ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಡ್ಕ ಗ್ರಾಮದ ಹಲವು ಕುಟುಂಬಗಳು ಪಯಶ್ವಿನಿ ನದಿಯಲ್ಲಿ ಮುಳುಗೆದ್ದು ಬದುಕು ಸಾಗಿಸುತ್ತಿವೆ.
ಕೊಡಗು (ಜು.03): ಕೊಡಗು ಜಿಲ್ಲೆ ಹೊರಗಿನವರಿಗೆ ಅತ್ಯಂತ ಸುಂದರ ಮತ್ತು ಸಮೃದ್ಧ ಜಿಲ್ಲೆ ಎನ್ನುವಂತೆ ಕಾಣುತ್ತದೆ. ಆದರೆ ಕೊಡಗಿನ ಗ್ರಾಮೀಣ ಭಾಗಗಳಿಗೆ ಹೋಗಿ ನೋಡಿದರೆ ಕೆಲವೆಡೆ ಅತ್ಯಂತ ಶೋಚನೀಯ ಬದುಕು ಇರುವುದು ಬಿಚ್ಚಿಕೊಳ್ಳುತ್ತದೆ.
ಹೌದು ಮಡಿಕೇರಿ ತಾಲ್ಲೂಕಿನ ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಡಡ್ಕ ಗ್ರಾಮದ ಹಲವು ಕುಟುಂಬಗಳು ಪಯಶ್ವಿನಿ ನದಿಯಲ್ಲಿ ಮುಳುಗೆದ್ದು ಬದುಕು ಸಾಗಿಸುತ್ತಿವೆ. ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಪಕ್ಕದಲ್ಲಿಯೇ ಪಯಶ್ವನಿ ನದಿ ಹರಿಯುತ್ತಿದ್ದು, ಈ ನದಿಯನ್ನು ದಾಟಿ ಬಂಡಡ್ಕ ಗ್ರಾಮಕ್ಕೆ ಜನರು ತಲುಪಬೇಕು. ವಿಪರ್ಯಾಸವೆಂದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಂದಿಗೂ ಗ್ರಾಮಕ್ಕೆ ರಸ್ತೆಯೇ ಇಲ್ಲ. ಹೀಗಾಗಿ, ಹೀಗೆ ಧುಮ್ಮಿಕ್ಕಿ ಭೋರ್ಗರೆದು ಹರಿಯುವ ಪಯಶ್ವಿನಿ ನದಿಯ ನೀರಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿಯೇ ಹಗ್ಗವೊಂದನ್ನು ಹಿಡಿದು ಜನರು ನದಿ ದಾಟಿ ಗ್ರಾಮದಿಂದ ಹೊರಗೆ ಬರಬೇಕಾಗಿದೆ.
undefined
ಅವಿವಾಹಿತರಿಗೆ ಕಂಕಣ ಭಾಗ್ಯ ಕರುಣಿಸುವ ಚಾಮರಾಜೇಶ್ವರ ಜಾತ್ರೆ
ಕೊಡಗಿನಲ್ಲಿ ಮಳೆಗಾಲ ಆರಂಭವಾಗಿದ್ದು ಪಯಶ್ವಿನಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಆದರೂ ಜನರು ತಮ್ಮ ಪ್ರಾಣವನ್ನು ಲೆಕ್ಕಿಸಿದೆ ಸೊಂಟದುದ್ದದ, ರಭಸವಾಗಿ ಹರಿಯುತ್ತಿರುವ ಹೊಳೆಯ ನೀರನ್ನು ದಾಟಬೇಕಾಗಿದೆ. ಬೇಸಿಗೆಯಲ್ಲೇನೋ ಕಡಿಮೆ ನೀರು ಇರುವುದರಿಂದ ಜನರು ಭಯವಿಲ್ಲದೆ ಓಡಾಡುತ್ತಾರೆ. ಆದರೆ ಮಳೆಗಾಲ ಆರಂಭವಾಯಿತ್ತೆಂದರೆ ಆರು ತಿಂಗಳು ಕಾಲ ಇಂತಹದ್ದೇ ಅಪಾಯಕಾರಿ ಸ್ಥಿತಿಯಲ್ಲಿ ಪ್ರಾಣವನ್ನು ಕೈಯಲ್ಲಿಡಿದುಕೊಂಡು ಓಡಾಡಬೇಕು.
ಇದುವರೆಗೆ ಮೂರು ವರ್ಷಕ್ಕೊಮ್ಮೆಯೋ ಇಲ್ಲ ನಾಲ್ಕು ವರ್ಷಕ್ಕೊಮ್ಮೆಯೋ ಪಂಚಾಯಿತಿಯಿಂದ ಕಾಲು ಸಂಕವನ್ನು ಮಾಡಿಕೊಡಲಾಗುತ್ತಿತ್ತಂತೆ. ಆದರೆ ಈ ವರ್ಷ ಕಾಲು ಸಂಕವೂ ಇಲ್ಲ. ನಾಲ್ಕೈದು ವರ್ಷಗಳ ಹಿಂದೆ ಮಾಡಿದ್ದ ಕಾಲು ಸಂಕ ಮುರಿದು ಹೋಗಿದ್ದು, ಅದರ ಮೇಲೆ ನಡೆದರೆ ಕಾಲು ಸಂಕ ತುಂಡಾಗಿ ನದಿಗೆ ಬೀಳುವ ಆತಂಕವಿದೆ. ಹೀಗಾಗಿ ಜನರು ಬೇರೆ ದಾರಿಯಿಲ್ಲದೆ ತಮ್ಮ ಪುಟ್ಟ ಕಂದಮ್ಮಗಳನ್ನು ಹೊತ್ತುಕೊಂಡು, ಅಪಾಯಕಾರಿ ಸ್ಥಿತಿಯಲ್ಲಿ ನದಿಯನ್ನು ದಾಟಬೇಕಾಗಿದೆ.
ಹೀಗೆ ನದಿ ದಾಟುವ ಸಂದರ್ಭದಲ್ಲಿ ಸಣ್ಣ ಎಚ್ಚರ ತಪ್ಪಿದರೂ ನದಿಯಲ್ಲಿ ತೇಲಿ ಹೋಗಬೇಕಾದ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಇದೆ. ಐದೇ ಕುಟುಂಬಗಳಿರುವ ಈ ಗ್ರಾಮದಲ್ಲಿ ಮೂರು ಕುಟುಂಬಗಳಲ್ಲಿ ತೀರಾ ವಯಸ್ಸಾದ ವೃದ್ಧರಿದ್ದಾರೆ. ಅವರನ್ನು ಗ್ರಾಮದಿಂದ ಹೊರಗೆ ಕರೆದುಕೊಂಡು ಹೋಗುವುದು ಅತ್ಯಂತ ಸವಾಲಾಗಿದೆ. ಮಳೆ ತೀವ್ರಗೊಂಡಿತ್ತೆಂದರೆ ನದಿಯಲ್ಲಿ ಅಪಾರ ಪ್ರಮಾಣದ ನೀರು ಅತ್ಯಂತ ರಭಸವಾಗಿ ಹರಿಯುವುದರಿಂದ ಕನಿಷ್ಠ ಒಂದೆರಡು ತಿಂಗಳ ಕಾಲ ಜನರು ಗ್ರಾಮ ಬಿಟ್ಟು ಎಲ್ಲಿಯೂ ಹೊರ ಹೋಗುವಂತಿಲ್ಲ.
ಜುಲೈ 18ರಿಂದ ಸಿಇಟಿ ದಾಖಲಾತಿ ಪರಿಶೀಲನೆ: ಈ ದಾಖಲೆ ತರುವುದು ಕಡ್ಡಾಯ
ಒಂದು ವೇಳೆ ಯಾರಿಗಾದರೂ ಅನಾರೋಗ್ಯ ಕಾಡಿದರೆ, ಇಲ್ಲ ಆಹಾರ ಪದಾರ್ಥಗಳನ್ನು ತರಬೇಕಾಗಿ ಗ್ರಾಮದಿಂದ ಹೊರಗೆ ಹೋಗಬೇಕಾದರೆ ಆನೆ, ಚಿರತೆಗಳಿರುವ ದಟ್ಟಾರಣ್ಯ ಪ್ರದೇಶದಲ್ಲಿ ಬರೋಬ್ಬರಿ 2.5 ಕಿಲೋಮೀಟರ್ ನಡೆದು ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಬಳಿಕ ಕೊಯನಾಡಿನಲ್ಲಿರುವ ಕಿಂಡಿ ಅಣೆಕಟ್ಟಿನ ಮೇಲ್ಭಾಗದಿಂದ ರಾಷ್ಟ್ರೀಯ ಹೆದ್ದಾರಿ 275 ಕ್ಕೆ ತಲುಪಬೇಕಾಗಿದೆ. ಇಷ್ಟು ವರ್ಷಗಳಿಂದ ಇಲ್ಲಿಗೆ ಸೇತುವೆ ಮಾಡಿಕೊಡುವಂತೆ ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಶಾಸಕರು, ಸಚಿವರಿಗೆ ಮನವಿ ಮಾಡಿದರೂ ಯಾರೂ ಗಮನಹರಿಸಿಲ್ಲ ಎಂದು ಜನಪ್ರತಿನಿಧಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರಸ್ತೆಯಷ್ಟೇ ಅಲ್ಲ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಗ್ರಾಮಕ್ಕೆ ಇಂದಿಗೂ ವಿದ್ಯುತ್ ಸಂಪರ್ಕವನ್ನು ಕೊಟ್ಟಿಲ್ಲ. ಇಂದಿಗೂ ಈ ಕುಟುಂಬಗಳು ದೀಪದ ಬೆಳಕಿನಲ್ಲಿ ಬದುಕು ದೂಡುತ್ತಿವೆ ಎನ್ನುವುದು ಅಚ್ಚರಿಯ ಸಂಗತಿ. ಇನ್ನಾದರೂ ಗ್ರಾಮಕ್ಕೆ ರಸ್ತೆ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಿ ಎನ್ನುವುದು ಸುವರ್ಣ ನ್ಯೂಸ್ ನ ಆಗ್ರಹವಾಗಿದೆ.