‘ಬೇರು’ ಬಿಟ್ಟ ಬಿಡಿಎ ನೌಕರರ ವರ್ಗಕ್ಕೆ ಕಾಯ್ದೆಗೆ ತಿದ್ದುಪಡಿ

By Kannadaprabha News  |  First Published Jan 31, 2021, 7:09 AM IST

ಇಲ್ಲೇ ನೇಮಕ ಇಲ್ಲೇ ನಿವೃತ್ತಿ| ಕೆಲವರಿಂದ ಭ್ರಷ್ಟಾಚಾರ: ಎಸ್‌.ಆರ್‌.ವಿಶ್ವನಾಥ್‌| ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ| ಬಿಡಿಎ ಕಾಯ್ದೆ 1976ರ ಕಲಂ 50ಕ್ಕೆ ಉಪ ಕಲಂ 3ಅನ್ನು ಹೊಸದಾಗಿ ಸೇರ್ಪಡೆ ಮಾಡಲು ನಿರ್ಧಾರ| 
 


ಬೆಂಗಳೂರು(ಜ.31): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಅಧಿಕಾರಿ, ಸಿಬ್ಬಂದಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲು ಕಾಯ್ದೆಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಆಡಳಿತ ಮಂಡಳಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದ್ದಾರೆ.

ಶನಿವಾರ ಬಿಡಿಎ ಕೇಂದ್ರ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೆಲವು ಅಧಿಕಾರಿ ಮತ್ತು ಸಿಬ್ಬಂದಿ ಬಿಡಿಎನಲ್ಲಿ ನೇಮಕಾತಿಯಾಗಿ ಇಲ್ಲಿಯೇ ನಿವೃತ್ತಿ ಹೊಂದುತ್ತಿದ್ದಾರೆ. ಇವರಲ್ಲಿ ಕೆಲವರು ಹಲವಾರು ಅಕ್ರಮಗಳನ್ನು ಎಸಗುವ ಮೂಲಕ ಸಂಸ್ಥೆಗೆ ಕಪ್ಪುಚುಕ್ಕೆಯಾಗಿದ್ದಾರೆ. ಇದರಿಂದ ಸಂಸ್ಥೆಗೆ ನಷ್ಟವಾಗುತ್ತಿದೆ. ಈ ಎಲ್ಲ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ತಿಳಿಸಿದರು.

Tap to resize

Latest Videos

ಬಿಡಿಎನಲ್ಲಿ ಹಲವು ವರ್ಷಗಳಿಂದ ಇರುವ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಬೇರೆ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಲು ಬಿಡಿಎ ಕಾಯ್ದೆಯಲ್ಲಿ ಇದುವರೆಗೂ ಅವಕಾಶ ಇರಲಿಲ್ಲ. ಆದ್ದರಿಂದ ವರ್ಗಾವಣೆಗೆ ಅನುಕೂಲವಾಗುವಂತೆ ಬಿಡಿಎ ಕಾಯ್ದೆ 1976ರ ಕಲಂ 50ಕ್ಕೆ ಉಪ ಕಲಂ 3ಅನ್ನು ಹೊಸದಾಗಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ. ಬಜೆಟ್‌ ಅಧಿವೇಶನದಲ್ಲಿ ಈ ತಿದ್ದುಪಡಿ ಕಾಯ್ದೆಗೆ ವಿಧಾನಮಂಡಲದಲ್ಲಿ ಅಂಗೀಕಾರ ಪಡೆಯಲಾಗುವುದು. ಗರಿಷ್ಠ ಮೂರು ವರ್ಷ ಬಿಡಿಎನಲ್ಲಿ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಈ ತಿದ್ದುಪಡಿ ಅವಕಾಶ ಕಲ್ಪಿಸಲಿದೆ ಎಂದು ಹೇಳಿದರು.

ವಾಣಿಜ್ಯ ಮಳಿಗೆಯಿಂದ ಬಿಡಿಎಗೆ 40 ಕೋಟಿ ರು. ಬಾಡಿಗೆ ಬಾಕಿ

ನಾಡಪ್ರಭು ಕೆಂಪೇಗೌಡ ಬಡಾವಣೆಗೆ ರಸ್ತೆ, ಒಳಚರಂಡಿ, ವಿದ್ಯುತ್‌, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲ ಸೌಕರ್ಯ ಒದಗಿಸಲು 650 ಕೋಟಿ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈವರೆಗೆ ಈ ಬಡಾವಣೆಯಲ್ಲಿ ಆಗಿರುವ ಕಾಮಗಾರಿಗಳ ಕುರಿತು ಒಂದು ತಿಂಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬನಶಂಕರಿ 6ನೇ ಹಂತಕ್ಕೆ ಕಾವೇರಿ ನೀರಿಗಾಗಿ ಹಣ

ಬನಶಂಕರಿ 6ನೇ ಹಂತದ ಬಡಾವಣೆಗೆ ಕಾವೇರಿ ನೀರು ಪೂರೈಸುವುದು ವಿಳಂಬವಾಗಿದೆ. ಈ ಕುರಿತು ಅಲ್ಲಿನ ನಾಗರಿಕರು ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಕುಡಿಯುವ ನೀರು ಪೂರೈಸಲು .168 ಕೋಟಿ ವೆಚ್ಚವಾಗಲಿದ್ದು, ಈ ಪೈಕಿ ಬಿಡಿಎ ಮೂರನೇ ಒಂದು ಭಾಗದಷ್ಟು ಹಣವನ್ನು ಜಲಮಂಡಳಿಗೆ ನೀಡಲಿದೆ. ತಕ್ಷಣವೇ ನೀರು ಪೂರೈಕೆ ಕಾಮಗಾರಿಯನ್ನು ಕೈ ಗೊಳ್ಳುವಂತೆ ಜಲಮಂಡಳಿಗೆ ಸೂಚನೆ ನೀಡಲಾಗಿದೆ ಎಂದು ವಿಶ್ವನಾಥ್‌ ಹೇಳಿದರು.
 

click me!