ಕೆಲಸ ಮಾಡಿದ್ದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ. ಆದರೆ ಜನ ಕಡೆಗಣಿಸಿದ್ದಾರೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಬೇಸರ ಹೊರಹಾಕಿದ್ದಾರೆ.
ತುಮಕೂರು : ಕೆಲಸ ಮಾಡಿದ್ದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ. ಆದರೆ ಜನ ಕಡೆಗಣಿಸಿದ್ದಾರೆ ಎಂದು ಮಾಜಿ ಸಚಿವ ಮಾಧುಸ್ವಾಮಿ ಬೇಸರ ಹೊರಹಾಕಿದ್ದಾರೆ.
ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಕೆಲಸ ಮಾಡಿದಕ್ಕೆ ಪ್ರತಿಫಲ ಸಿಗದೇ ಇರೋದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತವಲ್ಲ , ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ನಾಯಕರು ಸೋತಿದ್ದಾರೆ ಎಂದರು.
ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸ ಅನಿಸಲೇ ಇಲ್ಲ. ಅವರು ಕೊಡುವ ಅಕ್ಕಿ, ಅವರು ಕೊಡುವ ದುಡ್ಡೇ ಶ್ರೇಷ್ಠ ಅನಿಸಿತು. ಅವರ ಉಚಿತ ಭಾಗ್ಯದ ಮುಂದೆ ನಮ್ಮ ಎಲ್ಲಾ ಕೆಲಸ ಕೊಚ್ಚಿಕೊಂಡು ಹೋಯಿತು ಎಂದ ಅವರು ನಾವು ಯಾವ ನೀರು ಕುಡಿದಿದ್ದೀವಿ, ಯಾವ ರಸ್ತೆಯಲ್ಲಿ ಓಡಾಡುತ್ತಿದ್ದೀವಿ ಅನ್ನೋದನ್ನು ಜನರು ಮರೆತರು. ಇದೇ ರೀತಿ ಉಚಿತ ಭಾಗ್ಯ ಮುಂದುವರೆದರೆ ಮುಂದೆ ಚುನಾವಣೆ ಮಾಡೋದು ತುಂಬಾ ಕಷ್ಟವಾಗುತ್ತದೆ. ತೆರಿಗೆದಾರರ ದುಡ್ಡನ್ನು ನಮಗೆ ಇಷ್ಟಬಂದ ಹಾಗೆ ಮನೆಯಲ್ಲಿ ಕುಂತವರಿಗೆ ಇಷ್ಟಬಂದ ಹಾಗೆ ಹಂಚುತ್ತೇನೆ ಎಂದರೆ ರಾಜ್ಯದ ಪರಿಸ್ಥಿತಿ ಏನಾಗಬೇಡ ಎಂದರು.
ಆಹಾರ ಭದ್ರತಾ ಕಾಯಿದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150-200 ಗ್ರಾಂ ಅಕ್ಕಿ ಸಾಕು ಎಂದು ವೈಜ್ಞಾನಿಕವಾಗಿ ಅಂದಾಜಿಸಲಾಗಿದೆ. ಹಾಗಾಗಿ ಹಾಗಾಗಿ ತಿಂಗಳಿಗೆ 5 ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ನಮ್ಮಲ್ಲಿ ದಾಸ್ತಾನು ಇರುವ ಅಕ್ಕಿ, ಬರಗಾಲ, ಅತಿವೃಷ್ಟಿಸಂಕಷ್ಟಕಾಲದಲ್ಲಿ ಕೊಡಲು. ನಮ್ಮಲ್ಲಿ ಅಕ್ಕಿ ಇದೆ ಎಂದೇಳಿ ಬೇಕಾಬಿಟ್ಟಿಹಂಚೋಕಾಗುತ್ತಾ ಎಂದ ಅವರು ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಮೋದಿ ಅಕ್ಕಿ ಕೊಟ್ಟೆಕೊಡುತ್ತಾರೆ ಎಂದರು.
ಚುನಾವಣೆ ಬಳಿಕ ಸರ್ಕಾರ ಪತನ
ಚಿಕ್ಕನಾಯಕನಹಳ್ಳಿ : ನಾನು ಬಿಜೆಪಿ ತೊರೆದು, ಕಾಂಗ್ರೆಸ್ ಸೇರುತ್ತೇನೆಂಬುದು ಸುಳ್ಳು. ಇಂತಹ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಕಾರ್ಯಕರ್ತರಿಗೆ ಮಾಜಿ ಸಚಿವ ಜಿ.ಸಿ.ಮಾಧುಸ್ವಾಮಿ ತಿಳಿಸಿದರು. ನವೋದಯ ಪದವಿ ಕಾಲೇಜು ಆವರಣದಲ್ಲಿ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಸಿ ಮಾತನಾಡಿದ ಅವರು ಬಿಜೆಪಿ ಪಕ್ಷ ಸಾಮಾನ್ಯ ಕಾರ್ಯಕರ್ತನಾದ ನನಗೆ ಎಲ್ಲಾ ರೀತಿಯ ಮಂತ್ರಿ ಪದವಿ, ಗೌರವ ನೀಡಿದ್ದು, ನನ್ನನ್ನು ಅತ್ಯಂತ ಗೌರವದಿಂದ ನಡೆಸಿಕೊಂಡಿದೆ.
ಅಂತಹ ಪಕ್ಷವನ್ನು ತೊರೆದು ನಾನು ಪಕ್ಷಕ್ಕೆ ದ್ರೋ ಹ ಮಾಡುವುದಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಭವಿಷ್ಯವಿಲ್ಲ . ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರಕ್ಕಾಗಿ ಮುಸುಕಿನ ಗುದ್ದಾಟ ನಡೆಯುತ್ತಿದ್ದು, ಹೆಚ್ಚುಕಾಲ ಸರ್ಕಾರ ಅಸ್ತಿತ್ವದಲ್ಲಿರುವುದಿಲ್ಲ. ಉಭಯ ನಾಯಕರ ನಡುವೆ ಅಧಿಕಾರ ಹಂಚಿಕೆಯ ಒಳ ಜಗಳ ನಡೆಯುತ್ತಿದ್ದು, ಲೋಕಸಭಾ ಚುನಾವಣೆಯ ನಂತರ ಈ ಸರ್ಕಾರ ಪತನಗೊಳ್ಳುತ್ತದೆ ಎಂದರು.
ಬಿಜೆಪಿ - ಕಾಂಗ್ರೆಸ್ ಕದನ
ಬೆಂಗಳೂರು (ಜು.3) ಸೋಮವಾರದಿಂದ ವಿಧಾನಮಂಡಲದ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರ್ಕಾರದ ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರತಿಪಕ್ಷ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ‘ಜಂಗೀ ಕುಸ್ತಿ’ ನಡೆಯುವ ಸಾಧ್ಯತೆಯಿದೆ.
ಮತಾಂತರ ನಿಷೇಧ ಹಾಗೂ ಗೋಹತ್ಯೆ ನಿಷೇಧ, ಎಪಿಎಂಸಿ ಕಾಯ್ದೆಯಂತಹ ವಿವಾದಿತ ಕಾಯಿದೆ ರದ್ದುಗೊಳಿಸಲು ತಿದ್ದುಪಡಿ ವಿಧೇಯಕಗಳ ಮಂಡನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅದಕ್ಕೆ ಪ್ರತಿಯಾಗಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿನ ಲೋಪ ಸೇರಿದಂತೆ ವಿವಿಧ ವಿಚಾರ ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಮುಗಿ ಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಅದಕ್ಕೆ ಆಡಳಿತ ಪಕ್ಷ ತಿರುಗೇಟು ನೀಡಲು ತಯಾರಾಗಿದೆ. ಹೀಗಾಗಿ ಹತ್ತು ದಿನಗಳ ಸದನದಲ್ಲಿ ‘ಗ್ಯಾರಂಟಿ ಕದನ’ ಖಚಿತ ಎಂಬಂತಾಗಿದೆ