ಶಿವಮೊಗ್ಗ ಜಿಲ್ಲೆಯ ಸಾಗರದ ಮೆಸ್ಕಾಂ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಚೇರಿಯನ್ನು ನಗರಸಭೆ ವಶಕ್ಕೆ ಪಡೆದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಾಗರ(ಜು.02): ಓರ್ವ ಲೈನ್‌ಮ್ಯಾನ್‌ಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬುಧವಾರ ಮೆಸ್ಕಾಂ ಕಚೇರಿ ನಗರಸಭೆ ವಶಕ್ಕೆ ಪಡೆಯಲಾಗಿದೆ.
ಮೆಸ್ಕಾಂ ಸಿಬ್ಬಂದಿ ಸ್ನೇಹಿತನೊಬ್ಬ ಈಚೆಗೆ ಮಹಾರಾಷ್ಟ್ರದಿಂದ ಬಂದಿದ್ದನು. ಇಬ್ಬರೂ ಒಟ್ಟಿಗೆ ತಿರುಗಾಡಿದ್ದರು ಎನ್ನಲಾಗಿದೆ. ಮೊದಲ ಪರೀಕ್ಷೆ ನೆಗಟಿವ್ ಬಂದಿತ್ತು. ಆದರೆ ಸೋಮವಾರದ ತಪಾಸಣೆಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮೆಸ್ಕಾಂ ಕಚೇರಿ ನಗರಸಭೆ ವಶಕ್ಕೆ ಪಡೆದು ಜಿಲ್ಲಾಧಿಕಾರಿಗೆ ಮಾಹಿತಿ ನೀಡಲಾಗಿದೆ.
ಬುಧವಾರ ನಗರಸಭೆ ವತಿಯಿಂದ ಮೆಸ್ಕಾಂ ಕಚೇರಿಗೆ ಔಷಧಿ ಸಿಂಪಡಣೆ ಮಾಡಲಾಗಿದೆ. ಅಕ್ಕಪಕ್ಕದ ರಸ್ತೆಗಳಿಗೆ, ವಸತಿಗಹದ ಭಾಗಕ್ಕೆ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಸಮೀಪದ ಕೆಲವು ಅಂಗಡಿ ಮಾಲೀಕರು ಸ್ವಯಂ ಬಂದ್ ಮಾಡಿದ್ದಾರೆ. ಈ ನಡುವೆ ಪಟ್ಟಣದ ಪ್ರತಿಷ್ಠಿತ ಬ್ಯಾಂಕೊಂದರ ವ್ಯವಸ್ಥಾಪಕರು ಹೈದ್ರಾಬಾದಿನಿಂದ ಬಂದಿದ್ದರೂ ನೇರ ಬ್ಯಾಂಕ್ ಕೆಲಸಕ್ಕೆ ಹಾಜರಾಗಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹೋಂ ಕ್ವಾರಂಟೈನ್‌ಗೆ ಸೂಚಿಸಿದ್ದಾರೆ.
ಶಿವಮೊಗ್ಗದಲ್ಲಿ 175ರ ಗಡಿದಾಡಿದ ಕೊರೋನಾ ಸೋಂಕಿತರ ಸಂಖ್ಯೆ..!
ಗಾಳಿಸುದ್ದಿಗೆ ಕಿವಿಗೊಡಬೇಡಿ : ಪತ್ರಿಕೆಯೊಂದಿಗೆ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಮೋಹನ್, ಮೆಸ್ಕಾಂ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವುದು ನಿಜ. ಅಲ್ಲದೆ ಪಟ್ಟಣದ ಎಸ್.ಎನ್.ನಗರ ಭಾಗದಲ್ಲಿ ಸೋಂಕು ಕಂಡುಬಂದಿದೆ ಎಂದು ಸುದ್ದಿ ಹರಡುತ್ತಿದೆ. ಇದು ಸುಳ್ಳು. ಜನರು ಯಾವುದೇ ಗಾಳಿಸುದ್ದಿಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.