಪರಿಣಿಮಿಸಿದಳು. ಗುರುವಿನ ಕೃಪೆ ಭಕ್ತ ಮತ್ತು ಭಗವಂತನ ನಡುವೆ ಇರುವಂತಹ ಸೇತುವೆ. ಈ ಸೇತುವೆ ಬಲಿಷ್ಠವಾದಷ್ಟುಭಗವಂತನೆಡೆಗೆ ಹೋಗುವ ಪ್ರಯಾಣಕ್ಕೆ ಸಾರ್ಥಕತೆ, ಧನ್ಯತೆ ಇರುತ್ತದೆ ಎಂದು ಹೇಳಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಮನುಷ್ಯ ವಯಸ್ಸಾದ ನಂತರ ಧಾರ್ಮಿಕತೆಯತ್ತ ವಾಲುವುದು ಬಹಳ ಉತ್ತಮ ಕಾರ್ಯ. ಈ ನಿಟ್ಟಿನಲ್ಲಿ ತಾವು ಸಹ ಸಾಯಿಬಾಬಾ ಸೇವೆ ಮಾಡುತ್ತಾ ಧಾರ್ಮಿಕತೆಯತ್ತ ಸಾಗುತ್ತಿದ್ದೇನೆ. ಪ್ರತಿಯೊಬ್ಬರೂ ಸಹ ಬದುಕಿನಲ್ಲಿ ಧಾರ್ಮಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಆಷಾಢಮಾಸದಲ್ಲಿ ಬರುವ ಬಹಳ ಪವಿತ್ರವಾದ ಗುರುಪೂರ್ಣಿಮೆಯನ್ನು ಕಳೆದ 13 ವರ್ಷದಿಂದಲೂ ನಮ್ಮ ಸಾಯಿನಾಥ ಮಂದಿರದಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮಂದಿರಕ್ಕೆ ಬಂದು ಸಾಯಿಬಾಬಾನ ದರ್ಶನ ಪಡೆಯುತ್ತಿದ್ದಾರೆ ಎಂದರು.
ಸಾಯಿಬಾಬಾ ಅವರು ಕನಸಿನಲ್ಲಿ ನನಗೆ ಬಂತು ಪ್ರೇರಣೆಯಾಗಿದ್ದರಿಂದ ದೇವಾಲಯ ನಿರ್ಮಿಸಲಾಯಿತು. ಬಾಬಾ ಹಳ್ಳಿ ಹಳ್ಳಿ ತಿರುಗಿ ಜನರ ಕಷ್ಯ ಕಾರ್ಪಣ್ಯಗಳಿಗೆ ಭಾಗಿಯಾಗುತ್ತಿದ್ದರು. ನೊಂದವರಿಗೆ ಸಾಂತ್ವನ ಹೇಳಿ, ಕಷ್ಟನಿವಾರಣೆ ಮಾಡುವಂತಹ ಕೆಲಸ ಮಾಡುತ್ತಿದ್ದರು. ಬಾಬಾ ಹೋದ ಹಳ್ಳಿಗಳಲೆಲ್ಲಾ ಸಸಿ ನೆಟ್ಟು ಬರುತ್ತಿದ್ದರು. ಹಾಗೆಯೇ ರಸ್ತೆಯ ಎರಡು ಬದಿಗಳಲ್ಲಿ ಸಸಿಗಳನ್ನು ನೆಡುವಂತೆ ಕರೆ ನೀಡುತ್ತಿದ್ದರು. ಅದರಂತೆ ರಸ್ತೆಯ ಎರಡು ಬದಿಗಳಲ್ಲಿ ಮರದ ಸಾಲುಗಳನ್ನು ನಾವು ನೋಡಬಹುದಾಗಿದೆ. ತುಮಕೂರು ಜಿಲ್ಲೆ ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಯವರ ತಪೋಭೂಮಿ. ಹೀಗಾಗಿ ಜಗತ್ತಿನಾದ್ಯಂತ ಸಿದ್ಧಗಂಗಾ ಮಠದ ನೆರಳಲ್ಲಿರುವ ತುಮಕೂರು ಹೆಸರುವಾಸಿಯಾಗಿದೆ ಎಂದರು.
ರಾಮಕೃಷ್ಣ ನಗರದ ಸಾಯಿನಾಥ ಮಂದಿರದಲ್ಲಿ ಸಾಹಿತಿ ಕವಿತಾಕೃಷ್ಣ, ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಗುರುಸಿದ್ದಪ್ಪ, ಎಂ.ಪಿ.ರಾಜಶೇಖರ್, ಹೊನ್ನೇಶ್‌ಕುಮಾರ್, ಉಮಾಶಂಕರ್, ಲಕ್ಷ್ಮಣ್ ಮತ್ತಿತರರು ಪಾಲ್ಗೊಂಡು ಶ್ರೀಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.