17ರಂದು ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರೊಂದಿಗೆ ಸುರೇಶ್‌ ಕುಮಾರ್ ಮಹತ್ವದ ಸಭೆ

By Kannadaprabha NewsFirst Published Jul 11, 2020, 10:04 AM IST
Highlights

ಆನ್‌ಲೈನ್‌ ಶಿಕ್ಷಣದ ಕುರಿತು ಸಾಕಷ್ಟುದೂರುಗಳ ಜತೆಗೆ ಪೋಷಕರಲ್ಲಿ ಗೊಂದಲಗಳಿದ್ದು, ಹೀಗಾಗಿ ಆನ್‌ಲೈನ್‌ ಶಿಕ್ಷಣದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರ ಜತೆಗೆ ಜು.17ರಂದು ಸಭೆ ನಡೆಸುವುದಾಗಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಬಂಟ್ವಾಳ(ಜು.11): ಆನ್‌ಲೈನ್‌ ಶಿಕ್ಷಣದ ಕುರಿತು ಸಾಕಷ್ಟುದೂರುಗಳ ಜತೆಗೆ ಪೋಷಕರಲ್ಲಿ ಗೊಂದಲಗಳಿದ್ದು, ಹೀಗಾಗಿ ಆನ್‌ಲೈನ್‌ ಶಿಕ್ಷಣದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರ ಜತೆಗೆ ಜು.17ರಂದು ಸಭೆ ನಡೆಸುವುದಾಗಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಶಸ್ವಿಯಾಗಿ ನಡೆದ ಹಿನ್ನೆಲೆಯಲ್ಲಿ ಶುಕ್ರವಾರ ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ರಾಜ್ಯ ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ದಂಪತಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

 

ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್‌ ಶಿಕ್ಷಣ ಅಗತ್ಯವಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಬಳಿಕ ಕೇಂದ್ರ ಸರ್ಕಾರ ಒಂದಷ್ಟುಮಾನದಂಡಗಳನ್ನು ಪ್ರಕಟಿಸಿದ್ದು, ಆದರ ಆಧಾರದಲ್ಲಿ ಮಕ್ಕಳಿಗೆ ಒತ್ತಡ ಆಗದಂತೆ ಜೂನ್‌ 27ಕ್ಕೆ ನಾವು 2ನೇ ಆದೇಶವನ್ನು ನೀಡಿದ್ದೆವು. ಆದರೆ ಹೈಕೋರ್ಟ್‌ ನಮ್ಮ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆಯನ್ನು ನೀಡಿದ್ದು, ಆನ್‌ಲೈನ್‌ ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು ಎಂದು ತಿಳಿಸಿದ್ದಾರೆ. ಹೀಗಾಗಿ ಆ ತೀರ್ಪುನ್ನು ಅಧ್ಯಯನ ಮಾಡಲಿದ್ದೇವೆ. ಚಂದನ, ದೂರದರ್ಶನದ ಮೂಲಕ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮ ಪ್ರಸಾರವಾಗಲಿದೆ ಎಂದು ಹೇಳಿದರು.

ಜು.13ರಿಂದ ಮೌಲ್ಯಮಾಪನ: ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಡೀ ದೇಶದ ಗಮನ ಸೆಳೆದಿದ್ದು, ಜುಲೈ 13ರಿಂದ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಮೌಲ್ಯಮಾಪನ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

 

ಹಲವು ಮುನ್ನೆಚ್ಚರಿಕೆಗಳೊಂದಿಗೆ ಮೌಲ್ಯಮಾಪನ ಕೇಂದ್ರಗಳನ್ನು ಸುರಕ್ಷಾ ಕೇಂದ್ರಗಳನ್ನಾಗಿಸಿದ್ದೇವೆ. ಮುಂದಿನ ವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ಬಹುತೇಕ ಆಗಸ್ವ್‌ ಎರಡನೇ ವಾರದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ನೀಡಲಿದ್ದೇವೆ. ಜತೆಗೆ ಮುಂದೆ ಪರಿಸ್ಥಿತಿ ತಿಳಿಯಾದ ಬಳಿಕ ಪೋಷಕರ ಅಭಿಪ್ರಾಯ ಪಡೆದು ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನ ಕೈಗೊಳ್ಳಲಿದ್ದೇವೆ. ಶಾಲೆಗಳ ಶುಲ್ಕ ಏರಿಕೆ ಮಾಡದಂತೆಯೂ ಖಾಸಗಿ ಶಾಲೆಗಳಿಗೆ ಸುತ್ತೋಲೆ ನೀಡಿದ್ದೇವೆ. ಈ ಕುರಿತು ದೂರುಗಳಿದ್ದರೆ ಸಹಾಯವಾಣಿ ಮೂಲಕ ದೂರನ್ನು ನೀಡಬಹುದು ಎಂದರು.

ಖಾಸಗಿ ಶಾಲಾ ಶಿಕ್ಷಕರಿಗೆ ನೆರವು: ಖಾಸಗಿ ಶಾಲೆಗಳ ಶಿಕ್ಷಕರಿಗೆ ಸಂಬಳವಿಲ್ಲದೆ ಅವರ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವ ದೃಷ್ಟಿಯಿಂದ ರಾಜ್ಯದ ಪ್ರೌಢ ಹಾಗೂ ಪ್ರಾಥಮಿಕ ಶಿಕ್ಷಕರ ಸಂಘಗಳ ಅಧ್ಯಕ್ಷರ ಜತೆ ಮಾತುಕತೆ ನಡೆಸಿದ್ದು, ಅವರು ತಮ್ಮ ಸಂಬಳದಿಂದ ನೆರವು ನೀಡುವುದಕ್ಕೆ ಪೂರಕ ಸ್ಪಂದನೆ ವ್ಯಕ್ತಪಡಿಸಿದ್ದಾರೆ. ನಾವು ಕೂಡ ಅದಕ್ಕೆ ಒಂದಷ್ಟುಮೊತ್ತವನ್ನು ಸೇರಿಸಿ ನೆರವನ್ನು ನೀಡಲಿದ್ದೇವೆ ಎಂದರು.

click me!