ಪ್ರಕರಣ ಗಮನಕ್ಕೆ ಬಂದರೂ 2 ದಿನ ತಡವಾಗಿ ದೂರು ದಾಖಲು| ಎಎಸ್ಪಿ ಶ್ರುತಿ ನೇತೃತ್ವದಲ್ಲಿ ಪ್ರಕರಣ ತನಿಖೆಗೆ ಐಜಿಪಿ ಸೂಚನೆ| ಶಿಶು ಅಭಿವೃದ್ಧಿ ಇಲಾಖಾಧಿಕಾರಿ ಗಮನಕ್ಕೆ ತಾರದೆ ಉದಾಸೀನತೆ ತೋರಿದ್ದ ತನಿಖಾಧಿಕಾರಿ ಸಿದ್ದರಾಮಯ್ಯ|
ಚಿಕ್ಕಮಗಳೂರು(ಫೆ.06): ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಶೃಂಗೇರಿ ತಾಲೂಕಿನಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ತನಿಖಾಧಿಕಾರಿ ಸಿದ್ದರಾಮಯ್ಯ ಅವರನ್ನು ಅಮಾನತುಗೊಳಿಸಿ ಪಶ್ಚಿಮ ವಲಯದ ಐಜಿಪಿ ದೇವ್ ಜ್ಯೋತಿ ರೇ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಪ್ರಕರಣ ನಡೆದಿರುವುದು ಗಮನಕ್ಕೆ ಬಂದರೂ ಎರಡು ದಿನ ವಿಳಂಬವಾಗಿ ದೂರು ದಾಖಲಿಸಿಕೊಳ್ಳಲಾಗಿತ್ತು. ಈ ವಿಷಯವನ್ನು ಶೃಂಗೇರಿಯ ಶಿಶು ಅಭಿವೃದ್ಧಿ ಇಲಾಖಾಧಿಕಾರಿ ಗಮನಕ್ಕೆ ತಾರದೆ ಉದಾಸೀನತೆ ತೋರಲಾಗಿತ್ತು. ಮಾಹಿತಿ ನೀಡಿದ ಬಾಲ ನ್ಯಾಯ ಮಂಡಳಿ ಅಧೀನಕ್ಕೆ ಒಳಪಟ್ಟಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಜಿ. ಸುಬ್ರಹ್ಮಣ್ಯರನ್ನು ದೂರುದಾರರನ್ನಾಗಿ ಮಾಡಿರುವ ಜತೆಗೆ ಅವರಿಗೆ ಸುಮೊಟೊ ಕೇಸ್ ಹಾಕುವುದಾಗಿ ತನಿಖಾಧಿಕಾರಿ ಆಗಿರುವ ಶೃಂಗೇರಿ ವೃತ್ತ ನಿರೀಕ್ಷಕ ಸಿದ್ದರಾಮಯ್ಯ ಬೆದರಿಕೆ ಹಾಕಿದ್ದರು.
undefined
'ಶೃಂಗೇರಿ ಬಾಲಕಿ ರೇಪ್ ಕೇಸ್ : ಕಾಮುಕರಿಗೆ ಗಲ್ಲು ನಿಶ್ಚಿತ'
ಈ ವಿವರದೊಂದಿಗೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಶೃಂಗೇರಿ ಸಿಪಿಐ ಸಿದ್ದರಾಮಯ್ಯ ವಿರುದ್ಧ ಗುರುವಾರ ಐಜಿಪಿ ಸೇರಿ ಸಂಬಂಧಿತ ಇಲಾಖೆಗಳಿಗೆ ದೂರು ಸಲ್ಲಿಸಿದ್ದರು. ಇದರ ಆಧಾರದ ಮೇಲೆ ಸಿದ್ದರಾಮಯ್ಯರನ್ನು ಅಮಾನತುಗೊಳಿಸಿ ಐಜಿಪಿ ಆದೇಶ ಹೊರಡಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಪ್ರಕರಣ ತನಿಖೆಯನ್ನು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಶ್ರುತಿ ನೇತೃತ್ವದಲ್ಲಿ ನಡೆಸುವಂತೆ ಐಜಿಪಿ ಸೂಚಿಸಿದ್ದಾರೆ.